×
Ad

ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಎಚ್.ವಿಶ್ವನಾಥ್ ರಾಜೀನಾಮೆ

Update: 2019-06-04 11:15 IST

ಬೆಂಗಳೂರು, ಜೂ.4: ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಹೀನಾಯ ಸೋಲಿನ ನೈತಿಕ ಹೊಣೆ ಹೊತ್ತು ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಶಾಸಕ ಎಚ್.ವಿಶ್ವನಾಥ್ ಇಂದಿಲ್ಲಿ ಹೇಳಿದ್ದಾರೆ.

ಮಂಗಳವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಸಭಾ ಚುನಾವಣಾ ಫಲಿತಾಂಶ ಹೊರಬಿದ್ದ ಮಾರನೇ ದಿನವೇ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ದೇವೇಗೌಡರನ್ನು ಭೇಟಿ ಮಾಡಿದ್ದೆ. ಅವರು, ಈಗ ಬೇಡ ಸ್ವಲ ದಿನ ಕಾಯುವಂತೆ ಸಲಹೆ ನೀಡಿದ್ದರು. ಹೀಗಾಗಿ, ಇಂದು ನಾನು ರಾಜೀನಾಮೆ ನೀಡುತ್ತಿದ್ದೇನೆ ಎಂದರು.

ಜೆಡಿಎಸ್ ರಾಷ್ಟ್ರಾಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೆ ಸುದೀರ್ಘ ಬರೆದಿರುವ ಪತ್ರ ಓದಿದ ವಿಶ್ವನಾಥ್, ಜನತಾದಳದ ರಾಜ್ಯಾಧ್ಯಕ್ಷರಾಗಿ ನೇಮಕ ಮಾಡಿದ್ದು, ತಮ್ಮ ರಾಜಕೀಯ ಜೀವನದ ಬಹುಮುಖ್ಯ ಘಟ್ಟ ಎಂದು ಭಾವಿಸಿದ್ದೇನೆ. ಕಾಂಗ್ರೆಸ್‌ನಿಂದ ಹೊರಬಂದು ಹುಣಸೂರು ವಿಧಾನಸಭಾ ಕ್ಷೇತ್ರದ ಶಾಸಕನಾಗಿ ಆಯ್ಕೆಯಾಗುವ ಮೂಲಕ ರಾಜಕೀಯ ಪುನರ್ಜನ್ಮ ನೀಡಿದ್ದು ಜೆಡಿಎಸ್ ಆಗಿದ್ದು, ಅದಕ್ಕೆ ಕೃತಜ್ಞನಾಗಿದ್ದೇನೆ ಎಂದು ಹೇಳಿದರು.

