ವಿಶ್ವಸಂಸ್ಥೆ ಸಭೆ: ಫೆಲೆಸ್ತೀನ್ ಎನ್‍ಜಿಒ ವಿರುದ್ಧದ ಇಸ್ರೇಲ್ ನಿಲುವು ಬೆಂಬಲಿಸಿದ ಭಾರತ

Update: 2019-06-12 08:34 GMT

ಜಿನೀವಾ, ಜೂ.12: ಅಪರೂಪದ ಕ್ರಮವೊಂದರಲ್ಲಿ ಫೆಲೆಸ್ತೀನ್ ಸರ್ಕಾರೇತರ ಸಂಸ್ಥೆಯೊಂದಕ್ಕೆ ಕನ್ಸಲ್ಟೇಟಿವ್ ಸ್ಥಾನಮಾನ ನೀಡುವುದಕ್ಕೆ ಆಕ್ಷೇಪಿಸಿ ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಮಂಡಳಿ ಸಭೆಯಲ್ಲಿ ಇಸ್ರೇಲ್ ಮಂಡಿಸಿದ ನಿಲುವನ್ನು ಭಾರತ ಬೆಂಬಲಿಸಿದೆ.

ಫೆಲೆಸ್ತೀನಿಯನ್ ಅಸೋಸಿಯೇಶನ್ ಫಾರ್ ಹ್ಯೂಮನ್ ರೈಟ್ಸ್-ವಿಟ್ನೆಸ್ ಎಂಬ ಸಂಘಟನೆ ಹಮಾಸ್ ಜತೆ ತನ್ನ ಸಂಬಂಧದ ಕುರಿತಂತೆ ಮಾಹಿತಿ ಬಹಿರಂಗಗೊಳಿಸಿಲ್ಲ ಎಂದು ಇಸ್ರೇಲ್ ಆರೋಪಿಸಿದೆ.

ತನ್ನ ಕರಡು ನಿರ್ಣಯ ``ಎಲ್.15'' ಅನ್ನು ಇಸ್ರೇಲ್ ಜೂನ್ 6ರಂದು ನಡೆದ ಮಂಡಳಿ ಸಭೆಯಲ್ಲಿ ಮಂಡಿಸಿತ್ತಲ್ಲದೆ ಸಂಘಟನೆಯ ಅರ್ಜಿಯನ್ನು ವಾಪಸ್ ಕಳುಹಿಸುವಂತೆಯೂ ಕೋರಿತ್ತು. ಈ ಕರಡು ನಿರ್ಣಯದ  ಪರವಾಗಿ 28 ದೇಶಗಳು ಮತ ಚಲಾಯಿಸಿದ್ದರೆ 15 ದೇಶಗಳು ಅದರ ವಿರುದ್ಧ ಮತ ಚಲಾಯಿಸಿದ್ದವು, ಐದು ದೇಶಗಳ ಪ್ರತಿನಿಧಿಗಳು ಗೈರು ಹಾಜರಾಗಿದ್ದರು. ನಿರ್ಣಯದ ಪರ ಮತ ಚಲಾಯಿಸಿದ ದೇಶಗಳ ಪೈಕಿ ಭಾರತದ ಹೊರತಾಗಿ ಬ್ರೆಝಿಲ್, ಕೆನಡಾ, ಕೊಲಂಬಿಯ, ಫ್ರಾನ್ಸ್, ಜರ್ಮನಿ, ಐರ್ ಲ್ಯಾಂಡ್, ಜಪಾನ್, ಕೊರಿಯ, ಉಕ್ರೇನ್, ಇಂಗ್ಲೆಂಡ್ ಮತ್ತು ಅಮೆರಿಕಾ ಇವೆ.

ಭಾರತ ತನ್ನ ಪರ ನಿಂತಿರುವುದಕ್ಕೆ ಧನ್ಯವಾದ ಕೋರಿ  ಭಾರತದಲ್ಲಿನ ಇಸ್ರೇಲ್ ರಾಯಭಾರ ಕಚೇರಿಯ ಉಪಮುಖ್ಯಸ್ಥ ಮಾಯಾ ಕಡೋಶ್ ಟ್ವೀಟ್  ಮಾಡಿದ್ದಾರೆ.

ಇಸ್ರೇಲ್ ನ ಎನ್‍ಜಿಒ ವಿಟ್ನೆಸ್  ಸಲ್ಲಿಸಿದ್ದ ಅರ್ಜಿಯನ್ನು ವಾಪಸ್ ಕಳುಹಿಸಲು ವಿಶ್ವ ಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಮಂಡಳಿ ನಿರ್ಧರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News