ವಿಶ್ವಕಪ್: ರಬಾಡರ ಉರಿವೇಗದ ಬೌಲಿಂಗ್‌ಗೆ ಮುರಿದುಬಿತ್ತು ಧವನ್ ಬ್ಯಾಟ್

Update: 2019-06-06 04:44 GMT

 ಸೌಥಾಂಪ್ಟನ್, ಜೂ.6: ಭಾರತದ ಆರಂಭಿಕ ಆಟಗಾರ ಶಿಖರ್ ಧವನ್ ಭಾರತದ ಇನಿಂಗ್ಸ್‌ನ ಆರನೇ ಓವರ್‌ನಲ್ಲಿ ಕೇವಲ 8 ರನ್ ಗಳಿಸಿ ದ.ಆಫ್ರಿಕದ ವೇಗದ ಬೌಲರ್ ಕಾಗಿಸೊ ರಬಾಡಗೆ ವಿಕೆಟ್ ಒಪ್ಪಿಸಿದರು. ಈ ಮೂಲಕ ತನ್ನ ವಿಶ್ವಕಪ್ ಅಭಿಯಾನವನ್ನು ನೀರಸವಾಗಿ ಆರಂಭಿಸಿದರು. ಧವನ್ ಕ್ರೀಸ್‌ನಲ್ಲಿ ಕೆಲವೇ ಸಮಯವಿದ್ದರೂ ಈ ಮಧ್ಯೆ ರಬಾಡ ಅವರು ಧವನ್‌ರ ಬ್ಯಾಟನ್ನು ಮುರಿಯಲು ಸಫಲರಾಗಿದ್ದಾರೆ.

ನಾಲ್ಕನೇ ಓವರ್‌ನ ಕೊನೆಯ ಎಸೆತದಲ್ಲಿ ರಬಾಡ ಗಂಟೆಗೆ 146 ಕಿ.ಮೀ. ವೇಗದಲ್ಲಿ ಲೋ ಫುಲ್‌ಟಾಸ್ ಎಸೆದರು. ಧವನ್ ರಕ್ಷಣಾತ್ಮಕವಾಗಿ ಚೆಂಡನ್ನು ತಳ್ಳಿದರು. ಚೆಂಡು ಬ್ಯಾಟ್‌ನ ಕೆಳ ತುದಿಗೆ ಬಲವಾಗಿ ತಾಗಿತು. ಬ್ಯಾಟ್‌ಗೆ ಚೆಂಡು ಅಪ್ಪಳಿಸಿದ ವೇಗಕ್ಕೆ ಬ್ಯಾಟ್‌ನ ಒಂದು ಬದಿ ತುಂಡಾಗಿ ಸ್ಟಂಪ್ ಹಿಂದುಗಡೆ ಹೋಗಿ ಬಿತ್ತು. ವಿಕೆಟ್‌ಕೀಪರ್ ಕ್ವಿಂಟನ್ ಡಿಕಾಕ್ ಬ್ಯಾಟ್ ತುಂಡನ್ನು ಹೆಕ್ಕಿ ತಂದು ಎಡಗೈ ದಾಂಡಿಗ ಧವನ್ ಕೈಗಿಟ್ಟರು.

ಧವನ್ ಹೊಸ ಬ್ಯಾಟ್‌ನಿಂದ ಬ್ಯಾಟಿಂಗ್ ಮುಂದುವರಿಸಿದರೂ ಮುಂದಿನ ಎಸೆತದಲ್ಲಿ ರಬಾಡಗೆ ವಿಕೆಟ್ ಒಪ್ಪಿಸಿದರು. ಹೊರಹೋಗುತ್ತಿದ್ದ ಚೆಂಡನ್ನು ಕೆಣಕಲು ಹೋದ ಧವನ್ ವಿಕೆಟ್‌ಕೀಪರ್ ಡಿಕಾಕ್‌ಗೆ ಸುಲಭ ಕ್ಯಾಚ್ ನೀಡಿ ನಿರ್ಗಮಿಸಿದರು. ಧವನ್ ಔಟಾಗುವ ಮೊದಲು 12 ಎಸೆತಗಳಲ್ಲಿ 8 ರನ್ ಗಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News