ಜಾತಿ ವ್ಯವಸ್ಥೆ ಇರುವವರೆಗೂ ಸಮಾನತೆ ಬರುವುದಿಲ್ಲ: ಮಾಜಿ ಸಿಎಂ ಸಿದ್ದರಾಮಯ್ಯ
ಬೆಂಗಳೂರು, ಜೂ.4: ಜಾತಿ ವ್ಯವಸ್ಥೆ ಇರುವವರೆಗೂ ಸಮಾಜದಲ್ಲಿ ಸಮಾನತೆ ಬರಲು ಸಾಧ್ಯವಿಲ್ಲ. ಹಾಗೆಯೇ ಆರ್ಥಿಕ, ಸಾಮಾಜಿಕ ಶಕ್ತಿ ಸಿಗದಿದ್ದರೆ ಜಾತಿ ವ್ಯವಸ್ಥೆ ನಿರ್ಮೂಲನೆಯೂ ಆಗುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮಂಗಳವಾರ ನಗರದ ಬಿಎಂಟಿಸಿ ಕೇಂದ್ರ ಕಚೇರಿಯಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್‌ರ 128 ನೆ ಜಯಂತೋತ್ಸವ ಹಾಗೂ ಕಾರ್ಮಿಕ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಜಾತಿ ವ್ಯವಸ್ಥೆ ಸುಮ್ಮನೆ ನಿರ್ಮೂಲನೆ ಆಗಲ್ಲ. ತುಳಿತಕ್ಕೆ ಒಳಗಾದವರಿಗೆ ಆರ್ಥಿಕ, ಸಾಮಾಜಿಕ ಶಕ್ತಿ ತುಂಬಿದಾಗ ಜಾತಿ ವ್ಯವಸ್ಥೆ ನಾಶ ಸಾಧ್ಯ. ಸ್ವಾತಂತ್ರದ ಮೊದಲು ಗುಲಾಮಗಿರಿ ಇತ್ತು, ನಂತರವೂ ಇತ್ತು. ಇದೀಗ ಆ ಮನಸ್ಥಿತಿ ಹೋಗಬೇಕು. ಸ್ವಾಭಿಮಾನ ಇದ್ದವರು ಗುಲಾಮಗಿರಿಯನ್ನು ಕಿತ್ತು ಎಸೆದು ಹಾಕುತ್ತಾರೆ. ಅಂಬೇಡ್ಕರ್‌ಗೆ ಸ್ವಾಭಿಮಾನ ಇತ್ತು. ಅದಕ್ಕೆ ನಮಗೆ ಮೀಸಲಾತಿ, ಸಮಾನತೆ ಕಲ್ಪಿಸಿಕೊಡಲು ಸಾಧ್ಯವಾಯಿತು. ಹೀಗಾಗಿ, ಸ್ವಾಭಿಮಾನದಿಂದ ಬದುಕಲು ಶೋಷಿತ ಸಮುದಾಯಗಳಿಗೆ ಆರ್ಥಿಕ ಶಕ್ತಿ ತುಂಬಬೇಕು. ಅವಕಾಶ ವಂಚಿತರನ್ನು ಸಮಾಜದ ಮುಖ್ಯ ವಾಹಿನಿಗೆ ತರುವುದು ಮೊದಲ ಆದ್ಯತೆ ಆಗಿರಬೇಕು ಎಂದು ಹೇಳಿದರು.
ಈ ಹಿಂದೆ ಅಂಬೇಡ್ಕರ್ ಇಲ್ಲದಿದ್ದರೆ, ಅವರಿಗೆ ಸಂವಿಧಾನ ರಚನೆ ಅವಕಾಶ ಸಿಗದೇ ಇಲ್ಲದಿದ್ದರೆ ಇಂದಿನ ಸ್ಥಿತಿ ಊಹಿಸಿಕೊಳ್ಳಲು ಆಗುತ್ತಿರಲಿಲ್ಲ. ಅಂದು ಅಂಬೇಡ್ಕರ್‌ರ ಸಂವಿಧಾನವನ್ನು ವಿರೋಧಿಸಿದ ಕೊಳಕು ಮನಸ್ಥಿತಿಗಳೇ ಇಂದು ಸಂವಿಧಾನ ಬದಲಾವಣೆ ಮಾಡುವ ಮಾತಾಡುತ್ತಿದ್ದಾರೆ. ಸಾಮಾಜಿಕ ನ್ಯಾಯದಿಂದ, ಅವಕಾಶದಿಂದ ವಂಚಿತರಾದ ಎಲ್ಲರಿಗೂ ಸಂವಿಧಾನ ಬೇಕಿದ್ದು, ಬದಲಾವಣೆ ಮಾಡಲು ಬಿಡಲ್ಲ ಎಂಬ ದೃಢಸಂಕಲ್ಪ ಮಾಡಬೇಕು ಎಂದು ಕರೆ ನೀಡಿದರು.
ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಮಾತನಾಡಿ, ಸಾರಿಗೆ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ಸರಿಯಾದ ವಸತಿ ವ್ಯವಸ್ಥೆಯಿಲ್ಲ. ಆದುದರಿಂದಾಗಿ ಎಸ್‌ಟಿಪಿ, ಟಿಎಸ್‌ಪಿಯಿಂದ ಮನೆಗಳನ್ನು ಕಟ್ಟಿಸಿಕೊಡಲು ಹಣ ನೀಡುವಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಚಿವ ಪ್ರಿಯಾಂಕ ಖರ್ಗೆಗೆ ಮನವಿ ಮಾಡಲಾಗಿದೆ. ಅವರು ಸ್ಪಂದಿಸುವ ಭರವಸೆಯಿದೆ ಎಂದ ಅವರು, ಈ ವರ್ಷ ಎಲ್ಲರಿಗೂ ಬೋನಸ್ ನೀಡಲಾಗುವುದು. ಉಳಿದಂತೆ ಸಮವಸ್ತ್ರ ನೀಡುವಲ್ಲಿ ವಿಳಂಬವಾಗಿದ್ದು, ಈ ವರ್ಷದಲ್ಲಿಯೇ ಮೂರು-ನಾಲ್ಕು ವರ್ಷದ ಸಮವಸ್ತ್ರಗಳನ್ನು ನೀಡುತ್ತೇವೆ ಎಂದು ಹೇಳಿದರು.
ಸಾರಿಗೆ ಸಂಸ್ಥೆಯಲ್ಲಿ ಕೆಲಸ ಮಾಡುವ ಕೆಲವು ನೌಕರರನ್ನು ಸಣ್ಣ ಸಣ್ಣ ತಪ್ಪುಗಳಿಗೆ ಸಸ್ಪೆಂಡ್ ಮಾಡಲಾಗಿದೆ. ಅದಕ್ಕೆ ಒಂದು ಸಮಿತಿ ಮಾಡುತ್ತಿದ್ದು, ನೌಕರರು ಮಾಡಿರುವ ತಪ್ಪುಗಳ ಬಗ್ಗೆ ತನಿಖೆ ಮಾಡಿ ಮರು ನೇಮಕ ಮಾಡುವ ಕೆಲಸ ಮಾಡಲಾಗುತ್ತಿದೆ. ಶೀಘ್ರದಲ್ಲಿಯೇ ಮರು ನೇಮಕ ಮಾಡುವ ಕಾರ್ಯ ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಬಿಎಂಟಿಸಿ ಅಧ್ಯಕ್ಷ ಎನ್.ಎ.ಹಾರೀಸ್, ಶಾಸಕ ಡಾ.ಕೆ.ಅನ್ನದಾನಿ, ಶಾಸಕಿ ಸೌಮ್ಯರೆಡ್ಡಿ, ರಾಮಲಿಂಗಾರೆಡ್ಡಿ, ಮಾಜಿ ಶಾಸಕಿ ಬಿ.ಟಿ.ಲಲಿತಾ ನಾಯಕ್ ಸೇರಿದಂತೆ ಹಲವರಿದ್ದರು. ಇದೇ ವೇಳೆ ಎಲ್.ಜಯಪ್ರಕಾಶ್‌ಗೆ ಅಂಬೇಡ್ಕರ್ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಹಾಗೂ ವರದಿಗಾರ್ತಿ ಎಸ್.ಎಸ್.ಕಾವೇರಿ, ಎ.ಪ್ರಿಯಾಂಕ, ಎಚ್.ಕೆ.ರಮಾಮಣಿ ಸೇರಿದಂತೆ ಹಲವರನ್ನು ಗೌರವಿಸಿ ಸನ್ಮಾನಿಸಲಾಯಿತು.