ಸಂವಿಧಾನ ವಿರೋಧಿಸುವ ಶಕ್ತಿಗಳಿಂದ ಅಂಬೇಡ್ಕರ್ ಬಳಕೆ: ಬೆಂ. ಕೇಂದ್ರ ವಿವಿ ಕುಲಪತಿ ಪ್ರೊ.ಜಾಫೆಟ್

Update: 2019-06-13 12:52 GMT

ಬೆಂಗಳೂರು, ಜೂ.13: ದೇಶದ ಬಹುತ್ವ ಹಾಗೂ ಸಂವಿಧಾನ ವಿರೋಧಿಸುವ ಸಮಾಜಘಾತುಕ ಶಕ್ತಿಗಳು, ತಮ್ಮ ಸ್ವಾರ್ಥ ಸಾಧನೆಗಾಗಿ ಡಾ.ಬಿ.ಆರ್.ಅಂಬೇಡ್ಕರ್‌ನ್ನು ಬಳಸಿಕೊಳ್ಳಲು ಮುಂದಾಗಿದ್ದಾರೆ ಎಂದು ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜಾಫೆಟ್ ಆತಂಕ ವ್ಯಕ್ತಪಡಿಸಿದರು.

ಗುರುವಾರ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ನಗರದ ನಯನ ಸಭಾಂಗಣದಲ್ಲಿ ಆಯೋಜಿಸಿದ್ದ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ಸಮಗ್ರ ಬರಹಗಳ ಪರಿಷ್ಕೃತ 22 ಸಂಪುಟಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಅಂಬೇಡ್ಕರ್‌ರವರ ಜನಪರ ಚಿಂತನೆಗಳು ಹಾಗೂ ಮಾನವೀಯ ಮೌಲ್ಯಗಳ ವಿರುದ್ಧವಾಗಿ ಕಾರ್ಯನಿರ್ವಹಿಸುತ್ತಿರುವ ಸಂಘಟನೆಗಳೆ, ಅಂಬೇಡ್ಕರ್‌ರನ್ನು ವಶೀಕರಿಸಿಕೊಳ್ಳಲು ಪ್ರಯತ್ನಿಸುತ್ತಿವೆ ಎಂದರು.

ಕಳೆದ 7, 8 ವರ್ಷಗಳಿಂದ ಭಾರತದ ಜೀವಾಳವಾಗಿರುವ ಬಹುತ್ವ ಹಾಗೂ ಸಂವಿಧಾನದ ಆಶಯಗಳನ್ನು ನಾಶ ಮಾಡುವಂತಹ ಕೃತ್ಯಗಳು ನಡೆಯುತ್ತಿವೆ. ಸಮಾಜ ವಿರೋಧಿ ಶಕ್ತಿಗಳಿಂದ ನಡೆಯುತ್ತಿರುವ ಇಂತಹ ಕೃತ್ಯಗಳನ್ನು ತಡೆಯಲು ಜನಪರ ಸಂಘಟನೆಗಳು ವಿಫಲವಾಗಿರುವುದಕ್ಕೆ, ಡಾ.ಬಿ.ಆರ್.ಅಂಬೇಡ್ಕರ್ ಚಿಂತನೆಗಳನ್ನು ಸಮಗ್ರವಾಗಿ ಅರ್ಥಮಾಡಿಕೊಳ್ಳದಿರುವುದೆ ಮುಖ್ಯ ಕಾರಣವಾಗಿದೆ ಎಂದು ಅವರು ಅಭಿಪ್ರಾಯಿಸಿದರು.

ಇವತ್ತಿಗೂ ಅಂಬೇಡ್ಕರ್ ಚಿಂತನೆಯನ್ನು ಮೀಸಲಾತಿ ಚೌಕಟ್ಟಿನಾಚೆಗೆ ನೋಡಲಾಗುತ್ತಿಲ್ಲ. ಇಂತಹ ಮಿತಿಗಳನ್ನು ಮೀರಿ ಅಂಬೇಡ್ಕರ್ ಬರಹ ಹಾಗೂ ಚಿಂತನೆಗಳನ್ನು ಮರು ವಿಮರ್ಶಿಸಿಕೊಳ್ಳುವ ಅಗತ್ಯವಿದೆ. ಜಾಗತಿಕರಣ, ಉದಾರಿಕರಣ ಹಾಗೂ ಆಧುನಿಕರಣದ ಪ್ರಭಾವಗಳು ಜನತೆಯ ಮೇಲೆ ಗಾಢವಾಗಿ ಪರಿಣಾಮ ಬೀರುತ್ತಿರುವ ಸನ್ನಿವೇಶದಲ್ಲಿ ಡಾ.ಬಿ.ಆರ್.ಅಂಬೇಡ್ಕರ್‌ರವರ ಚಿಂತನೆಗಳು ಇವತ್ತಿಗೆ ಹೊಂದುವಂತಹ ರೀತಿಯಲ್ಲಿ ರೂಪಿಸಿಕೊಳ್ಳಬೇಕಿದೆ ಎಂದು ಅವರು ಆಶಿಸಿದರು.

