×
Ad

ಶೀಘ್ರ ಕಾಮಗಾರಿ ಪೂರ್ಣಗೊಳಿಸಲು ಬಿಬಿಎಂಪಿ ಮೇಯರ್ ತಾಕೀತು

Update: 2019-06-03 20:45 IST

ಬೆಂಗಳೂರು, ಜೂ.3: ಕಾಟನ್‌ಪೇಟೆ ಟೆಂಡರ್ ಶೂರ್ ಕಾಮಗಾರಿಯ ನಿಧಾನವಾಗಿ ಸಾಗುತ್ತಿದ್ದನ್ನು ಕಂಡು ಆಕ್ರೋಶ ವ್ಯಕ್ತಪಡಿಸಿದ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಕಾಮಗಾರಿ ಅತಿ ಶೀಘ್ರದಲ್ಲಿ ಮುಗಿಯಬೇಕೆಂದು ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.

ಕಾಟನ್‌ಪೇಟೆ ರಸ್ತೆಯಲ್ಲಿ 10 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಟೆಂಡರ್‌ಶೂರ್ ರಸ್ತೆ ತಪಾಸಣೆ ನಡೆಸಿದ ಬಳಿಕ ಮಾತನಾಡಿದ ಅವರು, ಅನುದಾನ ಬಿಡುಗಡೆಯಾಗಲಿಲ್ಲ ಎಂಬ ಕಾರಣಕ್ಕೆ ಕಾಮಗಾರಿ ನಿಧಾನ ಮಾಡುವುದು ಸಲ್ಲ. ಕಾಮಗಾರಿಯನ್ನು ಅತ್ಯಂತ ತ್ವರಿತವಾಗಿ ಪೂರ್ಣಗೊಳಿಸುವ ಕಡೆಗೆ ಗುತ್ತಿಗೆದಾರರು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಕಳೆದ ನಾಲ್ಕು ತಿಂಗಳ ಹಿಂದೆ ಕಾಮಗಾರಿಗೆ ಚಾಲನೆ ನೀಡಿದ್ದರೂ, ಇದುವರೆಗೂ ಪೂರ್ಣಗೊಂಡಿಲ್ಲ ಎಂದು ಇಲ್ಲಿನ ನಿವಾಸಿಗಳು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದರಿಂದ ಸ್ಥಳಕ್ಕೆ ಭೇಟಿ ನೀಡಿದ್ದೇನೆ. ಅಧಿಕಾರಿಗಳು ಜನ ಹಾಗೂ ವಾಹನ ದಟ್ಟಣೆ ಹೆಚ್ಚಿದೆ. ಆದುದರಿಂದಾಗಿ ಕಾಮಗಾರಿ ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ. ಸಬೂಬು ಹೇಳುವುದು ಬಿಟ್ಟು ಶೀಘ್ರ ಕಾಮಗಾರಿ ಮುಗಿಸುವಂತೆ ಸೂಚನೆ ನೀಡಿದ್ದೇನೆ ಎಂದು ಅವರು ತಿಳಿಸಿದರು.

ನಗರೋತ್ಥಾನ ಯೋಜನೆ ಅಡಿಯಲ್ಲಿ 1.75 ಕಿ.ಮೀ.ಉದ್ದದ ರಸ್ತೆಯನ್ನು ಟೆಂಡರ್‌ಶೂರ್ ಅಡಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಈ ಭಾಗದಲ್ಲಿ ಅಧಿಕ ಜನಸಂದಣಿ ಇರುತ್ತದೆ. ಆದುದರಿಂದಾಗಿ, ಸ್ವಲ್ಪ ನಿಧಾನವಾಗಿ ಕಾಮಗಾರಿ ನಡೆಯುತ್ತಿದೆ. ಆದರೆ, ಅದನ್ನು ಶೀಘ್ರ ಮುಗಿಸಲು ಸೂಚಿಸಿದ್ದೇನೆ ಎಂದ ಅವರು, ಬಿಬಿಎಂಪಿ ಮತ್ತು ಬೆಸ್ಕಾಂ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿ ನಿಗದಿತ ಅವಧಿಯಲ್ಲಿ ಮುಗಿಸಲು ಸೂಚಿಸುವೆ ಎಂದರು.

ಇದೇ ಮಾರ್ಗದಲ್ಲಿ ಕೆಲವು ಕಟ್ಟಡಗಳು ನಿರ್ಮಾಣವಾಗುತ್ತಿವೆ. ಆ ಕಟ್ಟಡಗಳಿಂದ ಪ್ರತಿದಿನದ ತ್ಯಾಜ್ಯವನ್ನು ಸುರಿಯುತ್ತಿದ್ದಾರೆ. ಮಾಲಕರು ಸಾಮಗ್ರಿಗಳನ್ನು ಸ್ಥಳದಲ್ಲಿಯೇ ಬಿಟ್ಟಿದ್ದಾರೆ. ತ್ಯಾಜ್ಯ ನೀರನ್ನು ರಸ್ತೆಗೆ ಬಿಡುತ್ತಿದ್ದು, ಕೆಟ್ಟ ವಾಸನೆ ಬರುತ್ತಿದೆ. ಇವರಿಗೆ ಎಚ್ಚರಿಕೆ ನೀಡಿ ಎಲ್ಲವನ್ನೂ ತೆರವು ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಅವರು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಉಪಮೇಯರ್ ಭದ್ರೇಗೌಡ, ಆಡಳಿತ ಪಕ್ಷದ ನಾಯಕ ಅಬ್ದುಲ್ ವಾಜೀದ್, ಮುಖ್ಯ ಅಭಿಯಂತರ ಕೆ.ಟಿ.ನಾಗರಾಜ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News