ವಿಶ್ವಕಪ್ : ನ್ಯೂಝಿಲೆಂಡ್‌ಗೆ ಹ್ಯಾಟ್ರಿಕ್ ಜಯ

Update: 2019-06-09 03:51 GMT

ಟೌಂಟನ್: ನಾಯಕ ಕೇನ್ ವಿಲಿಯಮ್ಸನ್ ಅವರ ಅಜೇಯ 79 ರನ್‌ಗಳ ನೆರವಿನೊಂದಿಗೆ ನ್ಯೂಝಿಲೆಂಡ್ ತಂಡ ಶನಿವಾರ ವಿಶ್ವಕಪ್ ಪಂದ್ಯಾವಳಿಯಲ್ಲಿ ಅಪ್ಘಾನಿಸ್ತಾನ ವಿರುದ್ಧ ಏಳು ವಿಕೆಟ್‌ಗಳ ಭರ್ಜರಿ ಜಯದೊಂದಿಗೆ ವಿಶ್ವಕಪ್ ಅಭಿಯಾನ ಮುಂದುವರಿಸಿದೆ.

ಒಂಬತ್ತು ಬೌಂಡರಿ ಸಹಿತ 79 ರನ್ ಗಳಿಸಿದ ನಾಯಕ ವಿಲಿಯಮ್ಸನ್ ತಂಡವನ್ನು ಗೆಲುವಿನ ದಡ ಸೇರಿಸಿದರು. ಇದಕ್ಕೂ ಮುನ್ನ 31 ರನ್‌ಗಳಿಗೆ ಐದು ವಿಕೆಟ್ ಕಿತ್ತು ಜಿಮ್ಮಿ ನೀಶಮ್ ಎದುರಾಳಿ ತಂಡವನ್ನು ಸಾಧಾರಣ ಮೊತ್ತ (172)ಕ್ಕೆ ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಹತ್ತು ತಂಡಗಳ ಟೂರ್ನಿಯಲ್ಲಿ ಸೆಮಿಫೈನಲ್ ತಲುಪುವ ನಿಟ್ಟಿನಲ್ಲಿ ನ್ಯೂಝಿಲೆಂಡ್ ಸತತ ಮೂರು ಜಯದೊಂದಿಗೆ ದಾಪುಗಾಲು ಇಟ್ಟಿದೆ. ಅಪ್ಘಾನಿಸ್ತಾನ ಇದುವರೆಗೆ ಆಡಿರುವ ಎಲ್ಲ ಮೂರೂ ಪಂದ್ಯಗಳನ್ನು ಸೋತಿದೆ. ನ್ಯೂಝಿಲೆಂಡ್ ತಂಡ ಈ ಬಾರಿಯ ವಿಶ್ವಕಪ್ ಪಂದ್ಯಾವಳಿಯಲ್ಲಿ ಈಗಾಗಲೇ ಶ್ರೀಲಂಕಾ ಹಾಗೂ ಬಾಂಗ್ಲಾದೇಶವನ್ನು ಸೋಲಿಸಿದ್ದು, ಇದೀಗ ಅಪ್ಘಾನ್ ವಿರುದ್ಧದ ಗೆಲುವಿನೊಂದಿಗೆ ಕಳೆದ 12 ವಿಶ್ವಕಪ್ ಪಂದ್ಯಗಳ ಪೈಕಿ 11ನ್ನು ಗೆದ್ದಂತಾಗಿದೆ. 2015ರ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತದ್ದು, ಈ ತಂಡದ ಏಕೈಕ ಸೋಲಾಗಿದೆ.

ಸಾಧಾರಣ ಮೊತ್ತವನ್ನು ಬೆನ್ನಟ್ಟಿದ ನ್ಯೂಝಿಲೆಂಡ್‌ಗೆ ಮೊದಲ ಎಸೆತದಲ್ಲೇ ಅಫ್ತಾಬ್ ಅಲಮ್ ಆಘಾತ ನೀಡಿದರು. ನ್ಯೂಝಿಲೆಂಡ್ ಆರಂಭಿಕ ಆಟಗಾರ ಮಾರ್ಟಿನ್ ಗುಪ್ಟಿಲ್ ಮೊದಲ ಎಸೆತದಲ್ಲೇ ಕ್ಯಾಚ್ ನೀಡಿ ವಾಪಸ್ಸಾದರು. ಇದೇ ಮೊದಲ ವಿಶ್ವಕಪ್‌ನಲ್ಲಿ ಆಡುತ್ತಿರುವ ಅಫ್ತಾಬ್ ಪರಿಣಾಮಕಾರಿ ದಾಳಿಯ ಮೂಲಕ ಗಮನ ಸೆಳೆದರೆ, ಗುಪ್ಟಿಲ್ 14ನೇ ಬಾರಿ ಶೂನ್ಯಕ್ಕೆ ಔಟ್ ಆದರು. ಅಪ್ಘಾನ್ ಇನಿಂಗ್ಸ್‌ನಲ್ಲಿ ಲ್ಯೂಕ್ ಫರ್ಗ್ಯೂಸನ್ ಎಸೆತದಲ್ಲಿ ತಲೆಗೆ ಏಟಾಗಿ ವಾಪಸ್ಸಾದ ಲೆಗ್ ಸ್ಪಿನ್ನರ್ ರಶೀದ್ ಖಾನ್ ಅವರ ಸೇವೆ ಇಲ್ಲದೇ ಅಪ್ಘಾನಿಸ್ತಾನ ಕ್ಷೇತ್ರ ರಕ್ಷಣೆಗೆ ಇಳಿದಿತ್ತು.

ಅಫ್ತಾಬ್ ಮೊನಚಿನ ದಾಳಿಯಿಂದ ಕಾಲಿನ್ ಮುನ್ರೊ ಅವರ ವಿಕೆಟ್ ಕಬಳಿಸುವ ಮೂಲಕ ನ್ಯೂಝಿಲೆಂಡ್ ಪಾಳಯದಲ್ಲಿ ಭೀತಿ ಹುಟ್ಟಿಸಿದರು. ಒಂದು ಹಂತದಲ್ಲಿ ನ್ಯೂಝಿಲೆಂಡ್ ತಂಡ 2 ವಿಕೆಟ್ ನಷ್ಟಕ್ಕೆ 41 ರನ್ ಗಳಿಸಿತ್ತು. ಆದರೆ ರಾಸ್ ಟೇಲರ್ ಜತೆ 89 ರನ್‌ಗಳ ಜತೆಯಾಟದಲ್ಲಿ ಪಾಲ್ಗೊಂಡ ವಿಲಿಯಮ್ಸನ್, ನ್ಯೂಝಿಲೆಂಡ್ ಗೆಲುವನ್ನು ಖಾತ್ರಿಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News