ಗಿರೀಶ್ ಕಾರ್ನಾಡ್ ನಿಧನ: ಜಲಸಂಪನ್ಮೂಲ ಇಲಾಖೆ ಸಭೆ ಮುಂದೂಡಿಕೆ

Update: 2019-06-10 12:36 GMT

ಬೆಂಗಳೂರು, ಜೂ. 10: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತಿ ಹಿರಿಯ ಸಾಹಿತಿ, ನಟ, ನಿರ್ದೇಶಕ ಗಿರೀಶ್ ಕಾರ್ನಾಡ್ ನಿಧನದ ಹಿನ್ನೆಲೆಯಲ್ಲಿ ಇಂದು ನಡೆಯಬೇಕಿದ್ದ ಜಲಸಂಪನ್ಮೂಲ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಸಭೆಯನ್ನು ನಾಳೆಗೆ(ಜೂ.11) ಮುಂದೂಡಲಾಗಿದೆ.

ಸೋಮವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ಸಭೆ ನಿಗದಿಯಾಗಿತ್ತು. ಆದರೆ, ಗಿರೀಶ್ ಕಾರ್ನಾಡ್ ನಿಧನರಾದ ಹಿನ್ನೆಲೆಯಲ್ಲಿ ಸಂತಾಪ ಸೂಚಿಸಿ ಸಭೆಯನ್ನು ನಾಳೆಗೆ ಮುಂದೂಡಿಕೆ ಮಾಡಲಾಯಿತು.

ಶ್ರೇಷ್ಠ ವ್ಯಕ್ತಿ: ಕರ್ನಾಟಕ ರಾಜ್ಯ ಕಂಡಂತಹ ಅಪರೂಪದ ಸಾಹಿತಿ, ಕಲಾವಿದ ಗಿರೀಶ್ ಕಾರ್ನಾಡ್ ಅವರು ನಿಧನರಾಗಿರುವುದು ಅತೀವ ನೋವು ತಂದಿದೆ. ರಾಜ್ಯ ಕಂಡ ಅತ್ಯಂತ ಶ್ರೇಷ್ಠ ವ್ಯಕ್ತಿಯೊಬ್ಬರನ್ನು ಕಳೆದುಕೊಂಡಿದ್ದು, ಅವರ ನಿಧನದಿಂದ ಸಾಹಿತ್ಯ ಮತ್ತು ಕಲಾ ಕ್ಷೇತ್ರ ಬಡವಾಗಿದೆ ಎಂದು ಉಪಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್ ಸಂತಾಪ ಸೂಚಿಸಿದರು.

ಇದೇ ವೇಳೆ ಮಾತನಾಡಿದ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್, ಕಾರ್ನಾಡ್ ಅವರ ಕುಟುಂಬದ ಸದಸ್ಯರು ಸರಕಾರಿ ಗೌರವ ಬೇಡ ಎಂದು ಮನವಿ ಮಾಡಿದೆ. ಆದರೂ, ಸರಕಾರ ತನ್ನ ಕರ್ತವ್ಯ ನಿರ್ವಹಿಸಲಿದೆ. ಒಂದು ದಿನ ಸರಕಾರ ರಜೆ ಮತ್ತು ಮೂರು ದಿನ ಶೋಕಾಚರಣೆ ಘೋಷಣೆ ಮಾಡಲಾಗಿದೆ ಎಂದರು.

ಸಭೆಯಲ್ಲಿ ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು, ಮೇಲ್ಮನೆ ಸದಸ್ಯ ತಿಪ್ಪೇಸ್ವಾಮಿ, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್ ಸೇರಿದಂತೆ ಜಲಸಂಪನ್ಮೂಲ ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.

‘ಮುಖ್ಯಮಂತ್ರಿ ಕುಮಾರಸ್ವಾಮಿಯವರ ಸೂಚನೆ ಮೇರೆಗೆ ಇಂದು ನಡೆಯಬೇಕಿದ್ದ ಸಭೆಯನ್ನು ನಾಳೆಗೆ ಮುಂದೂಡಲಾಗಿದೆ. ನಾಳಿನ ಸಭೆಯಲ್ಲಿ ಜಲಸಂಪನ್ಮೂಲ ಹಾಗೂ ಲೋಕೋಪಯೋಗಿ ಇಲಾಖೆಯ ಅಭಿವೃದ್ಧಿ ಕಾರ್ಯಗಳು, ಬಜೆಟ್ ಅನುದಾನದ ಬಗ್ಗೆ ಸದ್ಬಳಕೆ ಕುರಿತು ಚರ್ಚಿಸಲಾಗುವುದು’

-ಡಾ.ಜಿ.ಪರಮೇಶ್ವರ್, ಉಪಮುಖ್ಯಮಂತ್ರಿ

‘ಹಿರಿಯ ಸಾಹಿತಿ, ಚಿಂತಕ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ್ ಕಾರ್ನಾಡ್ ಅವರ ನಿಧನದಿಂದ ನಾಡಿನ ಬಹುಮುಖ್ಯ ಸಾಕ್ಷಿಪ್ರಜ್ಞೆಯ ದನಿ ಮೌನವಾದಂತಾಗಿದೆ. ಈ ದುರಿತದ ಕಾಲದಲ್ಲಿ ಅವರು ನಮ್ಮಿಡನೆ ಇನ್ನಷ್ಟು ಕಾಲ ಇರಬೇಕಿತ್ತು. ಅವರ ಸಾವಿನ ಶೋಕದಲ್ಲಿ ನಾನು ಭಾಗಿಯಾಗಿದ್ದೇನೆ’

-ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News