ಇಂದಿನಿಂದ ಆಸ್ಟ್ರೇಲಿಯನ್ ಓಪನ್ ಬ್ಯಾಡ್ಮಿಂಟನ್ ಟೂರ್ನಿ ಆರಂಭ

Update: 2019-06-04 03:39 GMT

ಮೆಲ್ಬೋರ್ನ್, ಜೂ.3: ಆಸ್ಟ್ರೇಲಿಯನ್ ಓಪನ್ ವರ್ಲ್ಡ್ ಟೂರ್ ಸೂಪರ್-300 ಬ್ಯಾಡ್ಮಿಂಟನ್ ಟೂರ್ನಮೆಂಟ್ ಮಂಗಳವಾರ ಅರ್ಹತಾ ಸುತ್ತಿನ ಪಂದ್ಯಗಳ ಮೂಲಕ ಆರಂಭವಾಗಲಿದ್ದು, ಭಾರತದ ಸ್ಟಾರ್ ಆಟಗಾರ್ತಿ ಪಿ.ವಿ.ಸಿಂಧು ವರ್ಷದ ಮೊದಲ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದ್ದಾರೆ. ಸಮೀರ್ ವರ್ಮಾ ಹಾಗೂ ಪ್ರಣಯ್ ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದ್ದಾರೆ.

ವಿಶ್ವದ ನಂ.5ನೇ ಆಟಗಾರ್ತಿ ಸಿಂಧು ಇಂಡಿಯಾ ಓಪನ್ ಹಾಗೂ ಸಿಂಗಾಪುರ ಓಪನ್‌ನಲ್ಲಿ ಸೆಮಿ ಫೈನಲ್‌ಗೆ ತಲುಪಿದ್ದರು. ಮಾತ್ರವಲ್ಲ ಇಂಡೋನೇಶ್ಯಾ ಹಾಗೂ ಎಬಿಸಿ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್‌ಗೆ ತಲುಪಿದ್ದರು. ಆದರೆ, ಪ್ರಶಸ್ತಿ ಕೈಗೆಟುಕಲಿಲ್ಲ.

 ಸಿಂಧು ಅಗ್ರ ಆಟಗಾರ್ತಿಯರಾದ ಕರೊಲಿನಾ ಮರಿನ್, ಕೊರಿಯಾದ ಸಂಗ್‌ಜಿ ಹ್ಯೂನ್, ಚೀನಾದ ಹೀ ಬಿಂಗ್‌ಜಿಯಾವೊ ಹಾಗೂ ಜಪಾನ್‌ನ ನೊರೊಮಿ ಒಕುಹರಾ ವಿರುದ್ಧ ಸೋತಿದ್ದಾರೆ. ಈ ಹಿಂದೆ ಈ ಎಲ್ಲ ಆಟಗಾರ್ತಿಯರ ವಿರುದ್ಧ ಸಿಂಧು ಉತ್ತಮ ಪ್ರದರ್ಶನ ನೀಡಿದ್ದರು.

ಸುದೀರ್‌ಮನ್ ಕಪ್‌ನಲ್ಲಿ ಕೊನೆಯ ಬಾರಿ ಆಡಿದ್ದ ಸಿಂಧು ತನ್ನ ಮೊದಲ ಸುತ್ತಿನ ಪಂದ್ಯದಲ್ಲಿ ಕ್ವಾಲಿಫೈಯರ್ ಆಟಗಾರ್ತಿಯನ್ನು ಎದುರಿಸಲಿದ್ದಾರೆ. ಸಿಂಧು ಆರಂಭಿಕ ಸುತ್ತುಗಳಲ್ಲಿ ಜಯ ಸಾಧಿಸಿದರೆ ಕ್ವಾರ್ಟರ್ ಫೈನಲ್‌ನಲ್ಲಿ ಮಾಜಿ ಒಲಿಂಪಿಕ್ಸ್ ಚಾಂಪಿಯನ್ ಲೀ ಕ್ಸುರುಯ್ ಹಾಗೂ ಸೆಮಿ ಫೈನಲ್‌ನಲ್ಲಿ ಆಲ್ ಇಂಗ್ಲೆಂಡ್ ಚಾಂಪಿಯನ್ ಚೆನ್ ಯುಫೆ ಅವರನ್ನು ಎದುರಿಸುವ ಸಾಧ್ಯತೆಯಿದೆ.

ಮತ್ತೊಂದೆಡೆ, 12ನೇ ರ್ಯಾಂಕಿನ ಸಮೀರ್ ಮೊದಲ ಸುತ್ತಿನ ಪಂದ್ಯದಲ್ಲಿ ಮಲೇಶ್ಯಾದ ಲೀ ಝಿ ಜಿಯಾರನ್ನು ಎದುರಿಸಲಿದ್ದು, ಸೇಡು ತೀರಿಸಿಕೊಳ್ಳಲು ಎದುರು ನೋಡುತ್ತಿದ್ದಾರೆ. ಲೀ ಝಿ ಸುದೀರ್‌ಮನ್ ಕಪ್‌ನ ನಿರ್ಣಾಯಕ ಪಂದ್ಯದಲ್ಲಿ ಸಮೀರ್‌ರನ್ನು ಸೋಲಿಸಿದ್ದರು.

ಮಾಜಿ ಸಿಂಗಾಪುರ ಚಾಂಪಿಯನ್ ಬಿ.ಸಾಯಿ ಪ್ರಣೀತ್, ಎಚ್.ಎಸ್. ಪ್ರಣಯ್ ಹಾಗೂ 2014ರ ಕಾಮನ್‌ವೆಲ್ತ್ ಗೇಮ್ಸ್ ಚಾಂಪಿಯನ್ ಪಿ. ಕಶ್ಯಪ್ ಟೂರ್ನಿಯಲ್ಲಿ ಅದೃಷ್ಟ ಪರೀಕ್ಷೆ ನಡೆಸಲಿದ್ದಾರೆ.

ಈ ವರ್ಷ ಸ್ವಿಸ್ ಓಪನ್‌ನಲ್ಲಿ ಫೈನಲ್‌ಗೆ ತಲುಪಿದ್ದ ಪ್ರಣೀತ್ ಮೊದಲ ಸುತ್ತಿನಲ್ಲಿ ಕೊರಿಯಾದ ಲೀ ಡಾಂಗ್ ಕಿಯುನ್‌ರನ್ನು ಎದುರಿಸಲಿದ್ದಾರೆ. ಪ್ರಣಯ್ ಚೀನಾದ ದಂತಕತೆ ಲಿನ್ ಡಾನ್‌ರನ್ನು ಎದುರಿಸಿದರೆ, ಕಶ್ಯಪ್ ಮೊದಲ ಸುತ್ತಿನಲ್ಲಿ ಥಾಯ್ಲೆಂಡ್‌ನ ಸುಪ್ಪನ್ಯು ಅವಿಹಿಂಗ್‌ಸನನ್ ಸವಾಲು ಎದುರಿಸಲಿದ್ದಾರೆ.

ಅರ್ಹತಾ ಸುತ್ತಿನಲ್ಲಿ 2018ರ ಏಶ್ಯನ್ ಜೂನಿಯರ್ ಚಾಂಪಿಯನ್ ಲಕ್ಷ ಸೇನ್ ಮಲೇಶ್ಯಾದ ಟೆಕ್ ಝಿ ಸೂರನ್ನು ಎದುರಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News