ಐಎಂಎ ವಂಚನೆ ಪ್ರಕರಣ: ಸಿಬಿಐ ತನಿಖೆಗೆ ಶಾಸಕ ರೋಷನ್ ಬೇಗ್ ಆಗ್ರಹ

Update: 2019-06-12 14:35 GMT

ಬೆಂಗಳೂರು, ಜೂ.12: ಐ ಮಾನಿಟರಿ ಅಡ್ವೈಸರಿ(ಐಎಂಎ) ಸಂಸ್ಥೆಯ ಬಹುಕೋಟಿ ವಂಚನೆ ಪ್ರಕರಣದ ತನಿಖೆಯನ್ನು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸಿಬಿಐಗೆ ಶಿಫಾರಸ್ಸು ಮಾಡಬೇಕು ಎಂದು ಕಾಂಗ್ರೆಸ್ ಹಿರಿಯ ಶಾಸಕ ಹಾಗೂ ಮಾಜಿ ಸಚಿವ ಆರ್.ರೋಷನ್ ಬೇಗ್ ಆಗ್ರಹಿಸಿದರು.

ಬುಧವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈಗಾಗಲೇ ಸರಕಾರ ಎಸ್‌ಐಟಿ ರಚನೆ ಮಾಡಿರುವುದಕ್ಕೆ ನನ್ನ ಸ್ವಾಗತವಿದೆ. ಆದರೆ, ಈ ಪ್ರಕರಣದ ತ್ವರಿತ ವಿಚಾರಣೆಗಾಗಿ ಸಿಬಿಐ ತನಿಖೆ ಸೂಕ್ತ ಎಂದರು.

ಈ ವಿಚಾರದಲ್ಲಿ ನಾನು ಮುಖ್ಯಮಂತ್ರಿ ಹಾಗೂ ಗೃಹ ಸಚಿವರನ್ನು ಭೇಟಿ ಮಾಡಿ ಮನವಿ ಮಾಡುತ್ತೇನೆ. ವಂಚಕ ಮನ್ಸೂರ್ ಖಾನ್, ಆತನ ವ್ಯವಹಾರಗಳಿಗೆ ನನಗಾಗಲಿ, ನನ್ನ ಕುಟುಂಬದ ಸದಸ್ಯರಿಗಾಗಲಿ ಯಾವುದೇ ರೀತಿಯ ಸಂಬಂಧವಿಲ್ಲ. ಆತನ ಸಂಸ್ಥೆಯಲ್ಲಿ ಹೂಡಿಕೆ ಮಾಡುವಂತೆ ನಾನು ಯಾರಿಗೂ ಪ್ರೋತ್ಸಾಹವನ್ನು ನೀಡಿಲ್ಲ ಎಂದು ಅವರು ಹೇಳಿದರು.

ಐಎಂಎ ಸಂಸ್ಥೆಯ ಹಗರಣದ ಜೊತೆಗೆ ಆಂಬಿಡೆಂಟ್, ಇಂಜಾಝ್, ಆಲಾ, ಕ್ಯಾಪಿಟಲ್, ಬುರಾಕ್ ಸೇರಿದಂತೆ ಸುಮಾರು 13 ಕಂಪೆನಿಗಳು ಇಂತಹ ವಂಚನೆ ಪ್ರಕರಣಗಳಲ್ಲಿ ಭಾಗಿಯಾಗಿವೆ. ಈ ಎಲ್ಲ ಪ್ರಕರಣಗಳನ್ನು ಸಿಬಿಐ ತನಿಖೆಗೆ ವಹಿಸಿ ಜನರಿಗೆ ನ್ಯಾಯ ಒದಗಿಸುವ ಕೆಲಸ ಮಾಡಬೇಕು ಎಂದು ರೋಷನ್ ಬೇಗ್ ಹೇಳಿದರು.

