ರೈತರ ಖಾತೆಗಳಿಂದ ಸಾಲ ಮನ್ನಾ ಹಣ ವಾಪಸ್: ಸಿಎಂ ಕುಮಾರಸ್ವಾಮಿ ಕ್ಷಮೆ ಕೇಳಲಿ- ಯಡಿಯೂರಪ್ಪ

Update: 2019-06-11 14:34 GMT

ಬೆಂಗಳೂರು, ಜೂ.11: ಯಾದಗಿರಿ ಜಿಲ್ಲೆಯಲ್ಲಿ ರೈತರ ಬ್ಯಾಂಕ್ ಖಾತೆಗಳಿಂದ ಸಾಲಮನ್ನಾ ಆಗಿರುವ ಹಣ ವಾಪಾಸ್ ಆಗಿರುವ ಸಂಬಂಧ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ರೈತರ ಕ್ಷಮೆಯಾಚಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಒತ್ತಾಯಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾದಗಿರಿಯಲ್ಲಿ ಚುನಾವಣೆಗೂ ಮುನ್ನ ಸಾವಿರಾರು ರೈತರ ಸಾಲಮನ್ನಾ ಮಾಡಿ ಬ್ಯಾಂಕ್‌ಗಳಿಗೆ ಹಣ ಜಮಾವಣೆ ಮಾಡಲಾಗಿತ್ತು. ಆದರೆ, ಚುನಾವಣೆ ಮುಗಿದ ಕೂಡಲೇ ಆ ಹಣ ವಾಪಸ್ ತೆಗೆದುಕೊಳ್ಳಲಾಗಿದೆ. ಇದು ದೇಶದ ಇತಿಹಾಸದಲ್ಲಿ ಕಂಡು ಕೇಳರಿಯದ ಘಟನೆ. ಹಿಂದೆಂದೂ ಈ ರೀತಿ ನಡೆದಿಲ್ಲ ಎಂದು ಆರೋಪಿಸಿದರು.

ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ಸಾಲಮನ್ನಾ ಮಾಡುವುದಾಗಿ ಹೇಳಿದ್ದ ಎಚ್.ಡಿ.ಕುಮಾರಸ್ವಾಮಿ ಇದೀಗ ರೈತರಿಗೆ ದ್ರೋಹ ಮಾಡಿರುವುದು ಸ್ಪಷ್ಟವಾಗಿದೆ. ಹೀಗಾಗಿ ಬರ, ಸಾಲಮನ್ನಾ ಹಾಗೂ ಜಿಂದಾಲ್ಗೆ ಭೂಮಿ ಮಾರಾಟ ವಿಚಾರಗಳನ್ನು ಮುಂದಿಟ್ಟುಕೊಂಡು ಇದೇ ಜೂ.14, 15, 16 ರಂದು ಬಿಜೆಪಿ ವತಿಯಿಂದ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ಮಾಡುವುದಾಗಿ ಅವರು ಎಚ್ಚರಿಕೆ ನೀಡಿದರು.

ಜಿಂದಾಲ್ ಭೂಮಿ ಮಾರಾಟ ಮಾಡುವ ತೀರ್ಮಾನ ಮಾಡಿರುವ ಬಗ್ಗೆ ತಮಗೆ ಮಾಹಿತಿ ಇಲ್ಲ. ಆದರೆ, ಭೂಮಿ ಮಾರಾಟಕ್ಕೆ ನಮ್ಮ ವಿರೋಧವಿದೆ. ಈ ಮಾರಾಟ ಖಂಡಿಸಿ ಹೋರಾಟ ಮಾಡುತ್ತೇವೆ. ಆದರೆ ಜಿಂದಾಲ್ ಗೆ ಭೂಮಿಯನ್ನು ಗುತ್ತಿಗೆ ನೀಡುವ ಅವಧಿ ಮುಂದುವರಿಸಲು ನಮ್ಮ ಅಭ್ಯಂತರವಿಲ್ಲ. ಒಟ್ಟಾರೆ ಈ ಪ್ರಕರಣದಲ್ಲಿ ಸರಕಾರ ಲಂಚಕ್ಕೆ ತಲೆಬಾಗದೆ, ಕಾನೂನಿನ ಚೌಕಟ್ಟಿನಲ್ಲಿ ಸರಕಾರ ಏನು ಮಾಡಬೇಕು ಮಾಡಲಿ ಎಂದು ಅವರು ಹೇಳಿದರು.

ಐಎಂಎ ಜ್ಯುವೆಲ್ಸ್ ಅಂಗಡಿ ಮಾಲಕ ಮನ್ಸೂರ್ ಖಾನ್ ಸಾವಿರಾರು ಮಂದಿಗೆ ಹಣದ ವಂಚನೆ ಮಾಡಿರುವುದು ಸ್ಪಷ್ಟವಾಗಿದೆ. ಸಾರ್ವಜನಿಕರಿಂದ ಹಣವನ್ನು ಪಡೆದು ನಾಪತ್ತೆ ಆಗಿರುವ ಆತನನ್ನು ಕೂಡಲೆ ಪತ್ತೆ ಹಚ್ಚುವ ಕೆಲಸವಾಗಲಿ. ಈ ವಂಚನೆಯ ಹಿಂದೆ ಮಾಜಿ ಸಚಿವ ರೋಷನ್‌ಬೇಗ್ ಅಥವಾ ಮತ್ತೊಬ್ಬರಿದ್ದಾರೆ ಎಂದು ಹೆಸರು ಹೇಳಲು ಬಯಸುವುದಿಲ್ಲ. ಕೂಡಲೆ ಜನರ ಹಣವನ್ನು ವಾಪಸ್ ಕೊಡಿಸುವಂತಹ ಕೆಲಸವಾಗಲಿ.

-ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News