ಶ್ರೀಲಂಕಾದ ಗುಪ್ತಚರ ವರಿಷ್ಠನ ವಜಾಗೊಳಿಸಿದ ಸಿರಿಸೇನಾ

Update: 2019-06-09 18:23 GMT

 ಕೊಲಂಬೊ,ಜೂ.9: ಈಸ್ಟರ್ ಆತ್ಮಹತ್ಯಾ ಬಾಂಬ್ ದಾಳಿಗೆ ಸಂಬಂಧಿಸಿ ಭದ್ರತಾ ಲೋಪಗಳ ಬಗ್ಗೆ ಸಂಸದೀಯ ತನಿಖೆಗೆ ಸಹಕರಿಸದಿರಲು , ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರು ನಿರ್ಧರಿಸಿದ್ದಾರೆ. ಹಾಗೂ ತನ್ನ ಆದೇಶ ಉಲ್ಲಂಘಿಸಿ ತನಿಖಾ ಸಮಿತಿಯ ಮುಂದೆ ಹೇಳಿಕೆೆ ನೀಡಿದ ರಾಷ್ಟ್ರೀಯ ಗುಪ್ತಚರ ವರಿಷ್ಠ ಸಿಸಿರಾ ಮೆಂಡಿಸ್ ಅವರನ್ನು ವಜಾಗೊಳಿಸಿದ್ದಾರೆಂದು ಅಧಿಕೃತ ಮೂಲಗಳು ತಿಳಿಸಿವೆ.

    ಎಪ್ರಿಲ್ 21ರಂದು ಕೊಲೊಂಬೊ ಹಾಗೂ ಆಸುಪಾಸಿನ ನಗರಗಳಲ್ಲಿ 258 ಮಂದಿಯನ್ನು ಬಲಿತೆಗೆದುಕೊಂಡ ಭಯೋತ್ಪಾದಕ ದಾಳಿಯ ಬಗ್ಗೆ ಸಂಸದೀಯ ಆಯ್ಕೆ ಸಮಿತಿಯನ್ನು ವಿರೋಧಿಸಿ,ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರು ತುರ್ತು ಸಂಪುಟ ಸಮಿತಿ ಸಭೆಯನ್ನು ಕರೆದಿದ್ದರು.

ಭಯೋತ್ಪಾದಕ ದಾಳಿಗಳನ್ನು ತಡೆಗಟ್ಟಲು ಸಾಧ್ಯವಿತ್ತೆಂದು ರಾಷ್ಟ್ರೀಯ ಗುಪ್ತಚರದಳದ ವರಿಷ್ಠ ಸಿಸಿರಾ ಮೆಂಡಿಸ್ ಕಳೆದ ವಾರ ತನಿಖಾ ಸಮಿತಿಯ ಮುಂದೆ ಸಾಕ್ಷ ನುಡಿದಿದ್ದರು.

ಭಯೋತ್ಪಾದಕರಿಂದ ಎದುರಾಗಿದ್ದ ಬೆದರಿಕೆಯನ್ನು ಅಂದಾಜಿಸಲು ನಿಯಮಿತವಾಗಿ ಭದ್ರತಾ ಸಭೆಗಳನ್ನು ನಡೆಸಲು ಶ್ರೀಲಂಕಾ ಅಧ್ಯಕ್ಷರು ವಿಫಲರಾಗಿದ್ದರೆಂದು ಸಿಸಿರಾ ಮೆಂಡಿಸ್ ಸಂಸದೀಯ ಸಮಿತಿಯ ಮುಂದೆ ಹೇಳಿಕೆ ನೀಡಿದ್ದರು.

 ಆದಾಗ್ಯೂ, ಸಿರಿಸೇನಾ ಅವರು ಕಾರ್ಯಾಲಯವು ಗುಪ್ತಚರದಳದ ವರಿಷ್ಠರ ವಜಾಕ್ಕೆ ಅಧಿಕೃತವಾಗಿ ಕಾರಣವನ್ನು ನೀಡಿಲ್ಲ. ಸಂಸದೀಯ ತನಿಖಾ ಸಮಿತಿಯ ಮುಂದೆ ಬೇಹುಗಾರಿಕಾ ವರಿಷ್ಠ ಸಿಸಿರಾ ಮೆಂಡಿಸ್ ವಿವರಣೆ ನೀಡುತ್ತಿರುವಂತೆಯೇ, ಕಲಾಪದ ನೇರ ಪ್ರಸಾರವನ್ನು ಸ್ಧಗಿತಗೊಳಿಸಲಾಗಿತ್ತು.

ಸಂಸದೀಯ ತನಿಖಾ ಸಮಿತಿಯ ಮುಂದೆ ಹಾಜರಾಗುವುದಕ್ಕೆ ಅಧ್ಯಕ್ಷ ಸಿರಿಸೇನಾ ಅವರು ಯಾವುದೇ ಪೊಲೀಸ್‌ಹಾಗೂ ಗುಪ್ತಚರ ದಳದ ಅಧಿಕಾರಿಗಳಿಗೆ ಅನುಮತಿ ನಿರಾಕರಿಸಿದ್ದಾರೆಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News