ಮ್ಲಾಡೆನೊವಿಕ್-ಬಾಬಸ್‌ಗೆ ಮಹಿಳಾ ಡಬಲ್ಸ್ ಪ್ರಶಸ್ತಿ

Update: 2019-06-09 18:48 GMT

ಪ್ಯಾರಿಸ್, ಜೂ.9: ಹಂಗೇರಿಯದ ಟಿಮಿಯಾ ಬಾಬಸ್ ಹಾಗೂ ಫ್ರಾನ್ಸ್ ನ ಕ್ರಿಸ್ಟಿನಾ ಮ್ಲಾಡೆನೊವಿಕ್ ಫ್ರೆಂಚ್ ಓಪನ್‌ನ ಮಹಿಳೆಯರ ಡಬಲ್ಸ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.

  ರವಿವಾರ ಇಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಬಾಬಸ್-ಮ್ಲಾಡೆನೊವಿಕ್ ಜೋಡಿ ಚೀನಾದ ಡುಯಾನ್ ಯಿಂಗ್‌ಯಿಂಗ್ ಹಾಗೂ ಝೆಂಗ್ ಸೈಸೈ ಅವರನ್ನು 6-2, 6-3 ನೇರ ಸೆಟ್‌ಗಳಿಂದ ಸೋಲಿಸಿತು. ಕಳೆದ ವರ್ಷ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಜಯಿಸಿದ್ದ ಎರಡನೇ ಶ್ರೇಯಾಂಕದ ಬಾಬಸ್-ಮ್ಲಾಡೆನೊವಿಕ್ ಒಟ್ಟಿಗೆ ಎರಡನೇ ಗ್ರಾನ್‌ಸ್ಲಾಮ್ ಪ್ರಶಸ್ತಿ ಜಯಿಸಿದರು. ಈ ವರ್ಷದ ಆಸ್ಟ್ರೇಲಿಯನ್ ಓಪನ್‌ನಲ್ಲಿ ಈ ಜೋಡಿ ಎರಡನೇ ಸ್ಥಾನ ಪಡೆದಿತ್ತು. ಮ್ಲಾಡೆನೊವಿಕ್‌ಗೆ ಇದು ಮೂರನೇ ಪ್ರಮುಖ ಪ್ರಶಸ್ತಿ. ತಮ್ಮದೇ ದೇಶದ ಕರೊಲಿನ್ ಗಾರ್ಸಿಯಾ ಜೊತೆಗೂಡಿ 2016ರಲ್ಲಿ ಫ್ರೆಂಚ್ ಓಪನ್ ಪ್ರಶಸ್ತಿ ಜಯಿಸಿದ್ದರು. ಈಗ ಫ್ರೆಂಚ್ ಓಪನ್‌ನ ನೂತನ ಡಬಲ್ಸ್ ಚಾಂಪಿಯನ್ ಆಗಿರುವ ಮ್ಲಾಡೆನೊವಿಕ್ ಸೋಮವಾರ ಬಿಡುಗಡೆಯಾಗಲಿರುವ ಡಬ್ಲುಟಿಎ ರ್ಯಾಂಕಿಂಗ್‌ನಲ್ಲಿ ಝೆಕ್‌ನ ಕಟೆರಿನಾ ಸಿನಿಯಾಕೋವಾರಿಂದ ನಂ.1 ಸ್ಥಾನ ವಶಕ್ಕೆ ಪಡೆಯಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News