×
Ad

ಸರಕಾರ ಸಂಸ್ಕೃತ ಭಾಷೆಗೆ ವಿಶೇಷ ವಿನಾಯಿತಿ ನೀಡಲಿ: ರಾಜ್ಯಪಾಲ ವಜುಭಾಯಿ ವಾಲಾ

Update: 2019-06-03 20:30 IST

ಬೆಂಗಳೂರು, ಜೂ.3: ಸಂಸ್ಕೃತ ಭಾಷೆಗಿರುವ ಸಾಹಿತ್ಯ, ಸಾಂಸ್ಕೃತಿಕ ಸಂಪತ್ತು ವಿಶ್ವದ ಯಾವುದೇ ಅನ್ಯ ಭಾಷೆಗಳಿಗಿಲ್ಲ. ಹೀಗಾಗಿ ಸಂಸ್ಕೃತ ಭಾಷೆಯನ್ನು ಜನರ ಬದುಕಿನಲ್ಲಿ ಹಾಸುಹೊಕ್ಕಾಗಿಸಲು ರಾಜ್ಯ ಸರಕಾರ ವಿಶೇಷ ವಿನಾಯಿತಿ ನೀಡಬೇಕು ಎಂದು ರಾಜ್ಯಪಾಲ ವಜುಭಾಯಿ ವಾಲಾ ತಿಳಿಸಿದರು.

ಸೋಮವಾರ ಚಾಮರಾಜಪೇಟೆಯ ಪಂಪಮಹಾಕವಿ ರಸ್ತೆಯಲ್ಲಿರುವ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಜಗತ್ತಿಗೆ ಜ್ಞಾನವನ್ನು ಕೊಟ್ಟದ್ದು ಭಾರತ. ಆ ಜ್ಞಾನದ ಭಾಷೆಯೇ ಸಂಸ್ಕೃತವಾಗಿದೆ. ದೇಶದ ಅಸ್ಮಿತೆ ಉಳಿಯಬೇಕಾದರೆ ಸಂಸ್ಕೃತ ಭಾಷೆ ಉಳಿಯಬೇಕು ಎಂದು ತಿಳಿಸಿದರು.

ದೇಶದಲ್ಲಿ ಇಂಗ್ಲಿಷ್‌ನ ಪ್ರಭಾವ ಹೆಚ್ಚಾಗಿ ಪ್ರಾಚೀನ ಭಾಷೆ ಸಂಸ್ಕೃತವು ದಿನೆ ದಿನೇ ಮರೆಯಾಗುತ್ತಿದೆ. ಸಂಸ್ಕೃತ ಭಾಷೆಯನ್ನು ಉಳಿಸದಿದ್ದರೆ ದೇಶ ವಿನಾಶದ ಹಾದಿ ಹಿಡಿಯುವುದು ಖಚಿತವಾಗಲಿದೆ. ಈ ನಿಟ್ಟಿನಲ್ಲಿ ರಾಜ್ಯ ಹಾಗೂ ಕೇಂದ್ರ ಸರಕಾರಗಳು ವಿಶೇಷ ಆದ್ಯತೆಯ ಮೇರೆಗೆ ಸಂಸ್ಕೃತ ಭಾಷೆಯ ಬೆಳವಣಿಗೆಗೆ ವಿಶೇಷ ಕಾರ್ಯಕ್ರಮಗಳು ಹಾಗೂ ವಿನಾಯಿತಿಗಳು ನೀಡಬೇಕಿದೆ ಎಂದು ಅವರು ಹೇಳಿದರು.

ಮನುಷ್ಯ ಎಷ್ಟು ವರ್ಷ ಬದುಕುತ್ತಾನೆ ಎಂಬುದು ಮುಖ್ಯವಲ್ಲ. ಎಷ್ಟು ವರ್ಷ ಹೇಗೆ ಬದುಕಿದ್ದಾನೆ ಎಂಬುದು ಮುಖ್ಯವಾಗುತ್ತದೆ. ಸ್ವಾಮಿ ವಿವೇಕಾನಂದರು ಕೇವಲ 40 ವರ್ಷಗಳ ಕಾಲವೂ ಬದುಕಲಿಲ್ಲ. ಆದರೆ, ಇಂದು ಎಲ್ಲರೂ ಅವರನ್ನು ಸ್ಮರಿಸುತ್ತಾರೆ. ಕಾರಣ ಅವರು ಶ್ರೇಷ್ಠವಾದ ಗುಣವನ್ನು ಹೊಂದಿದ್ದರು ಎಂದು ಅವರು ಹೇಳಿದರು.

