×
Ad

ದೇವೇಗೌಡರ ಸೋಲಿಗೆ ನಮ್ಮ ಪಕ್ಷದವರೇ ಕಾರಣ: ರೋಷನ್ ಬೇಗ್

Update: 2019-06-04 20:44 IST

ಬೆಂಗಳೂರು, ಜೂ.4: ನಾನು ಕಾಂಗ್ರೆಸ್ ಪಕ್ಷದ ನಿಷ್ಠಾವಂತ, ಶಿಸ್ತಿನ ಸಿಪಾಯಿ. ಯಾವುದೇ ಕಾರಣಕ್ಕೂ ನಾನು ಪಕ್ಷ ಬಿಡುವುದಿಲ್ಲ, ಬೇರೆ ಪಕ್ಷಕ್ಕೆ ಹೋಗುವುದಿಲ್ಲ. ನನ್ನ ಸ್ನೇಹಿತ ರಾಮಲಿಂಗಾರೆಡ್ಡಿ ಜೊತೆ ನಾನು ಇರುತ್ತೇನೆ. ಆದರೆ, ಈ ಸರಕಾರದಲ್ಲಿ ನಾನು ಸಚಿವನಾಗುವುದಿಲ್ಲ ಎಂದು ಮಾಜಿ ಸಚಿವ ಆರ್.ರೋಷನ್ ಬೇಗ್ ಹೇಳಿದರು.

ಮಂಗಳವಾರ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಕುರಿತು ರಾಮಲಿಂಗಾರೆಡ್ಡಿ ಹೇಳಿರುವ ಮಾತುಗಳು ನೂರಕ್ಕೆ ನೂರು ಸತ್ಯ ಎಂದರು.

ನನಗೆ ಕೆಪಿಸಿಸಿ ವತಿಯಿಂದ ಕೊಟ್ಟಿರುವ ನೋಟಿಸ್‌ಗೆ ಉತ್ತರ ನೀಡುವುದಿಲ್ಲ. ನೋಟಿಸ್ ಕೊಡುವುದಾದರೆ ಕೋಲಾರದಲ್ಲಿ ಕೆ.ಎಚ್.ಮುನಿಯಪ್ಪ ಸೋಲಿಗೆ ಕಾರಣರಾದ ಶಾಸಕರಿಗೆ ಕೊಡಲಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ತುಮಕೂರಿನಲ್ಲಿ ಸೋಲಲು ನಮ್ಮ ಪಕ್ಷದವರೇ ಕಾರಣ ಎಂದು ಅವರು ಆರೋಪಿಸಿದರು.

ಅದೇ ರೀತಿ ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ವಿರುದ್ಧ ಬಹಿರಂಗವಾಗಿಯೇ ಕಾಂಗ್ರೆಸ್‌ನವರು ಕೆಲಸ ಮಾಡಿದ್ದಾರೆ. ಅವರಿಗೆಲ್ಲ ಯಾಕೆ ಕೆಪಿಸಿಸಿ ನೋಟಿಸ್ ಕೊಟ್ಟಿಲ್ಲ ಎಂದು ಪ್ರಶ್ನಿಸಿದ ಅವರು, ಸತ್ಯ ಕಣ್ಣಿನ ಮುಂದೆ ಇದ್ದರೂ, ಲೋಕಸಭಾ ಚುನಾವಣೆಯ ಸೋಲಿಗೆ ಕಾರಣವನ್ನು ಹುಡುಕಲು ಕೆಪಿಸಿಸಿ ರಚಿಸಿರುವ ಸತ್ಯ ಶೋಧನಾ ಸಮಿತಿಯೂ ಒಂದು ದೊಡ್ಡ ಜೋಕ್ ಎಂದು ವ್ಯಂಗ್ಯವಾಡಿದರು.

ನನ್ನನ್ನು ಸಚಿವನನ್ನಾಗಿ ಮಾಡುವುದಾಗಿ ಯಾರನ್ನೋ ನನ್ನ ಬಳಿ ಕಳುಹಿಸಿದ್ದರು. ನಾನು ಯಾವ ಸಚಿವ ಸ್ಥಾನವು ಬೇಡ ಎಂದು ಹೇಳಿ ಕಳುಹಿಸಿದ್ದೇನೆ. ಸಚಿವ ಸ್ಥಾನ ಕೊಡುವುದಾದರೆ ಹಿರಿಯರಾದ ಎಚ್.ಕೆ.ಪಾಟೀಲ್ ಹಾಗೂ ರಾಮಲಿಂಗಾರೆಡ್ಡಿಗೆ ಕೊಡಲಿ ಎಂದು ರೋಷನ್ ಬೇಗ್ ಹೇಳಿದರು.

ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗುವ ಮುನ್ನ ನಾನೇ ಮುಖ್ಯಮಂತ್ರಿ, ನಾನೇ ಮುಖ್ಯಮಂತ್ರಿ ಎನ್ನುತ್ತಿದ್ದವರು ಈಗಲಾದರೂ ಇಳಿದು ಬಾ, ಇಳಿದು ಬಾ ಎಂದು ಸಿದ್ದರಾಮಯ್ಯ ವಿರುದ್ಧ ಟೀಕಾ ಪ್ರಹಾರ ನಡೆಸಿದ ಅವರು, ಸಿದ್ದರಾಮಯ್ಯಗೆ ನಾನು ಹೇಳಿದ ಹಾಗೇ ನಡೆಯಬೇಕು ಅನ್ನೋ ಅಹಂ ಭಾವನೆಯಿದೆ ಎಂದರು.

ದಿನೇಶ್ ಗುಂಡೂರಾವ್ ಒಬ್ಬ ಅಪ್ರಬುದ್ಧ ಹಾಗೂ ವಿಫಲ ಕೆಪಿಸಿಸಿ ಅಧ್ಯಕ್ಷ. ಇಂತಹ ನಾಯಕರೇ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯ ಹಾದಿ ತಪ್ಪಿಸಿದ್ದಾರೆ. ನಾನು ಅವರ ಬಳಿ ಕ್ಷಮೆ ಕೋರುತ್ತೇನೆ, ರಾಹುಲ್ ಗಾಂಧಿ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬಾರದು. ಅವರ ಬದಲು, ದಿನೇಶ್ ಗುಂಡೂರಾವ್ ಹಾಗೂ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಲಿ ಎಂದು ಅವರು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News