ಐಎಂಎ ಬಹುಕೋಟಿ ವಂಚನೆ ಪ್ರಕರಣ: ಸಚಿವ ಝಮೀರ್ ಬಂಧನಕ್ಕೆ ಬಿಜೆಪಿ ಆಗ್ರಹ

Update: 2019-06-13 14:39 GMT

ಬೆಂಗಳೂರು, ಜೂ.13: ಐಎಂಎ ಸಮೂಹ ಸಂಸ್ಥೆಯ ಬಹುಕೋಟಿ ವಂಚನೆ ಪ್ರಕರಣ ಸಂಬಂಧ ಸಚಿವ ಝಮೀರ್ ಅಹ್ಮದ್ ಖಾನ್ ಅವರನ್ನು ಬಂಧಿಸಿ, ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಬಿಜೆಪಿ ಆಗ್ರಹಿಸಿದೆ.

ಗುರುವಾರ ನಗರದ ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಎದುರು ಸರಕಾರ ಆಡಳಿತ ವೈಫಲ್ಯ ಹಾಗೂ ಜಿಂದಾಲ್ ಗೆ ಭೂಮಿ ಮಾರಾಟ ಖಂಡಿಸಿ, ಬಿಜೆಪಿ ನಾಯಕರು ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್, ಐಎಂಎ ವಂಚನೆ ಪ್ರಕರಣದಲ್ಲಿ ಮೊದಲನೇ ಆರೋಪಿ ಯನ್ನಾಗಿ ಝಮೀರ್ ಅಹ್ಮದ್ ಅವರನ್ನು ಮಾಡಬೇಕು. ಜೊತೆಗೆ, ಅವರನ್ನು ಬಂಧಿಸಿ, ಸಿಬಿಐ ತನಿಖೆಗೆ ಒಪ್ಪಿಸಿದಾಗ ಮಾತ್ರ, ಪ್ರಕರಣದ ಸತ್ಯಾಸತ್ಯತೆ ಹೊರಗಡೆ ಬರಲು ಸಾಧ್ಯ ಎಂದು ಹೇಳಿದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಎಚ್.ಡಿ.ದೇವೇಗೌಡ ಸೇರಿದಂತೆ ಹಲವು ನಾಯಕರು, ತಾವೂ ಅಲ್ಪಸಂಖ್ಯಾತರ ನಾಯಕರೆಂದು ಬಿಂಬಿಸಿಕೊಳ್ಳುತ್ತಿದ್ದರು. ಆದರೆ, ಐಎಂಎ ವಂಚನೆಯಲ್ಲಿ ಸಿಲುಕಿರುವ ಮುಸ್ಲಿಮರಿಗೆ ನ್ಯಾಯ ಒದಗಿಸಲು ಮಾತ್ರ ಮುಂದಾಗುತ್ತಿಲ್ಲ ಎಂದರು.

ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಮಾತನಾಡಿ, ಐಎಂಎ ಸಮೂಹ ಸಂಸ್ಥೆ ಮಾಲಕ ಮುಹಮ್ಮದ್ ಮನ್ಸೂರ್ ಖಾನ್ ಅವರ ಮುಖವಾಡ ಇಟ್ಟುಕೊಂಡು ಶಾಸಕ ರೋಶನ್ ಬೇಗ್, ಸಚಿವ ಝಮೀರ್ ಅಹ್ಮದ್ ಜನರ ದುಡ್ಡು ಲೂಟಿ ಮಾಡಿದ್ದಾರೆ. ಈ ಸಂಬಂಧ ಸಿಬಿಐ ತನಿಖೆ ನಡೆಯಲೇಬೇಕು ಎಂದು ಹೇಳಿದರು.

ಶಾಸಕ ಆರ್.ಅಶೋಕ್ ಮಾತನಾಡಿ, ಐಎಂಎ ಮುಖ್ಯಸ್ಥರೊಂದಿಗೆ ಎಲ್ಲ ಕಾಂಗ್ರೆಸ್ ನಾಯಕರು, ಮುಖ್ಯಮಂತ್ರಿ ಕುಮಾರಸ್ವಾಮಿ ಬಿರಿಯಾನಿ ತಿಂದಿದ್ದಾರೆ. ಆದರೆ, ಇದೀಗ ಕಾಂಗ್ರೆಸ್ ನಾಯಕರೇ, ಐಎಂಎ ವಿರುದ್ಧ ಆರೋಪಗಳನ್ನು ಮಾಡುತ್ತಿದ್ದು, ಈ ಸಂಬಂಧ ಸಿಬಿಐ ತನಿಖೆ ನಡೆಯಲಿ. ಎಸ್‌ಐಟಿ ಮೇಲಿ ನಮಗೆ ನಂಬಿಕೆ ಇಲ್ಲ ಎಂದು ತಿಳಿಸಿದರು.

