ಐಎಂಎ ಸಂಸ್ಥೆಯೊಂದಿಗೆ ಯಾವುದೆ ಅವ್ಯವಹಾರದಲ್ಲಿ ಭಾಗಿಯಾಗಿಲ್ಲ: ಝಮೀರ್ ಅಹ್ಮದ್ ಖಾನ್

Update: 2019-06-12 14:47 GMT

ಬೆಂಗಳೂರು, ಜೂ.12: ಐಎಂಎ ಸಂಸ್ಥೆಯ ಮಾಲಕ ಮನ್ಸೂರ್ ಖಾನ್‌ಗೆ ನಗರದ ರಿಚ್‌ಮಂಡ್ ಟೌನ್‌ನಲ್ಲಿರುವ ನನ್ನ ನಿವೇಶನವನ್ನು ಕಾನೂನಾತ್ಮಕವಾಗಿ ಮಾರಾಟ ಮಾಡಿದ್ದನ್ನು ಹೊರತು ಪಡಿಸಿದಂತೆ ಮತ್ಯಾವ ವ್ಯವಹಾರವನ್ನು ನಾನು ಮಾಡಿಲ್ಲವೆಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಝಮೀರ್ ಅಹ್ಮದ್ ಖಾನ್ ಸ್ಪಷ್ಟ ಪಡಿಸಿದ್ದಾರೆ.

ಬುಧವಾರ ವಿಕಾಸಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಐಎಂಎ ಸಂಸ್ಥೆಯವರು ಸುಮಾರು 13ವರ್ಷಗಳಿಂದ ನಗರದಲ್ಲಿ ವ್ಯವಹಾರ ನಡೆಸುತ್ತಿದ್ದರು. ಅವರೊಂದಿಗೆ ನಿಕಟವಾದ ಯಾವುದೆ ಸಂಪರ್ಕ ಇರಲಿಲ್ಲ. ಆದರೆ, 2017ರ ಡಿಸೆಂಬರ್‌ನಲ್ಲಿ ರಿಚ್‌ಮಂಡ್ ಟೌನ್‌ನಲ್ಲಿರುವ ನನ್ನ ನಿವೇಶವನ್ನು ಕೊಳ್ಳುವುದಾಗಿ ಐಎಂಎ ಸಂಸ್ಥೆಯ ಮಾಲಕ ಮನ್ಸೂರ್ ಖಾನ್ ಒತ್ತಾಯಿಸಿದ್ದರು. ಹೀಗಾಗಿ ವ್ಯವಹಾರದ ಹಿನ್ನೆಲೆಯಲ್ಲಿ ಕಾನೂನಾತ್ಮಕವಾಗಿ ಆಗಿನ ಮಾರುಕಟ್ಟೆಯ ದರದಂತೆ ಒಟ್ಟು 9.98 ಕೋಟಿ ರೂ.ಗೆ ಮಾರಾಟ ಮಾಡಿದೆ ಎಂದರು.

ನನ್ನ ನಿವೇಶನದ ಮಾರಾಟದ ಎಲ್ಲ ಪ್ರಕ್ರಿಯೆಯ ಕಾನೂನಾತ್ಮಕವಾಗಿಯೆ ಇದೆ. ಮೊದಲಿಗೆ ಡಿ.11, 2017ರಂದು ಐಎಂಎ ಸಂಸ್ಥೆಯು 5 ಕೋಟಿ ರೂ.ನ್ನು ಮುಂಗಡವಾಗಿ ಆರ್‌ಟಿಜಿಎಸ್ ಮೂಲಕ ನನ್ನ ಖಾತೆಗೆ ಹಾಕಿದ್ದಾರೆ. ನಂತರ ಜೂ.5, 2018ರಂದು ಉಳಿದ ಹಣವನ್ನು ಪಡೆದು ಕಾನೂನಾತ್ಮಕವಾಗಿ ನನ್ನ ನಿವೇಶನವನ್ನು ಅವರ ಹೆಸರಿಗೆ ನೋಂದಣಿ ಮಾಡಿಕೊಟ್ಟಿದ್ದೇನೆಂದು ಅವರು ಮಾಹಿತಿ ನೀಡಿದರು.