ಅಸಂಗತ ಸಂದರ್ಭದಲ್ಲಿ ಮೈತ್ರಿ ಸರಕಾರ ಅಧಿಕಾರಕ್ಕೆ ಬಂದು ವರ್ಷವಾಗಿದೆ. ಸಾಲ ಮನ್ನಾದಂತಹ ಬೃಹತ್ ಯೋಜನೆಗಳನ್ನು ಹೆಗಲ ಮೇಲಿಟ್ಟುಕೊಂಡು ಕುಮಾರಸ್ವಾಮಿ ಅಭದ್ರತೆಯ ಸಂಕಷ್ಟದಲ್ಲಿಯೂ ಜನಮನ್ನಣೆ ಗಳಿಸಿದ್ದಾರೆ. ಆದರೆ, ಈ ಸರಕಾರದ ಅವಧಿಯಲ್ಲಿ ಒಂದೆರಡು ಇಲಾಖೆ ಬಿಟ್ಟರೆ ನಿರೀಕ್ಷಿಸಿದ ಸಾಧನೆಗಳು ಸಾಧ್ಯವಾಗಿಲ್ಲ. ಈ ವಿಚಾರದಲ್ಲಿ ಪಕ್ಷದ ಅಧ್ಯಕ್ಷನಾಗಿ ನನಗೆ ನಿರಾಶೆಯಾಗಿದೆ. ಕುಮಾರಸ್ವಾಮಿ ಅನಾರೋಗ್ಯ ಹಾಗೂ ಮಿತ್ರರ ಕಿರುಕುಳದ ನಡುವೆಯೂ ಸರಕಾರ ನಡೆಸುತ್ತಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಸಾಮಾನ್ಯವಾಗಿ ಸರಕಾರ ಅಧಿಕಾರದಲ್ಲಿದ್ದಾಗ ಮಂತ್ರಿಗಳು, ಶಾಸಕರು ಪಕ್ಷದ ಮಟ್ಟಿಗೆ ಆಸಕ್ತಿ ತೋರುವುದಿಲ್ಲ. ಪ್ರಭುತ್ವ ಹಾಗೂ ಪಕ್ಷ ಒಟ್ಟಿಗೆ ಸಾಗಬೇಕು. ಆದರೆ, ಅದು ಸಾಧ್ಯವಾಗುತ್ತಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಟೀಕೆ: ಲೋಕಸಭಾ ಚುನಾವಣೆಯಲ್ಲಿ ತಾವು ಸೋಲಿನ ನೋವುಣ್ಣಬೇಕಾಗಿ ಬಂದಿತು. ಇದು ನನಗೆ ಹಾಗೂ ಪಕ್ಷಕ್ಕೆ ತೀವ್ರ ನೋವಿನ ಸಂಗತಿಯಾಗಿದೆ. ಮೈಸೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆಗೆ ಅವಕಾಶ ಕೊಡಿ ಎಂಬ ನಮ್ಮ ಮಾತಿಗೆ ಅವಕಾಶ ಕೊಡದೇ, ಹಾಲಿ ಸಂಸದರಿರುವ ಸ್ಥಾನದಲ್ಲಿ ನಿಮ್ಮನ್ನು ಸ್ಪರ್ಧಿಸುವಂತಹ ತಂತ್ರ ಹೆಣೆಯಲಾಯಿತು. ತುಮಕೂರು ಕ್ಷೇತ್ರದ ಖೆಡ್ಡಾಕ್ಕೆ ಕೆಡವಿ ಚುನಾವಣೆಯಲ್ಲಿ ಅವಮಾನಕರ ಸೋಲು ಅನುಭವಿಸುವಂತೆ ಮಾಡಲಾಯಿತು ಎಂದು ದೇವೇಗೌಡರಿಗೆ ಬರೆದಿರುವ ಪತ್ರದಲ್ಲಿ ಸಿದ್ಧರಾಮಯ್ಯ ವಿರುದ್ಧ ಪರೋಕ್ಷ ದಾಳಿ ನಡೆಸಿದ್ದಾರೆ.

ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿಯೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಮಾಜಿ ಶಾಸಕರು ಹಾಗೂ ಜೆಡಿಎಸ್‌ನ ಹಿರಿಯ ಮುಖಂಡರು ಜವಾಬ್ದಾರಿಯಿಲ್ಲದ ಕೊಂಕು ನುಡಿಗಳು, ವಿಚಲಿತವಾದ ಅಹಿಂದ ಮತಗಳು ನಮ್ಮ ಸ್ಪರ್ಧಿ ನಿಖಿಲ್ ಕುಮಾರಸ್ವಾಮಿ ಸೋಲಿಗೆ ಕಾರಣವಾಯಿತು ಎಂದು ದೂರಿದ್ದಾರೆ.

