ಅಲ್ಪಸಂಖ್ಯಾತರಿಗೆ ಮೇಯರ್ ಪಟ್ಟ: ಕಾಂಗ್ರೆಸ್ ನಾಯಕರ ಮೇಲೆ ಬಿಬಿಎಂಪಿ ಸದಸ್ಯರ ಒತ್ತಡ

Update: 2019-06-12 15:01 GMT
ಅಬ್ದುಲ್ ವಾಜೀದ್

ಬೆಂಗಳೂರು, ಜೂ.12: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಯ ಮೇಯರ್ ಸ್ಥಾನಕ್ಕಾಗಿ ಸೆಪ್ಟಂಬರ್‌ನಲ್ಲಿ ಚುನಾವಣೆ ನಡೆಯಲಿದ್ದು, ಈ ಬಾರಿ ಸಾಮಾನ್ಯ ವರ್ಗಕ್ಕೆ ಮೀಸಲಾತಿ ನಿಗದಿಯಾಗಿರುವುದರಿಂದ ಅಲ್ಪಸಂಖ್ಯಾತರಿಗೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಕಾಂಗ್ರೆಸ್ ನಾಯಕರ ಮೇಲೆ ಪಕ್ಷಾತೀತವಾಗಿ ಬಿಬಿಎಂಪಿ ಸದಸ್ಯರು ಒತ್ತಡ ಹೇರಿದ್ದಾರೆ.

ಬುಧವಾರ ಈ ಸಂಬಂಧ ಬಿಬಿಎಂಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆಡಳಿತ ಪಕ್ಷದ ನಾಯಕ ಅಬ್ದುಲ್ ವಾಜೀದ್, ಕಳೆದ 15 ವರ್ಷಗಳಿಂದ ಅಲ್ಪಸಂಖ್ಯಾತ ಸಮುದಾಯದವರಿಗೆ ಮೇಯರ್ ಆಗಲು ಅವಕಾಶ ಸಿಕ್ಕಿಲ್ಲ. ಈ ಬಾರಿ ಸಾಮಾನ್ಯ ವರ್ಗಕ್ಕೆ ಮೀಸಲಾತಿ ಕಲ್ಪಿಸಿರುವುದರಿಂದ ನಮ್ಮ ಪಕ್ಷದ ನಾಯಕರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದೇವೆ ಎಂದರು.

ಕಾಂಗ್ರೆಸ್, ಜೆಡಿಎಸ್ ಹಾಗೂ ಎಸ್‌ಡಿಪಿಐ ಪಕ್ಷದ ಎಲ್ಲ ಅಲ್ಪಸಂಖ್ಯಾತ ಸಮುದಾಯದ ಕಾರ್ಪೋರೇಟರ್‌ಗಳು ಈ ವಿಚಾರದ ಕುರಿತು ನಿನ್ನೆಯಷ್ಟೇ ಸಭೆ ನಡೆಸಿ ಮಾತುಕತೆ ನಡೆಸಿದೆವು. ಅಲ್ಲದೇ, ಮಾಜಿ ಸಿಎಂ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್‌ರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದೇವೆ ಎಂದು ಅವರು ಹೇಳಿದರು.

ಅಲ್ಲದೇ, ನಮ್ಮ ವಾರ್ಡ್‌ಗಳ ವ್ಯಾಪ್ತಿಯಲ್ಲಿ ಐಎಂಎ ಸಂಸ್ಥೆಯಲ್ಲಿ ಹೂಡಿಕೆ ಮಾಡಿರುವ ಜನರನ್ನು ಭೇಟಿ ಮಾಡಿ, ಅವರ ಸಮಸ್ಯೆಗಳನ್ನು ಆಲಿಸಲು ನಿರ್ಧರಿಸಿದ್ದೇವೆ. ಕಳೆದ 13 ವರ್ಷಗಳಿಂದ ಈ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ. ಹೂಡಿಕೆದಾರರಿಗೆ ಲಾಭಾಂಶ ಕೊಡುವಾಗ ತೆರಿಗೆಯನ್ನು ಕಡಿತಗೊಳಿಸಿ ನೀಡುತ್ತಿದ್ದರು ಎಂದು ಅವರು ತಿಳಿಸಿದರು.

ತೆರಿಗೆ ಪಾವತಿಸುವ ಸಂಸ್ಥೆಯ ಲೆಕ್ಕಪರಿಶೋಧನೆಯಾಗಿರುತ್ತದೆ. ಈ ಸಂಸ್ಥೆಯ ಆದಾಯ, ವೆಚ್ಚ ಎಲ್ಲ ಮಾಹಿತಿಯೂ ಆದಾಯ ತೆರಿಗೆ ಸೇರಿದಂತೆ ಇನ್ನಿತರ ಇಲಾಖೆಗಳಿಗೆ ಇರುತ್ತದೆ. ಒಂದು ವೇಳೆ ಇಂದು ವಂಚನೆ ಮಾಡುತ್ತಿರುವ ಸಂಸ್ಥೆ ಎಂಬ ಮಾಹಿತಿ ಅವರಿಗೆ ಮೊದಲೇ ತಿಳಿದಿದ್ದರೆ, ಈವರೆಗೆ ಮೌನ ವಹಿಸಿದ್ದು ಯಾಕೆ ಎಂಬುದು ಅರ್ಥವಾಗುತ್ತಿಲ್ಲ ಎಂದು ಅಬ್ದುಲ್ ವಾಜೀದ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News