‘ಗ್ರಾಮ ವಾಸ್ತವ್ಯ’ದ ಮೂಲಕ ಸಿಎಂ ಹೊಸ ನಾಟಕ: ಯಡಿಯೂರಪ್ಪ ಲೇವಡಿ
ಬೆಂಗಳೂರು, ಜೂ. 3: ‘ಗ್ರಾಮ ವಾಸ್ತವ್ಯ ಕಾರ್ಯಕ್ರಮದ ಮೂಲಕ ರಾಜ್ಯದ ಮುಖ್ಯಮಂತ್ರಿ ಕುಮಾರಸ್ವಾಮಿ ಹೊಸ ನಾಟಕವನ್ನು ಆರಂಭಿಸಿದ್ದಾರೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಹಾಗೂ ಮಾಜಿ ಸಿಎಂ ಯಡಿಯೂರಪ್ಪ ಲೇವಡಿ ಮಾಡಿದ್ದಾರೆ.
ಸೋಮವಾರ ನಗರದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಕುಮಾರಸ್ವಾಮಿ ಒಂದು ವರ್ಷದಿಂದ ಫೈವ್ ಸ್ಟಾರ್ ಹೊಟೇಲ್‌ನಲ್ಲಿ ವಾಸ್ತವ್ಯ ಮಾಡಿದ್ದರು. ಹೀಗಾಗಿ ಅವರಿಗೆ ಸಾಮಾನ್ಯ ಜನರನ್ನು ಭೇಟಿ ಮಾಡಲು ಸಾಧ್ಯವಾಗಿರಲಿಲ್ಲ. ಈ ಬಗ್ಗೆ ನಾವು ಟೀಕಿಸಿದರೆ ಅವರು ತಲೆ ಕೆಡಿಸಿಕೊಂಡಿಲಿಲ್ಲ.
ಒಂದು ವರ್ಷದಿಂದ ರಾಜ್ಯದಲ್ಲಿ ಆಡಳಿತ ಯಂತ್ರ ಸಂಪೂರ್ಣ ಸ್ಥಗಿತವಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವರಾಗಲಿ, ಯಾವುದೇ ಅಧಿಕಾರಿಯಾಗಲಿ ಹಾಗೂ ಶಾಸಕರಾಗಲಿ ಬರಪೀಡಿತ ಪ್ರದೇಶಗಳಿಗೆ ತಲೆಹಾಕಿರಲಿಲ್ಲ. ಮುಖ್ಯಮಂತ್ರಿ ಮೊದಲು ಬರಪೀಡಿತ ಪ್ರದೇಶಗಳಿಗೆ ಪ್ರವಾಸ ಮಾಡಲಿ. ಜನರ ಸಂಕಷ್ಟಕ್ಕೆ ನೆರವಾಗಲಿ ಎಂದು ಬಿಎಸ್‌ವೈ ಆಗ್ರಹಿಸಿದರು.
ರಾಜ್ಯದಲ್ಲಿ ಬರ ಪೀಡಿತ ಪ್ರದೇಶಗಳಲ್ಲಿನ ಜನ-ಜಾನುವಾರುಗಳಿಗೆ ಕುಡಿಯುವ ನೀರು ಮತ್ತು ಮೇವಿನ ಕೊರತೆ ಸೃಷ್ಟಿಯಾಗಿದೆ ಎಂದ ಅವರು, ಜೂ.5ರ ನಂತರ ನಾವು ಬರ ಪೀಡಿತ ಪ್ರದೇಶಗಳಿಗೆ ಪ್ರವಾಸ ಮಾಡುತ್ತೇವೆ. ವಾಸ್ತವ ಸ್ಥಿತಿ ಪರಿಶೀಲಿಸಲಿದ್ದೇವೆ ಎಂದು ಹೇಳಿದರು.
ಮೈತ್ರಿಗೆ ಬಹುಮತ: ರಾಜ್ಯದ ಕಾಂಗ್ರೆಸ್-ಜೆಡಿಎಸ್ ಸರಕಾರಕ್ಕೆ ಬಹುಮತ ಇದೆ. ಅವರು ಎಲ್ಲಿಯವರೆಗೆ ಆಡಳಿತ ನಡೆಸುವರೋ ನಡೆಸಲಿ. ಅವರಿಗೆ ಆಡಳಿತ ನಡೆಸಲು ಆಗದಿದ್ದರೆ ಆಗ ನೋಡೋಣ ಎಂದು ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದರು.
‘ಬಿಜೆಪಿಯ ಎಲ್ಲ ಮುಖಂಡರಿಗೂ ರಾಜ್ಯದಲ್ಲಿನ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದ ಬಗ್ಗೆ ಯಾವುದೇ ಹೇಳಿಕೆ ನೀಡದಂತೆ ಸೂಚನೆ ನೀಡಲಾಗಿದೆ. ಅಲ್ಲದೆ, ಮೈತ್ರಿ ಸರಕಾರ ಬೀಳಿಸಲು ನಾವು ಯಾವುದೇ ಪ್ರಯತ್ನ ಮಾಡುವುದಿಲ್ಲ’
-ಬಿ.ಎಸ್.ಯಡಿಯೂರಪ್ಪ, ವಿಪಕ್ಷ ನಾಯಕ