ಐಎಂಎ ಸಂಸ್ಥೆಯ ಮಾಲಕನ ಹೆಸರಿನಲ್ಲಿರುವ ಎಲ್ಲ ಆಸ್ತಿ ವಿವರಗಳ ಮಾಹಿತಿಯನ್ನು ಮುಖ್ಯಮಂತ್ರಿ ಹಾಗೂ ಗೃಹ ಸಚಿವರಿಗೆ ನೀಡಿದ್ದೇವೆ. ಹಾಗೂ ಮನ್ಸೂರು ಖಾನ್ ಮಾಡಿರುವ ಬೇನಾಮಿ ಆಸ್ತಿಯ ಬಗ್ಗೆ ಹುಡುಕಾಟ ನಡೆಸುತ್ತಿದ್ದೇವೆ. ಒಟ್ಟಾರೆ, ಬಡವರ ಹಣವನ್ನು ಹಿಂದಿರುಗಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.

ಐಎಂಎ ಮಾಲಕನಿಗೆ ಮನವಿ: ಸಾವಿರಾರು ಸಂಖ್ಯೆಯಲ್ಲಿ ಬಡವರು ತಮ್ಮ ಮನೆ ಹಾಗೂ ವಾಹನಗಳನ್ನು ಮಾರಾಟ ಮಾಡಿ ಐಎಂಎ ಸಂಸ್ಥೆಯನ್ನು ಹಣ ಹೂಡಿಕೆ ಮಾಡಿದ್ದಾರೆ. ಈಗ ಏಕಾಏಕಿ ಐಎಂಎ ಸಂಸ್ಥೆಯ ಮಾಲಕ ತಲೆಮರೆಸಿಕೊಂಡರೆ ಜನಸಾಮಾನ್ಯರ ಗತಿ ಏನು. ಹೀಗಾಗಿ ಎಲ್ಲಿಯೆ ಇದ್ದರೂ ಮನ್ಸೂರ್‌ಖಾನ್ ಬಂದು ಬಡವರ ಹಣ ವಾಪಸ್ ನೀಡುವ ವ್ಯವಸ್ಥೆ ಮಾಡಬೇಕೆಂದು ಮನವಿ ಮಾಡಿದರು.

ಐಎಂಎ ಸಂಸ್ಥೆಯ ಮಾಲಕ ಮನ್ಸೂರ್ ಖಾನ್ ರಾಜಕಾರಣಗಳಿಗೆ, ಅಧಿಕಾರಿಗಳಿಗೆ ಹಣ ನೀಡಲಾಗಿದೆಯೆಂದು ಆಡಿಯೋದಲ್ಲಿ ಹೇಳಲಾಗಿದೆ. ಯಾರ್ಯಾರಿಗೆ ಎಷ್ಟೆಷ್ಟು ಹಣ ನೀಡಿದ್ದಾರೆಂದು ಗೊತ್ತಾಗಬೇಕಾದರೆ ಅವರೇ ಬರಬೇಕು. ಸರಕಾರ ಅವರ ಬೆಂಬಲಿಕ್ಕಿದ್ದು, ರಾಜಕಾರಣಿಗಳಿಂದ, ಅಧಿಕಾರಿಗಳಿಂದ ಹಣ ಪಡೆದು ಬಡವರ ಹಣ ವಾಪಾಸ್ ಕೊಡಬಹುದು. ಹೀಗಾಗಿ ಮನ್ಸೂರ್ ಖಾನ್ ಎಲ್ಲಿದ್ದರೂ ಬರಬೇಕೆಂದು ಅವರು ಹೇಳಿದರು.