ಮನ್ಸೂರ್ ಖಾನ್ ನಾಪತ್ತೆಯಾಗುವ ಮುನ್ನ 36 ಗಂಟೆಯಲ್ಲಿ ಆತ ಯಾರ ಜೊತೆಯಲ್ಲಿ ಮೊಬೈಲ್‌ನಲ್ಲಿ ಮಾತನಾಡಿದ್ದಾನೆ. ವಾಟ್ಸ್ ಆ್ಯಪ್‌ನಲ್ಲಿ ಆತನ ಜೊತೆ ಸಂಪರ್ಕದಲ್ಲಿದ್ದವರು ಯಾರು? ಎಂಬುದರ ಬಗ್ಗೆ ಕಾಲ್ ಡಿಟೇಲ್ಸ್ ತೆಗೆಯಲಿ, ಸತ್ಯಾಂಶ ಹೊರ ಬರುತ್ತದೆ. ಯಾರೋ ಒಬ್ಬ ವಂಚಕ ನನಗೆ 400 ಕೋಟಿ ರೂ.ಕೊಟ್ಟಿದ್ದೇನೆ ಎಂದು ಆಡಿಯೋ ಕಳುಹಿಸಿ ಬಿಟ್ಟರೆ ಅದನ್ನು ನಂಬುವುದು ಹೇಗೆ. ಈ ಪ್ರಕರಣ ಸಿಬಿಐ ಮೂಲಕ ತನಿಖೆಯಾಗಲಿ ಎಂದು ಅವರು ಹೇಳಿದರು.

ಸಿಬಿಐ ತನಿಖೆಗೆ ಒಪ್ಪಿಸಿದರೆ ಅವರು ರೆಡ್ ಅಲರ್ಟ್ ಘೋಷಣೆ ಮಾಡಿ, ತ್ವರಿತ ಗತಿಯಲ್ಲಿ ತನಿಖೆ ಮಾಡುತ್ತಾರೆ. ಮನ್ಸೂರ್ ಖಾನ್ ತನ್ನ ಖಾತೆಗೆ ಒಂದು ಸಾವಿರ ಕೋಟಿ ರೂ.ಗಳನ್ನು ಹಾಕಿಸಿಕೊಂಡಿದ್ದಾನೆ ಎಂಬ ಮಾಹಿತಿಯಿದೆ. ಆತನ ಬ್ಯಾಂಕ್ ಖಾತೆಯನ್ನು ಜಪ್ತಿ ಮಾಡಿ, ಆ ಹಣವನ್ನು ಹೂಡಿಕೆದಾರರಿಗೆ ಹಂಚಿಕೆ ಮಾಡಬೇಕು ಎಂದು ಅವರು ಒತ್ತಾಯಿಸಿದರು.

ನಾನು ಪೂರ್ವ ನಿಯೋಜಿತ ಕಾರ್ಯಕ್ರಮದ ಹಿನ್ನೆಲೆಯಲ್ಲಿ ದಿಲ್ಲಿಗೆ ಹೋಗಿದ್ದೆ. ಈ ವೇಳೆ ಒಂದು ಮನ್ಸೂರ್ ಖಾನ್ ಅವರದ್ದು ಎನ್ನಲಾದ ಆಡಿಯೋ ಬಿಡುಗಡೆಯಾಗಿ, ಅದರಲ್ಲಿ ನಾನು 400 ಕೋಟಿ ರೂ.ಗಳನ್ನು ಪಡೆದಿರುವುದಾಗಿ ಆಪಾದಿಸಲಾಗಿದೆ. ನಾನಾಗಲಿ, ನನ್ನ ಮಗನಾಗಲಿ ಐಎಂಎ ಸಂಸ್ಥೆಯಿಂದ ಯಾವುದೇ ಹಣವನ್ನು ಪಡೆದಿಲ್ಲ ಎಂದು ಅವರು ಸ್ಪಷ್ಟನೆ ನೀಡಿದರು.

ಕಾರ್ಪೋರೇಟ್ ಸಾಮಾಜಿಕ ಹೊಣೆಗಾರಿಕೆ ಯೋಜನೆಯಡಿ ನನ್ನ ಉರ್ದು ದಿನಪತ್ರಿಕೆ ‘ಸಿಯಾಸತ್’ಗೆ ನೆರವು ನೀಡುವುದಾಗಿ ಹೇಳಿ ಕಳೆದ ಒಂದೂವರೆ ವರ್ಷದಿಂದ ಅವರು ಸಹಕಾರ ನೀಡುತ್ತಿದ್ದರು. ಅಲ್ಲದೇ, ನನ್ನ ಮತ ಕ್ಷೇತ್ರದಲ್ಲಿನ ವಿ.ಕೆ.ಉಬೇದುಲ್ಲಾ ಸರಕಾರಿ ಉರ್ದು ಶಾಲೆಯನ್ನು ಖಾಸಗಿ ಸಹಭಾಗಿತ್ವದಡಿಯಲ್ಲಿ ಅಭಿವೃದ್ಧಿಪಡಿಸಿದ್ದಾರೆ ಎಂದು ರೋಷನ್ ಬೇಗ್ ಹೇಳಿದರು.

