ಕೇರಳಕ್ಕೆ ಅಪ್ಪಳಿಸಿದ ಮುಂಗಾರು ಮಳೆ: ಹಲವು ಭಾಗಗಳಲ್ಲಿ ರೆಡ್ ಅಲರ್ಟ್ ಘೋಷಿಸಿದ ಸರಕಾರ

Update: 2019-06-08 17:39 GMT

 ಹೊಸದಿಲ್ಲಿ, ಜೂ. 8: ಕೊನೆಗೂ ಮಂಗಾರು ಕೇರಳಕ್ಕೆ ಒಂದು ವಾರ ವಿಳಂಬವಾಗಿ ಆಗಮಿಸಿದೆ.

 ಮುಂಗಾರು ಇಂದು (ಜೂನ್ 8) ಕೇರಳಕ್ಕೆ ಆಗಮಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ನಿಯೋಜಿತ ಪ್ರಧಾನ ನಿರ್ದೇಶಕ ಮೃತ್ಯುಂಜಯ ಮೋಹಪಾತ್ರ ತಿಳಿಸಿದ್ದಾರೆ.

ಕೇರಳದ ವಿವಿಧ ಭಾಗಗಳಲ್ಲಿ ಭಾರಿ ಮಳೆ ಸುರಿಯಲು ಆರಂಭವಾಗಿದೆ. ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ರಾಜ್ಯದ ವಿವಿಧ ಭಾಗಗಳಲ್ಲಿ ಜೂನ್ 9ರಿಂದ 11ರ ವರೆಗೆ ರೆಡ್ ಹಾಗೂ ಆರೆಂಜ್ ಮುನ್ನೆಚ್ಚಿರಿಕೆ ಘೋಷಿಸಿದೆ.

ಜೂನ್ 10ರಂದು ತ್ರಿಶೂರ್ ಜಿಲ್ಲೆಗಳಿಗೆ, ಜೂನ್ 11ರಂದು ಎರ್ನಾಕುಳಂ, ಮಲಪ್ಪುರಂ ಹಾಗೂ ಕೋಝಿಕೋಡ್ ಜಿಲ್ಲೆಗಳಿಗೆ ರೆಡ್ ಮುನ್ನೆಚ್ಚರಿಕೆ ನೀಡಲಾಗಿದೆ. ಜೂನ್ 10ರಿಂದ 11ರ ವರೆಗೆ ತಿರುವನಂತಪುರ, ಕೊಲ್ಲಂ, ಆಲಪ್ಪುಳ, ಎರ್ನಾಕುಳಂ ಹಾಗೂ ತ್ರಿಶೂರ್ ಜಿಲ್ಲೆಗಳಲ್ಲಿ ಆರೆಂಜ್ ಮುನ್ನೆಚ್ಚರಿಕೆ ನೀಡಲಾಗಿದೆ.

 ಅಂಡಮಾನ್ ಹಾಗೂ ನಿಕೋಬಾರ್ ದ್ವೀಪಗಳಲ್ಲಿ ಭಾರೀ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಖಾಸಗಿ ಹವಾಮಾನ ಮುನ್ಸೂಚನೆ ಸಂಸ್ಥೆ ಸ್ಕೈಮ್ಯಾಟ್ ವೆದರ್ ತಿಳಿಸಿದೆ. ಆಂಧ್ರಪ್ರದೇಶ, ತೆಲಂಗಾಣ ಹಾಗೂ ಕರ್ನಾಟಕದ ಉತ್ತರ ಒಳನಾಡಿನಲ್ಲಿ ಚದುರಿದ ಮಳೆಯಾಗಲಿದೆ. ಚೆನ್ನೈ ಸೇರಿದಂತೆ ತಮಿಳುನಾಡಿನಲ್ಲಿ ಸರಿಸುಮಾರು ಒಣ ಹವೆ ಇರಲಿದೆ.

 ಮುಂದಿನ 24 ಗಂಟೆಗಳಲ್ಲಿ ಮುಂಗಾರು ಈಶಾನ್ಯ ಭಾರತವನ್ನು ಏಕಕಾಲದಲ್ಲಿ ಪ್ರವೇಶಿಸಲಿದೆ ಎಂದು ನಿರೀಕ್ಷಿಸಲಾಗಿದೆ. ಈ ನಡುವೆ ಪಶ್ಚಿಮಬಂಗಾಳ, ಸಿಕ್ಕಿಂ ಹಾಗೂ ಒಡಿಶಾದಲ್ಲಿ ಚದುರಿದ ಮಳೆಯಾಗಲಿದೆ. ಈಶಾನ್ಯ ಬಿಹಾರದಲ್ಲಿ ವಿರಳ ಮಳೆಯಾಗಲಿದೆ. ಜಾರ್ಖಂಡ್ ಹಾಗೂ ಪೂರ್ವ ಉತ್ತರ ಪ್ರದೇಶದಲ್ಲಿ ಒಣ ಹವೆ ಇರಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News