×
Ad

ಆಟದ ಮೈದಾನದ ಉಳಿವಿಗಾಗಿ ನಡೆಯುತ್ತಿರುವ ಹೋರಾಟ 18ನೆ ದಿನಕ್ಕೆ

Update: 2019-06-03 20:42 IST

ಬೆಂಗಳೂರು, ಜೂ.3: ನಂದಿನಿ ಲೇಔಟ್‌ನ ರಾಮಕೃಷ್ಣನಗರದಲ್ಲಿನ ಆಟದ ಮೈದಾನವನ್ನು ಅನ್ಯ ಉದ್ದೇಶಕ್ಕೆ ಹಂಚಿಕೆ ಮಾಡಿರುವ ಬಿಡಿಎ ಕ್ರಮವನ್ನು ಮಕ್ಕಳ ಆಟದ ಮೈದಾನ ರಕ್ಷಣಾ ಸಮಿತಿ ವತಿಯಿಂದ ನಡೆಸುತ್ತಿರುವ ಅನಿರ್ದಿಷ್ಟಾವಧಿ ಪ್ರತಿಭಟನೆ ಸೋಮವಾರವು ಮುಂದುವರೆಯಿತು.

ಆಟದ ಮೈದಾನದ ಬಹುತೇಕ ಜಾಗವನ್ನು ಕಾನೂನು ಬಾಹಿರವಾಗಿ ಮಹಾಲಕ್ಷ್ಮಿಪುರ ಬ್ರಾಹ್ಮಣ ಸಭಾಕ್ಕೆ, ತುಮಕೂರು ಸಹಕಾರಿ ಹಾಲು ಉತ್ಪಾದಕರ ಸಂಘಕ್ಕೆ ಅಕ್ರಮವಾಗಿ ಮಾರಾಟ ಮಾಡಲಾಗಿದೆ. ಕೆಲವು ಭ್ರಷ್ಟ ಜನಪ್ರತಿನಿಧಿಗಳು, ಅಧಿಕಾರಿಗಳಿಂದಾಗಿ ಆಟದ ಮೈದಾನ ಮಕ್ಕಳಿಂದ ಕೈ ತಪ್ಪುವಂತಾಗಿದೆ. ಹೀಗಾಗಿ ಪ್ರಜ್ಞಾವಂತ ಜನಪ್ರತಿನಿಧಿಗಳು ಇದಕ್ಕೆ ಅವಕಾಶ ಮಾಡಿಕೊಡಬಾರದು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಈ ಮೈದಾನವು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿದ್ದು, 30ವರ್ಷಗಳ ಹಿಂದೆಯೆ ಬಿಬಿಎಂಪಿ ಅಧಿಕಾರಿಗಳು ಖಾಲಿ ಮೈದಾನವನ್ನು ಆಟದ ಮೈದಾನವನ್ನಾಗಿ ಪರಿವರ್ತಿಸಿ ತಡೆಗೋಡೆ ನಿರ್ಮಿಸಿದ್ದಾರೆ. ಇಲ್ಲಿ ಮಕ್ಕಳ ಆಟದ ವಸ್ತುಗಳನ್ನು ಅಳವಡಿಸಿದ್ದಾರೆ. ಸುತ್ತಲಿನ ಎಂಟು ಶಾಲೆಗಳ ಮಕ್ಕಳು ಇಲ್ಲಿ ಆಟವಾಡಲು ಬರುತ್ತಿದ್ದಾರೆ. ಆದರೆ, ಬಿಡಿಎ ನಿರ್ಧಾರದಿಂದಾಗಿ ಮಕ್ಕಳಿಗೆ ಆಟದ ಮೈದಾನ ಇಲ್ಲದಂತಾಗಿದೆ ಎಂದು ರಕ್ಷಣಾ ಸಮಿತಿಯ ಸದಸ್ಯ ಲೋಕೇಶ್ ಬಹುಜನ್ ಆರೋಪಿಸಿದರು.

ಕೆಲ ಭ್ರಷ್ಟ ರಾಜಕಾರಣಿಗಳ ಒತ್ತಡಕ್ಕೆ ಮಣಿದು ಬಿಡಿಎ ಅಧಿಕಾರಿಗಳು ಕಾನೂನು ಬಾಹಿರವಾಗಿ ಆಟದ ಮೈದಾನವನ್ನು ಇತರೆ ಸಂಸ್ಥೆಗಳಿಗೆ ಮಂಜೂರು ಮಾಡಿದ್ದಾರೆ. ಹೀಗಾಗಿ ಜನಪರವಾಗಿ ಚಿಂತಿಸುವಂತಹ ಜನಪ್ರತಿನಿಧಿಗಳು ಮಕ್ಕಳ ಹಿತಕ್ಕಾಗಿ ಈ ಆಟದ ಮೈದಾನವನ್ನು ಉಳಿಸಿಕೊಡಬೇಕೆಂದು ಅವರು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News