ಸಚಿವ ಝಮೀರ್ ಅಹ್ಮದ್ ಖಾನ್ ನನ್ನ ಕಿರಿಯ ಸಹೋದರ. ಆತನ ಮೇಲೆ ನನಗೆ ಅಪನಂಬಿಕೆಯಿಲ್ಲ. ರಾಜ್ಯ ಕಾಂಗ್ರೆಸ್ ನಾಯಕತ್ವದ ವಿರುದ್ಧ ಧ್ವನಿ ಎತ್ತುತ್ತಿದ್ದಂತೆ ನನ್ನ ವಿರುದ್ಧ ಈ ರೀತಿಯ ಆಧಾರ ರಹಿತವಾದ ಗಂಭೀರ ಆಪಾದನೆಗಳನ್ನು ಮಾಡಲಾಗುತ್ತಿದೆ. ನಾನು ಐಎಂಎ ಸಂಸ್ಥೆಯಿಂದ ಚೆಕ್ ಮೂಲಕ ಐದು ಕೋಟಿ ರೂ.ಗಳನ್ನು ಪಡೆದಿಲ್ಲ ಎಂದು ಅವರು ಹೇಳಿದರು.

ರಾಜಕೀಯವಾಗಿ ನನ್ನನ್ನು ಮುಗಿಸಲು ಈ ಐಎಂಎ ಸಂಸ್ಥೆಯ ಹಗರಣವನ್ನು ಸೃಷ್ಟಿಸಲಾಗಿದೆ ಎಂಬ ಅನುಮಾನ ಮೂಡುತ್ತಿದೆ. ನಾನು ಕೇವಲ ಒಬ್ಬ ರಾಜಕಾರಣಿಯಲ್ಲ, ಹೋರಾಟಗಾರ. ವಂಚನೆಗೆ ಒಳಗಾಗಿರುವ ಸಾಮಾನ್ಯರ ಜನರ ಜೊತೆ ನಾನಿದ್ದೇನೆ. ಎಸ್‌ಐಟಿಗೆ ಸಂಪೂರ್ಣ ಸಹಕಾರ ನೀಡುತ್ತೇನೆ. ನನ್ನ ಮತಕ್ಷೇತ್ರದಲ್ಲಿ ಹಣ ಕಳೆದುಕೊಂಡಿರುವವರನ್ನು ಭೇಟಿ ಮಾಡುತ್ತೇನೆ ಎಂದು ರೋಷನ್ ಬೇಗ್ ಹೇಳಿದರು.

ರಾಜಕೀಯವಾಗಿ ನನ್ನ ಜೀವನದಲ್ಲಿ ಇತ್ತೀಚೆಗೆ ನಡೆದ ಕೆಲ ಬೆಳವಣಿಗೆಗಳಿಂದಾಗಿ, ನನ್ನ ಹಿತೈಷಿಗಳು ಎನಿಸಿಕೊಂಡವರೇ ಒಳಸಂಚು ಮಾಡಿ ನನಗೆ ಕೆಟ್ಟ ಹೆಸರು ತರಲು ಪ್ರಯತ್ನಿಸುತ್ತಿದ್ದಾರೆ. ಐಎಂಎ ವಂಚನೆ ಪ್ರಕರಣದ ಉನ್ನತ ಮಟ್ಟದ ತನಿಖೆಯಾಗಬೇಕು ಎಂದು ಅವರು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ರೋಷನ್ ಬೇಗ್ ಪುತ್ರ ರೂಮಾನ್ ಬೇಗ್, ಬಿಬಿಎಂಪಿ ಸದಸ್ಯರಾದ ಗುಣಶೇಖರ್, ಶಕೀಲ್ ಅಹ್ಮದ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News