'ರಣಂ' ಚಿತ್ರೀಕರಣ ವೇಳೆ ಅವಘಡ ಪ್ರಕರಣ: ಪೊಲೀಸ್ ಪೇದೆಯ ಹಣದಾಹಕ್ಕೆ ಇಬ್ಬರು ಬಲಿ !
ಬೆಂಗಳೂರು, ಜೂ.4: ‘ರಣಂ’ ಕನ್ನಡ ಸಿನಿಮಾ ಚಿತ್ರೀಕರಣ ವೇಳೆ ಮಹಿಳೆ ಸೇರಿ ಇಬ್ಬರು ಮೃತಪಟ್ಟ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ಪೊಲೀಸ್ ಪೇದೆಯೊಬ್ಬ, ಲಂಚ ಪಡೆದು ಚಿತ್ರೀಕರಣಕ್ಕೆ ಅನುಮತಿ ನೀಡಿದ್ದೇ, ಈ ಅವಘಡಕ್ಕೆ ಕಾರಣ ಎನ್ನುವ ಅಂಶ ತನಿಖಾ ವರದಿಯಲ್ಲಿ ಬೆಳಕಿಗೆ ಬಂದಿದೆ.
ಬಾಗಲೂರು ಠಾಣೆ ಪೊಲೀಸ್ ಪೇದೆಯಾಗಿದ್ದ ಭೀಮಾ ಶಂಕರ್ ಎಂಬಾತ ಕೇವಲ 5 ಸಾವಿರ ರೂ. ಲಂಚ ಪಡೆದು, ಚಿತ್ರೀಕರಣಕ್ಕೆ ಅನುಮತಿ ನೀಡಿದ್ದ. ಇದರ ಪರಿಣಾಮ ಈ ಘಟನೆ ಸಂಭವಿಸಿದ್ದು, ಇದೀಗ ಪೊಲೀಸ್ ಪೇದೆಯನ್ನು ಅಮಾನತುಗೊಳಿಸಿ ಈಶಾನ್ಯ ವಿಭಾಗದ ಡಿಸಿಪಿ ಕಲಾ ಕೃಷ್ಣಸ್ವಾಮಿ ಆದೇಶ ಹೊರಡಿಸಿದ್ದಾರೆ.
ಏನಿದು ಪ್ರಕರಣ?: ಮಾ.29ರಂದು ಬಾಗಲೂರಿನ ಶೆಲ್ ಕಂಪೆನಿ ಬಳಿ ರಣಂ ಸಿನಿಮಾ ಚಿತ್ರೀಕರಣ ನಡೆಯುತ್ತಿದ್ದ ವೇಳೆ ಏಕಾಏಕಿ ಸಿಲಿಂಡರ್ ಸ್ಫೋಟವಾಗಿ ಸಮೀನಾ ಬಾನು (28) ಹಾಗೂ ಆಕೆಯ ಪುತ್ರಿ ಆಯಿಶಾ ಮೃತಪಟ್ಟಿದ್ದರು.
ಪ್ರಕರಣದ ತನಿಖೆ ವೇಳೆ ಪೊಲೀಸ್ ಸಿಬ್ಬಂದಿಯೊಳಗೆ ಆಂತರಿಕ ವೈಫಲ್ಯದ ಅನುಮಾನ ವ್ಯಕ್ತವಾಗಿದ್ದ ಹಿನ್ನೆಲೆ, ಈಶಾನ್ಯ ವಿಭಾಗದ ಡಿಸಿಪಿ ಕಲಾ ಕೃಷ್ಣಸ್ವಾಮಿ ತನಿಖೆಗೆ ಸೂಚಿಸಿದ್ದರು. ಚಿತ್ರೀಕರಣ ನಡೆಸುವ ಮುನ್ನ, ಚಿತ್ರತಂಡವು ಅನುಮತಿ ಕೋರಿ ಯಲಹಂಕ ಎಸಿಪಿ ಕಚೇರಿಗೆ ತೆರಳಿದ್ದರು. ಆದರೆ, ಯಲಹಂಕ ಎಸಿಪಿ ಎಂ.ಎಸ್.ಶ್ರೀನಿವಾಸ್ ಸೂಕ್ತ ದಾಖಲೆ ನೀಡುವವರೆಗೂ ಅನುಮತಿ ನೀಡುವುದಿಲ್ಲ ಎಂದಿದ್ದರು ಎನ್ನಲಾಗಿದೆ. ಆದರೆ, ಯಾವುದೇ ಅನುಮತಿ ಇಲ್ಲದಿದ್ದರೂ, ವೈಯಕ್ತಿಕವಾಗಿ ಚಿತ್ರತಂಡದಿಂದ 5 ಸಾವಿರ ರೂ.ಪಡೆದುಕೊಂಡ ಪೇದೆ ಭೀಮಾ ಶಂಕರ್, ಚಿತ್ರೀಕರಣದ ವೇಳೆ ತಾನು ಇರುವುದಾಗಿ ಹೇಳಿದ್ದ ಎಂದು ತಿಳಿದುಬಂದಿದೆ.
ಈ ಸಂಬಂಧ ಪೇದೆ ತಪ್ಪು ಮಾಡಿರುವುದು ಬೆಳಕಿಗೆ ಬಂದಿದ್ದು, ತನಿಖೆ ಮುಂದುವರೆಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.