ಸಂಸ್ಕೃತಿ ಚಿಂತಕ ನಟರಾಜ್ ಹುಳಿಯಾರ್ ಮಾತನಾಡಿ, ಯಾವುದೇ ಒಂದು ಕ್ಷೇತ್ರದ ಅಧ್ಯಯನದಿಂದ ಭಾರತವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಹೀಗಾಗಿಯೆ ಡಾ.ಬಿ.ಆರ್.ಅಂಬೇಡ್ಕರ್‌ರವರು ಸಾಮಾಜಿಕ, ಆರ್ಥಿಕ, ರಾಜಕೀಯ, ಸಾಂಸ್ಕೃತಿಕತೆ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿಯೂ ಗಂಭೀರ ಅಧ್ಯಯನ ನಡೆಸಿ, ನವ ಭಾರತವನ್ನು ಕಟ್ಟುವಲ್ಲಿ ಅಮೂಲ್ಯವನ್ನು ಕೊಡುಗೆಯನ್ನು ನೀಡಿದ್ದಾರೆ ಎಂದು ಶ್ಲಾಘಿಸಿದರು.

ಡಾ.ಬಿ.ಆರ್.ಅಂಬೇಡ್ಕರ್‌ಗೆ ಮುಂದೊಮ್ಮೆ ನನಗೆ ಪ್ರಧಾನಿ ಆಗುವ ಅವಕಾಶ ಸಿಗಬಹುದೆಂದು ನಿರೀಕ್ಷೆ ಇಟ್ಟುಕೊಂಡಿದ್ದರು ಎಂದೆನಿಸುತ್ತದೆ. ಹೀಗಾಗಿ ಅವರ ಬರಹ, ಚಿಂತನೆ ಹಾಗೂ ಕಾರ್ಯಗಳು ಎಲ್ಲ ಕ್ಷೇತ್ರಗಳ ಕಡೆಗೂ ವಿಸ್ತರಿಸಿತ್ತು. ಅವರು ದಿನದಲ್ಲಿ 18ರಿಂದ 20ಗಂಟೆ ಕೆಲಸ ಮಾಡುತ್ತಿದ್ದರು. ಅದರ ಫಲವಾಗಿ ಅವರ ಅತ್ಯುತ್ತಮ ಚಿಂತನೆಗಳು ಬರಹ ರೂಪದಲ್ಲಿ ನಮಗೆ ಸಿಕ್ಕಿವೆ ಎಂದು ಅವರು ಹೇಳಿದರು.

ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಕೆ.ಮರುಳಸಿದ್ದಪ್ಪ ಮಾತನಾಡಿ, ಪ್ರಾಧಿಕಾರದ ವತಿಯಿಂದ ಇಲ್ಲಿಯವರೆಗೂ 450ಕ್ಕೂ ಕೃತಿಗಳನ್ನು ಪ್ರಕಟಿಸಲಾಗಿದೆ. ಆದರೆ, ಡಾ.ಬಿ.ಆರ್.ಅಂಬೇಡ್ಕರ್‌ರವರ ಸಮಗ್ರ ಬರಹಗಳ ಸಂಪುಟಗಳಿಗಿರುವಷ್ಟು ಬೇಡಿಕೆ ಬೇರೆ ಕೃತಿಗಳಿಗಿಲ್ಲ. ಇದು ಐದನೆ ಮುದ್ರಣವಾಗಿದೆ ಎಂಬುದೆ ಸಂತಸದ ವಿಚಾರವೆಂದು ತಿಳಿಸಿದರು. ಈ ವೇಳೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕಿ ಜಾನಕಿ ಹಾಗೂ ಪ್ರಾಧಿಕಾರದ ರಿಜಿಸ್ಟ್ರಾರ್ ಈಶ್ವರ್ ಕು.ಮಿರ್ಜಿ ಉಪಸ್ಥಿತರಿದ್ದರು.

ಶೂದ್ರರು ಅಂಬೇಡ್ಕರನ್ನು ಅರ್ಥ ಮಾಡಿಕೊಂಡಿಲ್ಲ

ಭಾರತದ ಧಾರ್ಮಿಕತೆ ಯಾಕೆ ಪುರುಷ ಯಜಮಾನಿಕೆಯಿಂದ ಕೂಡಿದೆ ಎಂದು ಅರ್ಥ ಮಾಡಿಕೊಳ್ಳಲು ಡಾ.ಬಿ.ಆರ್.ಅಂಬೇಡ್ಕರ್ ಸಂಸ್ಕೃತ ಭಾಷೆಯನ್ನು ಕಲಿತ ವೈದಿಕ ಗ್ರಂಥಗಳನ್ನು ಕೂಲಂಕಷವಾಗಿ ಅಧ್ಯಯನ ನಡೆಸಿ, ಅದನ್ನು ಮರಾಠಿ ಹಾಗೂ ಇಂಗ್ಲಿಷ್‌ನಲ್ಲಿ ಬರೆದಿದ್ದಾರೆ. ಡಾ.ಬಿ.ಆರ್.ಅಂಬೇಡ್ಕರ್ ವಿಚಾರಗಳನ್ನು ಬ್ರಾಹ್ಮಣರು, ದಲಿತರು ಅರ್ಥ ಮಾಡಿಕೊಂಡಿದ್ದಾರೆ. ಆದರೆ, ಶೂದ್ರ ಸಮುದಾಯ ಇಲ್ಲಿಯವರೆಗೂ ಅರ್ಥ ಮಾಡಿಕೊಂಡಿಲ್ಲ.

-ನಟರಾಜ್ ಹುಳಿಯಾರ್, ಸಂಸ್ಕೃತಿ ಚಿಂತಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News