ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರ ಧರಣಿ

Update: 2019-06-12 14:53 GMT

ಬೆಂಗಳೂರು, ಜೂ.12: ಆಶಾ ಕಾರ್ಯಕರ್ತೆಯರ ಗೌರವ ಧನ ಏರಿಕೆ ಹಾಗೂ ಪಿಂಚಣಿ ಸೌಲಭ್ಯ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ನೇತೃತ್ವದಲ್ಲಿ ಸಾವಿರಾರು ಆಶಾ ಕಾರ್ಯಕರ್ತೆಯರು ಧರಣಿ ನಡೆಸಿದರು.

ಬುಧವಾರ ನಗರದ ಮೌರ್ಯ ವೃತ್ತದಲ್ಲಿರುವ ಗಾಂಧಿ ಪ್ರತಿಮೆ ಬಳಿ ಧರಣಿಯನ್ನುದ್ದೇಶಿಸಿ ಮಾತನಾಡಿದ ಆಶಾ ಕಾರ್ಯಕರ್ತೆಯರು, ಕೇಂದ್ರ ಮತ್ತು ರಾಜ್ಯ ಸರಕಾರಗಳು ನೀಡುವ ಪ್ರೋತ್ಸಾಹ ಧನವನ್ನು ಒಟ್ಟಿಗೆ ಸೇರಿಸಿ ಕನಿಷ್ಠ ಮಾಸಿಕ ಗೌರವ ಧನ 12 ಸಾವಿರ ರೂ. ನಿಗದಿ ಮಾಡಬೇಕು. ಅಲ್ಲದೆ ನಿವೃತ್ತಿ ಹೊಂದಿದ್ದ ಆಶಾ ಕಾರ್ಯಕರ್ತೆಯರಿಗೆ ಪಿಂಚಿಣಿ ನಿವೃತ್ತಿ ಪರಿಹಾರ ಸೇರಿದಂತೆ ಸುಮಾರು 11 ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿದರು.

ಆಶಾ ಸಾಫ್ಟ್ ಅಥವಾ ಆರ್‌ಸಿಎಚ್ ಪೋರ್ಟಲ್‌ಗೆ ಆಶಾ ಪ್ರೋತ್ಸಾಹ ಧನ ಜೋಡಣೆ ರದ್ದುಪಡಿಸಬೇಕು. ಕಳೆದ 9 ತಿಂಗಳಿಂದ ಬಾಕಿ ಇರುವ ಎನ್‌ಸಿಪಿಎಸ್ ಸೇವೆಗಳ ಪ್ರೋತ್ಸಾಹ ಧನವನ್ನು ಪ್ರತಿ ಆಶಾ ಕಾರ್ಯಕರ್ತೆಯರಿಗೆ 1 ಸಾವಿರ ರೂ. ಹಾಗೂ ಜನಸಂಖ್ಯೆ ಅನುಗುಣವಾಗಿ ಕಾರ್ಯನಿರ್ವಹಿಸುವ ಪ್ರತಿ ಆಶಾ ಕಾರ್ಯ ಕರ್ತೆಯರಿಗೆ ಮಾಸಿಕ 3 ಸಾವಿರ ರೂ. ನೀಡಬೇಕು ಎಂದು ಮನವಿ ಮಾಡಿದರು.

ಪ್ರತಿ ತಿಂಗಳ ವೇತನವನ್ನು ನಿಗದಿತ ದಿನದಂದು ಬಿಡುಗಡೆ ಮಾಡಬೇಕು. ವೇತನ ಬಿಡುಗಡೆಯಲ್ಲಿ ವಿಳಂಬವಾಗಬಾರದು. ಹಿಂದಿನ ಆರೋಗ್ಯ ಸಚಿವರು ನೀಡಿದ ಭರವಸೆಯಂತೆ ಆಶಾ ಕಾರ್ಯಕರ್ತೆಯರಿಗೆ, ಅಂಗನವಾಡಿ ಕಾರ್ಯಕರ್ತೆಯರಿಗೆ ಇರುವ ಆಶಾ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪಿಸಿ ಅವರ ಕಾಯಿಲೆಗಳ ಚಿಕಿತ್ಸೆಗೆ ಅಥವಾ ಮರಣ ಹೊಂದಿದರೆ ಅವರ ಕುಟುಂಬಕ್ಕೆ ಪರಿಹಾರ ಒದಗಿಸಲು ಕಾರ್ಪಾಸ್ ಫಂಡ್ ಮೀಸಲಿಡಬೇಕೆಂದು ಘೋಷಣೆಗಳನ್ನು ಕೂಗಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News