ಕೋಳಿಗೆ ಕೇಳಿ, ಮಸಾಲೆ ಅರೆಯಬೇಕಾ?

ಐಎಂಎ ವಂಚನೆ ಪ್ರಕರಣ ಸಂಬಂಧ ಮೊದಲು ಎಸ್‌ಐಟಿ ತನಿಖೆ ನಡೆಸಲಿ ಎಂದು ಸಚಿವ ಝಮೀರ್ ಅಹ್ಮದ್ ಹೇಳುತ್ತಾರೆ. ಆದರೆ, ಸಚಿವರ ಮಾತು, ‘ಕೋಳಿಗೆ ಕೇಳಿ, ಮಸಾಲೆ ಅರೆಯುವಂತೆ’ ಆಗಿದೆ ಎಂದು ಯುವಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ವೈ.ವಿಜಯೇಂದ್ರ ವ್ಯಂಗ್ಯವಾಡಿದರು.

ಬಿಜೆಪಿ ನಾಯಕರು ವಶಕ್ಕೆ ಜಿಂದಾಲ್ ಕಂಪನಿಗೆ ಭೂಮಿ ಹಸ್ತಾಂತರ ಖಂಡಿಸಿ, ನಗರದ ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಎದುರಿನಿಂದ ವಿಧಾನಸೌಧ ಮುತ್ತಿಗೆ ಹಾಕಲು ಯತ್ನಿಸಿದ ಬಿಜೆಪಿ ನಾಯಕರನ್ನು ಪೊಲೀಸರು ವಶಕ್ಕೆ ಪಡೆದರು.

ಬಿಜೆಪಿ ನಾಯಕರಾದ ಆರ್.ಅಶೋಕ್, ರವಿಕುಮಾರ್, ಬಿ.ವೈ.ವಿಜಯೇಂದ್ರ, ತೇಜಸ್ವಿ ಸೂರ್ಯ, ತಮ್ಮೇಶ್ ಗೌಡ ಸೇರಿದಂತೆ ಪ್ರಮುಖರನ್ನು ವಶಕ್ಕೆ ಪಡೆದ ಪೊಲೀಸರು ತಮ್ಮ ವಾಹನದಲ್ಲಿ ಕರೆದೊಯ್ದು, ತದನಂತರ ಬಿಡುಗಡೆಗೊಳಿಸಿದರು.

‘ಆಯೋಗ್ಯ ಮುಖ್ಯಮಂತ್ರಿ’

ಈ ನಾಡಿನ ಆಯೋಗ್ಯ ಮುಖ್ಯಮಂತ್ರಿ ಎಂದರೆ ಎಚ್.ಡಿ.ಕುಮಾರಸ್ವಾಮಿ, ಹಲವು ಹಗರಣಗಳು ನಡೆದರೂ ಯಾವುದೇ ಕ್ರಮಗಳನ್ನು ತೆಗೆದುಕೊಂಡಿಲ್ಲ. ಈ ಬಗ್ಗೆ ಅವರೊಂದಿಗೆ ನೇರ ಚರ್ಚೆಯಲ್ಲಿ ಪಾಲ್ಗೊಂಡು ಸಾಬೀತುಪಡಿಸಿವೆ.

-ಎನ್.ರವಿಕುಮಾರ್, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ

ಎಲ್ಲಿದ್ದೀಯಪ್ಪಾ ಸಿದ್ದರಾಮಯ್ಯ...?

ಮಂಡ್ಯ ಲೋಕಸಭಾ ಚುನಾವಣೆ ಸಂದರ್ಭದ ವೇಳೆ ನಿಖಿಲ್ ಕುಮಾರಸ್ವಾಮಿ ಎಲ್ಲಿದ್ದೀಯಪ್ಪಾ ಎಂದು ಟ್ರೋಲ್ ಮಾಡಿದ ಜನರು, ಇದೀಗ ಬಳ್ಳಾರಿ ಜನರು ಸಿದ್ದರಾಮಯ್ಯ ಎಲ್ಲಿದ್ದೀರಾ ಎಂದು ಪ್ರಶ್ನೆ ಮಾಡುತ್ತಿದ್ದಾರೆಂದು ಆರ್.ಅಶೋಕ್ ವ್ಯಂಗ್ಯವಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News