ನನ್ನ ವಿರುದ್ಧ ಕ್ರಿಕೆಟ್ ಮಂಡಳಿ ಪಿತೂರಿ: ಶಹಝಾದ್

Update: 2019-06-10 18:45 GMT

ಲಂಡನ್, ಜೂ.10: ‘‘ನಾನು ಮೆಗಾ ಟೂರ್ನಿಯಲ್ಲಿ ಆಡುವಷ್ಟು ಫಿಟ್ ಆಗಿದ್ದರೂ ಅಫ್ಘಾನ್ ತಂಡದಿಂದ ನನ್ನನ್ನು ಹೊರಹಾಕಲು ಕ್ರಿಕೆಟ್ ಮಂಡಳಿ ಪಿತೂರಿ ಮಾಡಿದೆ’’ ಎಂದು ಅಫ್ಘಾನಿಸ್ತಾನದ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಮುಹಮ್ಮದ್ ಶಹಝಾದ್ ಸೋಮವಾರ ಆರೋಪಿಸಿದ್ದಾರೆ.

 ಶಹಝಾದ್‌ಗೆ ಪಾಕಿಸ್ತಾನ ವಿರುದ್ಧ ವಿಶ್ವಕಪ್‌ನ ಅಭ್ಯಾಸ ಪಂದ್ಯದಲ್ಲಿ ಎಡ ಮಂಡಿಗೆ ಗಾಯವಾಗಿತ್ತು. ಕ್ರಮವಾಗಿ ಜೂ.1 ಹಾಗೂ 4 ರಂದು ನಡೆದ ಆಸ್ಟ್ರೇಲಿಯ ಹಾಗೂ ಶ್ರೀಲಂಕಾ ವಿರುದ್ಧ ವಿಶ್ವಕಪ್ ಪಂದ್ಯದಲ್ಲಿ ತಂಡಕ್ಕೆ ವಾಪಸಾಗಿದ್ದರು. ಆದರೆ,ಜೂ.8 ರಂದು ನ್ಯೂಝಿಲ್ಯಾಂಡ್ ವಿರುದ್ಧ ಪಂದ್ಯಕ್ಕಿಂತ ಮೊದಲು ಮಂಡಿನೋವಿನಿಂದಾಗಿ ಶಹಝಾದ್ ಟೂರ್ನಿಯ ಉಳಿದ ಪಂದ್ಯಗಳಿಂದ ಹೊರಗುಳಿಯಲಿದ್ದಾರೆ ಎಂದು ಆಯೋಜಕರು ಘೋಷಿಸಿದರು.

‘‘ನಾನು ಆಡಲು ಫಿಟ್ ಆಗಿದ್ದರೂ ನನ್ನನ್ನು ಅನ್‌ಫಿಟ್ ಎಂದು ಹೇಗೆ ಪರಿಗಣಿಸಿದರೆಂದು ಗೊತ್ತಿಲ್ಲ. ಕ್ರಿಕೆಟ್ ಮಂಡಳಿಯ(ಎಸಿಬಿ)ಕೆಲವರು ನನ್ನ ವಿರುದ್ಧ ಪಿತೂರಿ ನಡೆಸಿದ್ದಾರೆ. ಕೇವಲ ಮ್ಯಾನೇಜರ್, ವೈದ್ಯರು ಹಾಗೂ ನಾಯಕರಿಗೆ ಮಾತ್ರ ನನ್ನ ಬದಲಾಯಿಸುತ್ತಿರುವ ವಿಚಾರ ಗೊತ್ತಿತ್ತು. ಕೋಚ್ ಫಿಲ್ ಸಿಮ್ಮಿನ್ಸ್‌ಗೆ ಕೂಡ ಆ ಬಳಿಕ ತಿಳಿದಿತ್ತು. ಈ ವಿಚಾರ ನನಗೆ ಆಘಾತ ತಂದಿತ್ತು’’ ಎಂದು ಶಹಝಾದ್ ಹೇಳಿದ್ದಾರೆ.

‘‘ನ್ಯೂಝಿಲ್ಯಾಂಡ್ ವಿರುದ್ಧ ಪಂದ್ಯಕ್ಕಿಂತ ಮೊದಲು ನಾನು ಕಠಿಣ ಅಭ್ಯಾಸ ನಡೆಸಿದ್ದೆ. ನನ್ನ ಫೋನ್ ಪರಿಶೀಲಿಸಿದ ಬಳಿಕವೇ ಮಂಡಿನೋವಿನಿಂದಾಗಿ ನನ್ನನ್ನು ವಿಶ್ವಕಪ್‌ನಿಂದ ಹೊರಗಿಟ್ಟಿರುವ ವಿಚಾರ ತಿಳಿದಿತ್ತು. ಟೀಮ್ ಬಸ್‌ನಲ್ಲಿದ್ದ ಯಾವ ಆಟಗಾರನಿಗೂ ಈ ವಿಷಯ ಗೊತ್ತಿರಲಿಲ್ಲ. ಈ ಸುದ್ದಿ ಕೇಳಿ ನನಗಾದ ಆಘಾತ ಅವರಿಗೂ ಆಗಿತ್ತು’’ ಎಂದು ಅಫ್ಘಾನ್‌ನ ಸ್ಫೋಟಕ ದಾಂಡಿಗ ಶಹಝಾದ್ ಹೇಳಿದ್ದಾರೆ.

 ರಶೀದ್ ಖಾನ್ ಹಾಗೂ ಮುಹಮ್ಮದ್ ನಬಿ ಅವರಂತೆಯೇ ಶಹಝಾದ್ ಕೂಡ ಅಫ್ಘಾನಿಸ್ತಾನದ ಪ್ರಮುಖ ಆಟಗಾರನಾಗಿ ಗುರುತಿಸಿಕೊಂಡಿದ್ದರು. ಆಸ್ಟ್ರೇಲಿಯ ಹಾಗೂ ಶ್ರೀಲಂಕಾ ವಿರುದ್ಧ ಆಡಿದ್ದ ಟೂರ್ನಿಯ ಮೊದಲೆರಡು ಪಂದ್ಯಗಳಲ್ಲಿ ಬ್ಯಾಟಿಂಗ್ ವೈಫಲ್ಯಕ್ಕೆ ಒಳಗಾಗಿದ್ದರು. ನಜೀಬುಲ್ಲಾ ಝದ್ರಾನ್(51 ರನ್) ಹಾಗೂ ರಹಮತ್ ಶಾ(43)ಹೊರತುಪಡಿಸಿ ಉಳಿದೆಲ್ಲಾ ಅಫ್ಘಾನ್ ಆಟಗಾರರು ವಿಫಲರಾಗಿದ್ದರು. ‘‘ಶಹಝಾದ್ ವಿಶ್ವಕಪ್‌ನಿಂದ ಹೊರ ಗುಳಿದಿರುವುದು ತಂಡಕ್ಕೆ ದೊಡ್ಡ ನಷ್ಟ. ಕಳೆದ ಎರಡು-ಮೂರು ವಾರಗಳಿಂದ ಶಹಝಾದ್ ಮಂಡಿನೋವಿನಿಂದ ಬಳಲುತ್ತಿದ್ದರು. ಹಾಗಾಗಿ ಅವರ ಬದಲಿಗೆ ಯುವಕೀಪರ್ ಇಕ್ರಂ ಅಲಿ ತಂಢವನ್ನು ಸೇರಿಕೊಳ್ಳಲಿದ್ದಾರೆ’’ ಎಂದು ಅಫ್ಘಾನ್ ನಾಯಕ ಗುಲ್ಬದ್ದೀನ್ ನೈಬ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News