ರಸ್ತೆ ನಿರ್ಮಾಣಕ್ಕೂ ಮುನ್ನ ರೋಡ್ ಮ್ಯಾಪ್ ಸಿದ್ಧವಾಗಲಿ: ಡಾ.ಜಿ.ಪರಮೇಶ್ವರ್

Update: 2019-06-11 14:32 GMT

ಬೆಂಗಳೂರು, ಜೂ.11: ಮುಂದಿನ ಐದು ವರ್ಷಗಳಲ್ಲಿ ರಾಜ್ಯಾದ್ಯಂತ ರಸ್ತೆ ನಿರ್ಮಾಣ ಮಾಡುವ ಸಂಬಂಧ ರೋಡ್ ಮ್ಯಾಪ್ ಮಾಡುವುದು ಅಗತ್ಯವಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ತಿಳಿಸಿದ್ದಾರೆ.

ವಿಧನಾಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಸಮ್ಮೇಳನ ಸಭೆಯಲ್ಲಿ ಮಾತನಾಡಿದ ಅವರು, 2013 ರಿಂದ 2019ರ ಅವಧಿಯಲ್ಲಿ ರಸ್ತೆ ನಿರ್ಮಾಣಕ್ಕಾಗಿಯೇ ಸುಮಾರು 50 ಸಾವಿರ ಕೋಟಿ ರೂ.ಹಣ ವೆಚ್ಚ ಮಾಡಲಾಗಿದೆ. ರಸ್ತೆ ನಿರ್ವಹಣೆ ಹೊರತು ಪಡಿಸಿ, ಇಷ್ಟು ಹಣ ವೆಚ್ಚ ಮಾಡಿದ್ದರೂ ಇನ್ನೂ ರಸ್ತೆ ನಿರ್ಮಾಣದ ಕೆಲಸವೇ ಪೂರ್ಣಗೊಂಡಿಲ್ಲ. ಇದಕ್ಕೆ ಹಣ ಹೆಚ್ಚು ಪೋಲಾಗುತ್ತಿದೆ. ಹೀಗಾಗಿ ಮುಂದಿನ ಐದು ವರ್ಷಕ್ಕೆ ರೋಡ್ ಮ್ಯಾಪ್ ಮಾಡಿಕೊಂಡು ಇಂತಿಷ್ಟು ಹಣ ನಿಗದಿ ಮಾಡುವುದು ಉತ್ತಮ ಎಂದು ಅಭಿಪ್ರಾಯಪಟ್ಟರು.

ಇಲಾಖೆಯಲ್ಲಿ ಯಾವುದೇ ಯೋಜನೆ ಗುತ್ತಿಗೆ ನೀಡುವ ಮೊದಲು ಯೋಜನೆ ಅಂದಾಜು ವೆಚ್ಚ ನಿಗದಿ ಮಾಡಲಾಗುತ್ತದೆ. ಆದರೆ, ನಿಗದಿ ಮಾಡಿದ ಮೊತ್ತಕ್ಕಿಂತಲೂ ಶೇ.40 ಕ್ಕೂ ಹೆಚ್ಚಾಗಿ ಅವೈಜ್ಞಾನಿಕವಾಗಿ ಗುತ್ತಿಗೆದಾರರು ಹಣ ವೆಚ್ಚ ಮಾಡುತ್ತಿದ್ದಾರೆ. ಮತ್ತೊಂದೆಡೆ ನಿಗದಿ ಮಾಡಿದ ಮೊತ್ತಕ್ಕಿಂತಲೂ ಕಡಿಮೆ ವೆಚ್ಚಕ್ಕೆ ಯೋಜನೆಯನ್ನು ಗುತ್ತಿಗೆದಾರರು ಪೂರ್ಣಗೊಳಿಸುತ್ತಿದ್ದಾರೆ. ಇದರಿಂದ ಗುಣಮಟ್ಟದ ಮೇಲೆ ಅನುಮಾನ ಮೂಡುವಂತೆ ಮಾಡುತ್ತಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಹೆಚ್ಚು ಹಾಗೂ ಕಡಿಮೆ ಮೊತ್ತಕ್ಕೆ ಯೋಜನೆ ಪೂರ್ಣಗೊಳ್ಳುವುದಾದರೆ ಇಲಾಖೆಯಿಂದ ಅಂದಾಜು ವೆಚ್ಚವನ್ನು ನಿಗದಿ ಮಾಡುವ ಅನಿವಾರ್ಯತೆ ಯಾಕೆ. ಮುಂದಿನ ದಿನದಲ್ಲಿ ನಿಗದಿ ಆದ ಮೊತ್ತಕ್ಕೆ ಯೋಜನೆ ಪೂರ್ಣಗೊಳ್ಳುವಂತೆ ನೋಡಿಕೊಳ್ಳಿ ಎಂದು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಗುತ್ತಿಗೆದಾರರು ಯೋಜನೆಯನ್ನು ಇಂತಿಷ್ಟು ಅವಧಿಯೊಳಗೆ ಪೂರ್ಣಗೊಳಿಸಬೇಕು ಎಂಬ ನಿಯಮವಾಗಿರುತ್ತದೆ. ಆದರೂ ಅವಧಿಯೊಳಗೆ ಯಾರೂ ಕಾಮಗಾರಿ ಪೂರ್ಣಗೊಳಿಸುತ್ತಿಲ್ಲ. ಜೊತೆಗೆ ಆ ಯೋಜನೆಯ ಮೊತ್ತ ಕೂಡ ಹೆಚ್ಚು ಮಾಡಲಾಗುತ್ತಿದೆ. ಇದರಿಂದ ಅನಗತ್ಯವಾಗಿ ಹಣ ಪೋಲಾಗುತ್ತಿದೆ. ಈ ಬಗ್ಗೆಯೂ ಅಧಿಕಾರಿಗಳು ಗುತ್ತಿಗೆದಾರರಿಗೆ ಕಟ್ಟುನಿಟ್ಟಾಗಿ ಅವಧಿಯೊಳಗೆ ಪೂರ್ಣಗೊಳಿಸಲು ಸೂಚಿಸಿ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News