ಚೆಂಡು ವಿರೂಪ ವದಂತಿ: ಆಸೀಸ್ ನಾಯಕ ಫಿಂಚ್ ಸ್ಪಷ್ಟನೆ

Update: 2019-06-10 18:48 GMT

ಲಂಡನ್, ಜೂ.10: ಮಾಜಿ ನಾಯಕ ಸ್ಟೀವ್ ಸ್ಮಿತ್ ಹಾಗೂ ಡೇವಿಡ್ ವಾರ್ನರ್ ಭಾಗಿಯಾಗಿದ್ದ ಚೆಂಡು ವಿರೂಪ ಪ್ರಕರಣದ ಕಳಂಕದಿಂದ ಆಸ್ಟ್ರೇಲಿಯ ಕ್ರಿಕೆಟ್ ತಂಡ ಹೊರಬರುತ್ತಿರುವಾಗಲೇ ಸಾಮಾಜಿಕ ಜಾಲತಾಣದಲ್ಲಿ ಮತ್ತೊಮ್ಮೆ ಆಸೀಸ್ ಆಟಗಾರರ ಮೇಲೆ ವಂಚಕರು ಎಂಬ ಆರೋಪ ಕೇಳಿಬಂದಿದೆ. ರವಿವಾರ ಭಾರತ ವಿರುದ್ಧ ವಿಶ್ವಕಪ್ ಪಂದ್ಯದ ವೇಳೆ ಸ್ಪಿನ್ನರ್ ಆ್ಯಡಮ್ ಝಾಂಪ ಸಂಶಯಾಸ್ಪದ ರೀತಿಯ ವರ್ತನೆಯೇ ಆಸೀಸ್ ಮೇಲಿನ ಈ ಆರೋಪಕ್ಕೆ ಕಾರಣವಾಗಿದೆ. ಝಾಂಪ ಪಂದ್ಯದ 11ನೇ ಓವರ್‌ನಲ್ಲಿ ಬೌಲಿಂಗ್ ಮಾಡುವ ಮೊದಲು ತನ್ನ ಜೇಬಿಗೆ ಕೈಹಾಕಿ ವಸ್ತುವೊಂದನ್ನು ಹೊರತೆಗೆದು ಚೆಂಡಿಗೆ ಉಜ್ಜುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ನಡೆದಿದೆ. ಆಸೀಸ್ ಆಟಗಾರರು ಮತ್ತೆ ವಂಚನೆ ಆಟ ಆಡುತ್ತಿದ್ದಾರೆ ಎಂದು ಕ್ರಿಕೆಟ್ ಅಭಿಮಾನಿಗಳು ಆರೋಪಿಸಿದ್ದಾರೆ.

 ಈ ಬಗ್ಗೆ ಸ್ಪಷ್ಟನೆ ನೀಡಿರುವ ಆಸೀಸ್ ನಾಯಕ ಆ್ಯರೊನ್ ಫಿಂಚ್, ‘‘ಝಾಂಪ ತನ್ನ ಜೇಬಿನಲ್ಲಿ ಕರವಸ್ತ್ರವನ್ನು ಇಟ್ಟುಕೊಂಡಿದ್ದರು. ಆ ಘಟನೆಯ ಬಗ್ಗೆ ನನಗೆ ಹೆಚ್ಚೇನೂ ಗೊತ್ತಿಲ್ಲ. ನನಗೆ ಗೊತ್ತಿರುವ ಪ್ರಕಾರ ಅವರ ಜೇಬಿನಲ್ಲಿ ಕರವಸ್ತ್ರವಿತ್ತು. ಅವರು ಪ್ರತಿ ಪಂದ್ಯವನ್ನು ಆಡುವಾಗಲೂ ಅದನ್ನು ಬಳಸುತ್ತಾರೆ. ನಾನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಫೋಟೊ ಅಥವಾ ವಿಡಿಯೋವನ್ನು ನೋಡಿಲ್ಲ. ಹಾಗಾಗಿ ಆ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ’’ಎಂದು ಸುದ್ದಿಗಾರರಿಗೆ ಫಿಂಚ್ ತಿಳಿಸಿದರು. 27ರ ಹರೆಯದ ಸ್ಪಿನ್ನರ್ ಝಾಂಪ ರವಿವಾರ ಭಾರತದ ಆರಂಭಿಕ ಜೋಡಿಗಳಾದ ಶಿಖರ್ ಧವನ್ ಹಾಗೂ ರೋಹಿತ್ ಶರ್ಮಾರಿಂದ ಕಠಿಣ ಸವಾಲು ಎದುರಿಸಿದ್ದರು. 6 ಓವರ್‌ಗಳಲ್ಲಿ 50 ರನ್ ನೀಡಿದ್ದ ಅವ ರು ಒಂದೂ ವಿಕೆಟನ್ನು ಪಡೆದಿರಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News