ನಮ್ಮ ದೇಶದಲ್ಲಿ ಹಣವಂತರನ್ನು ಯಾರು ಪೂಜೆ ಮಾಡುವುದಿಲ್ಲ. ಗುಣವಂತರನ್ನು ಪೂಜಿಸಲಾಗುತ್ತಿದೆ. ಗುಣವಂತರು ಗುರುಸ್ಥಾನವನ್ನು ಹೊಂದಿರುತ್ತಾರೆ. ತ್ಯಾಗ, ಜ್ಞಾನಗಳ ಮಿಶ್ರಣ ಹೊಂದಿರುವವರು ಭಗವಂತನ ಸ್ವರೂಪ ಎನ್ನುವ ನಂಬಿಕೆ ನಮ್ಮಲ್ಲಿದೆ. ಅಂತಹ ಗುರುಗಳಿಗೆ ನಾವು ನಮಿಸುತ್ತೇವೆ. ಪ್ರತಿಯೊಬ್ಬರಲ್ಲೂ ಹೃದಯಲ್ಲಿ ಒಳ್ಳೆಯ ಭಾವನೆ, ಒಳ್ಳೆಯ ವಿಚಾರಗಳು ಇರಬೇಕು. ದೇಶ, ಭಾಷೆ ವಿಷಯದಲ್ಲಿ ನಮ್ಮ ಕರ್ತವ್ಯ ಏನೆಂಬುದರ ಬಗ್ಗೆ ಪ್ರತಿಯೊಬ್ಬರು ಚಿಂತಿಸಬೇಕಿದೆ ಎಂದು ಅವರು ಹೇಳಿದರು.

ಹೀರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಸಂಸ್ಕೃತ ಭಾಷೆಯಿಂದ ಭಾರತೀಯ ಸಂಸ್ಕೃತಿ, ಸಾಹಿತ್ಯ, ಸಂಸ್ಕಾರ, ವಿಜ್ಞಾನ ಎಲ್ಲವೂ ಉತ್ತುಂಗಕ್ಕೆ ಏರಿದೆ. ಸಂಸ್ಕೃತ ಉಳಿದರೆ ದೇಶ ಉಳಿಯುವುದು. ಮಠ, ಮಂದಿರಗಳಿಲ್ಲಿ ಮಾತ್ರ ಸಂಸ್ಕೃತ ಪ್ರವಚನ ಆದರೆ ಸಾಲದು. ಮನೆ ಮನೆಗಳಲ್ಲೂ ಸಂಸ್ಕೃತದ ಅಧ್ಯಯನವಾಗಬೇಕು. ಎಲ್ಲರೂ ಸಂಸ್ಕೃತವನ್ನು ಉಳಿಸಿ ಬೆಳೆಸಬೇಕಿದೆ ಎಂದು ಹೇಳಿದರು. ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಪದ್ಮಾಶೇಖರ್ ಸ್ವಾಗತ ಕೋರಿದರು. ಹೊಂಬುಜ ಜೈನ ಮಠದ ಡಾ.ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ಮತ್ತಿತರರಿದ್ದರು. 

ವಿದ್ಯಾರ್ಥಿ ಸ್ನೇಹಿಯಾಗಿಸುವ ನಿಟ್ಟಿನಲ್ಲಿ ಪ್ರತಿ ವಿಶ್ವವಿದ್ಯಾಲಯದಲ್ಲಿ ಕೌಶಲ್ಯ ತರಬೇತಿ, ಡಿಜಿಟಲ್ ಕೇಂದ್ರಗಳನ್ನು ತೆರೆಯಲಾಗುತ್ತಿದೆ. ಹಾಗೂ ವಿದ್ಯಾರ್ಥಿಗಳಿಗೆ ಪ್ಲೇಸ್‌ಮೆಂಟ್ ವ್ಯವಸ್ಥೆ ಮಾಡಲಾಗುತ್ತಿದೆ. ಕನಿಷ್ಟ 5ಹಳ್ಳಿಗಳನ್ನು ದತ್ತು ತೆಗೆದುಕೊಂಡು, ನೈರ್ಮಲ್ಯ, ಸಾಕ್ಷರತೆ, ಮಾಹಿತಿ ತಂತ್ರಜ್ಞಾನದ ಅರಿವು ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಉನ್ನತೀಕರಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವಂತೆ ಸೂಚಿಸಲಾಗಿದೆ. ವಿಶ್ವವಿದ್ಯಾಲಯದ ಪರೀಕ್ಷಾ ಪ್ರಾಧಿಕಾರವನ್ನು 2020ರ ವೇಳೆಗೆ ಸಂಪೂರ್ಣವಾಗಿ ಆನ್‌ಲೈನ್‌ಗೊಳಿಸಲಾಗುವುದು. ವಿದ್ಯಾರ್ಥಿಗಳು ಯಾವುದೆ ಮೂಲೆಯಲ್ಲಿ ಕುರಿತು ಪರೀಕ್ಷೆಯನ್ನು ಬರೆಯುವಂತಹ ವ್ಯವಸ್ಥೆಯನ್ನು ಜಾರಿಗೆ ತರುತ್ತಿದ್ದೇವೆ

-ಜಿ.ಟಿ.ದೇವೇಗೌಡ, ಉನ್ನತ ಶಿಕ್ಷಣ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News