ಸಮನ್ವಯ ಸಮಿತಿಯ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಅವರು, ಸರಕಾರದ ಸಮನ್ವಯ ಸಮಿತಿ ನಾಮಕಾವಸ್ಥೆಗೆ ಇದ್ದು, ಎರಡೂ ಪಕ್ಷಗಳ ನಡುವೆ ಸಮನ್ವಯ ಸಾಧಿಸುವಲ್ಲಿ ಸಫಲವಾಗಲೇ ಇಲ್ಲ. ಸಮನ್ವಯ ಸಮಿತಿ ಸುಲಲಿತವಾಗಿ ಸರಕಾರವನ್ನು ನಡೆಸಿಕೊಂಡು ಹೋಗುವ ದೃಷ್ಟಿಯಿಂದ ಸಾಮಾನ್ಯ ಕನಿಷ್ಠ ಕಾರ್ಯಕ್ರಮವನ್ನು ಇದುವರೆಗೂ ರೂಪಿಸಲು ಸಾಧ್ಯವಾಗಿಲ್ಲ. ಈ ಸಮಿತಿಯಲ್ಲಿ ಜೆಡಿಎಸ್ ಅಧ್ಯಕ್ಷನಾಗಿದ್ದ ನನಗೆ ಅವಕಾಶ ನೀಡಿರಲಿಲ್ಲ ಎಂದು ಆಪಾದಿಸಿದ್ದಾರೆ.

ದೇಶಕ್ಕೆ ಪ್ರಾಂತೀಯ ಪಕ್ಷಗಳ ಅಗತ್ಯವಿದೆ. ಕೇಂದ್ರ ಸರಕಾರ ಹಿಂದಿ ಹೇರಿಕೆ ಮಾಡಲು ಮುಂದಾದ ಸಂದರ್ಭದಲ್ಲಿ ಪ್ರಾಂತೀಯ ಪಕ್ಷಗಳ ಆಡಳಿತವಿರುವ ಕಡೆ ವ್ಯಾಪಕ ವಿರೋಧ ವ್ಯಕ್ತವಾಯಿತು. ದಕ್ಷಿಣ ಭಾರತದಲ್ಲಿ ಪ್ರಾಂತೀಯ ಪಕ್ಷಗಳಿಗೆ ಹೆಚ್ಚಿನ ಮನ್ನಣೆ ಸಿಗುತ್ತದೆ. ಜನತಾ ಪಕ್ಷವನ್ನು ಅರಸು, ಬೊಮ್ಮಾಯಿ, ಜೆ.ಎಚ್.ಪಟೇಲ್, ನಜೀರ್ ಸಾಹೇಬ್, ಬಂಗಾರಪ್ಪ ಸೇರಿದಂತೆ ಹಲವರು ಕಟ್ಟಿ ನಡೆಸಿದರು. ಬಳಿಕ ಜೆಡಿಎಸ್ ಅನ್ನು ದೇವೇಗೌಡರು ಕಟ್ಟಿದ್ದಾರೆ. ಅದು ಉಳಿಯಬೇಕಿದೆ.

-ಎಚ್.ವಿಶ್ವನಾಥ್, ಶಾಸಕ

ನಾನು ಬಿಜೆಪಿಗೆ ಹೋಗುವುದಿಲ್ಲ, ಅಂತಹ ಪ್ರಸ್ತಾಪವೂ ಬಂದಿಲ್ಲ. ಶ್ರೀನಿವಾಸ ಪ್ರಸಾದ್ ಹಾಗೂ ನಾನು ಮೈಸೂರಿನಲ್ಲಿ ಒಂದೇ ಕೇರಿಯಲ್ಲಿದ್ದವರು. ನಮ್ಮಿಬ್ಬರ ನಡುವೆ ಉತ್ತಮವಾದ ಸಂಬಂಧವಿದೆ. ಅದಕ್ಕೂ ರಾಜಕೀಯಕ್ಕೂ ಸಂಬಂಧವಿಲ್ಲ. ನಾನು ಮಂತ್ರಿಗಿರಿಗಾಗಿ ಯಾರ ಮನೆ ಬಾಗಿಲ ಬಳಿಯೂ ಹೋಗಿ ನಿಲ್ಲುವುದಿಲ್ಲ, ಅದಕ್ಕಾಗಿಯೂ ರಾಜೀನಾಮೆ ನೀಡುತ್ತಿಲ್ಲ. ಕೊಟ್ಟರೆ ಬೇಡ ಎನ್ನುವುದಿಲ್ಲ ಎಂದು ವಿಶ್ವನಾಥ್ ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News