ಡಿಸೆಂಬರ್, 2017ಕ್ಕೂ ಮೊದಲು ಐಎಂಎ ಸಂಸ್ಥೆಯ ಮಾಲಕ ಮನ್ಸೂರ್‌ಖಾನ್‌ನೊಂದಿಗೆ ನಾನು ಯಾವುದೆ ಅವ್ಯವಹಾರ ನಡೆಸಿಲ್ಲ. ಅವರನ್ನು ಮೂರರಿಂದ ನಾಲ್ಕು ಬಾರಿ ಭೇಟಿ ಆಗಿರಬಹುದಷ್ಟೆ. ಕಳೆದ 13 ವರ್ಷದಿಂದ ಅವರು ನಗರದಲ್ಲಿ ಅಪಾರ್ಟ್‌ಮೆಂಟ್, ಮೆಡಿಕಲ್, ಶಿಕ್ಷಣ ಸಂಸ್ಥೆಗಳು ಹಾಗೂ ಜ್ಯುವೆಲರಿ ಅಂಗಡಿ ನಡೆಸುತ್ತಿದ್ದರಿಂದ ಅವರ ಮೇಲೆ ವಿಶ್ವಾಸ ಇತ್ತು.

ಕಳೆದ ತಿಂಗಳು ಐಎಂಎ ಸಂಸ್ಥೆಯಲ್ಲಿ ಹೂಡಿಕೆ ಮಾಡಿದ ಕೆಲವರು ನನಗೆ ವಾಟ್ಸ್ ಆ್ಯಪ್ ಮೆಸೇಜ್ ಮಾಡಿ, ಎರಡು ಮೂರು ತಿಂಗಳಿಂದ ಹಣ ಕೊಡುತ್ತಿಲ್ಲವೆಂದು ಆರೋಪಿಸಿದ್ದರು. ಹೀಗಾಗಿ ನಾನೇ ಐಎಂಎ ಜ್ಯುವೆಲ್ಸ್ ಅಂಗಡಿಗೆ ಖುದ್ದಾಗಿ ಹೋಗಿ ಭೇಟಿ ನೀಡಿ ವಿಚಾರಿಸಿದ್ದೆ. ಆ ಸಂದರ್ಭದಲ್ಲಿ ಮನ್ಸೂರ್ ಖಾನ್ ವ್ಯವಹಾರದಲ್ಲಿ ಯಾವುದೆ ಸಮಸ್ಯೆಯಿಲ್ಲ. ಈದುಲ್ ಫಿತ್ರ್ ಹಬ್ಬದ ನಂತರ ಹಣ ಹಿಂದಿರುಗಿಸುವುದಾಗಿ ಭರವಸೆ ನೀಡಿದ್ದರು. ಈಗ ಬಡವರಿಗೆ ಮೋಸ ಮಾಡಿ ಹೋಗಿದ್ದಾನೆ ಎಂದು ಹೇಳಿದರು.

ಐಎಂಎ ವಂಚನೆ ಪ್ರಕರಣವನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಎಸ್‌ಐಟಿಗೆ(ವಿಶೇಷ ತನಿಖಾ ತಂಡಕ್ಕೆ) ವಹಿಸಿರುವುದು ಅಭಿನಂದನೀಯ. ನಮ್ಮ ರಾಜ್ಯದ ಪೊಲೀಸರ ಮೇಲೆ ವಿಶ್ವಾಸವಿದೆ. ಆದರೆ, ಇದರಿಂದಲೂ ಸರಿಯಾದ ತನಿಖೆ ನಡೆಯುತ್ತಿಲ್ಲವೆಂದು ಅನುಮಾನ ಬಂದರೆ, ಸಿಬಿಐಗೆ ಒತ್ತಾಯಿಸಲಾಗುವುದು 

-ಝಮೀರ್ ಅಹ್ಮದ್ ಖಾನ್, ಸಚಿವ, ಆಹಾರ ಮತ್ತು ನಾಗರಿಕ ಸರಬರಾಜು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News