ಪಾಕಿಸ್ತಾನ ಫೀಲ್ಡಿಂಗ್ನಲ್ಲಿ ಸುಧಾರಣೆ ಕಾಣಬೇಕಿದೆ: ಸರ್ಫರಾಝ್

Update: 2019-06-13 18:44 GMT

ಲಂಡನ್, ಜೂ. 13: ಸಾಂಪ್ರದಾಯಿಕ ಎದುರಾಳಿ ಭಾರತವನ್ನು ಎದುರಿಸುವ ಮೊದಲು ಪಾಕಿಸ್ತಾನ ಫೀಲ್ಡಿಂಗ್‌ನಲ್ಲಿ ಇನ್ನಷ್ಟು ಸುಧಾರಣೆ ಕಾಣಬೇಕಿದೆ ಎಂದು ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಸರ್ಫರಾಝ್ ಅಹ್ಮದ್ ಅಭಿಪ್ರಾಯಪಟ್ಟಿದ್ದಾರೆ. ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ವಿಶ್ವಕಪ್ ಪಂದ್ಯ ರವಿವಾರ ಓಲ್ಡ್ ಟ್ರಾಫರ್ಡ್‌ನಲ್ಲಿ ನಡೆಯಲಿದೆ.

‘‘ಆಸ್ಟ್ರೇಲಿಯ ಮತ್ತು ಭಾರತದಂತಹ ಬಲಿಷ್ಠ ತಂಡಗಳ ವಿರುದ್ಧ ಆಡುವಾಗ ಫೀಲ್ಡಿಂಗ್‌ನಲ್ಲಿ ಸಾಕಷ್ಟು ಸುಧಾರಣೆ ಕೈಗೊಳ್ಳಬೇಕಾಗಿದೆ’’ ಎಂದು ಸರ್ಫರಾಝ್ ಹೇಳಿದ್ದಾರೆ.

ಪಾಕಿಸ್ತಾನಕ್ಕೆ ವಿಶ್ವಕಪ್‌ನಲ್ಲಿ ಭಾರತವನ್ನು ಮಣಿಸಲು ಕಳೆದ 6 ವಿಶ್ವಕಪ್‌ಗಳಲ್ಲೂ ಸಾಧ್ಯವಾಗಿಲ್ಲ.

 ಹಾಲಿ ಚಾಂಪಿಯನ್ ಆಸ್ಟ್ರೇಲಿಯ ವಿರುದ್ಧ ಟೌಂಟನ್‌ನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಪಾಕಿಸ್ತಾನ 41 ರನ್‌ಗಳ ಸೋಲು ಅನುಭವಿಸಿತ್ತು. ಮೂರು ಕ್ಯಾಚ್‌ಗಳನ್ನು ಕೈ ಚೆಲ್ಲಿದ್ದು ಮತ್ತು ಫೀಲ್ಡಿಂಗ್‌ನಲ್ಲಿ ಕೆಲವು ಆಟಗಾರರ ಅಸಮರ್ಪಕ ನಿರ್ವಹಣೆ ಸಮಸ್ಯೆಗೆ ಕಾರಣವಾಗಿತ್ತು. ಟಾಸ್ ಜಯಿಸಿ ಫೀಲ್ಡಿಂಗ್ ಆಯ್ದುಕೊಂಡ ಪಾಕಿಸ್ತಾನ ಆರಂಭದಲ್ಲೇ ಸಮಸ್ಯೆ ಎದುರಿಸಿತ್ತು. ವೇಗಿ ವಹಾಬ್ ರಿಯಾಝ್ ಎಸೆತದಲ್ಲಿ ಆಸ್ಟ್ರೇಲಿಯದ ನಾಯಕ ಆ್ಯರೊನ್ ಫಿಂಚ್ ನೀಡಿದ ಕ್ಯಾಚ್‌ನ್ನು ಆಸಿಫ್ ಅಲಿ ಕೈ ಚೆಲ್ಲಿದ್ದರು. ಫಿಂಚ್ ಆಗ 26 ರನ್ ಗಳಿಸಿದ್ದರು. ಆಗ ತಂಡದ ಸ್ಕೋರ್ 67 ಆಗಿತ್ತು. ಫಿಂಚ್(82) ಮತ್ತು ಡೇವಿಡ್ ವಾರ್ನರ್(107) ಮೊದಲ ವಿಕೆಟ್‌ಗೆ 146 ರನ್‌ಗಳ ಜೊತೆಯಾಟ ನಡೆಸಿದ್ದರು. ಮುಹಮ್ಮದ್ ಆಮಿರ್ (30ಕ್ಕೆ 5) ದಾಳಿಗೆ ಸಿಲುಕಿ ಆಸ್ಟ್ರೇಲಿಯ 49 ಓವರ್‌ಗಳಲ್ಲಿ 307 ರನ್‌ಗಳಿಗೆ ಆಲೌಟಾಗಿತ್ತು. ಆದರೆ ಪಾಕಿಸ್ತಾನಕ್ಕೆ 308 ರನ್‌ಗಳ ಗೆಲುವಿನ ಸವಾಲನ್ನು ಬೆನ್ನಟ್ಟಲು ಸಾಧ್ಯವಾಗಲಿಲ್ಲ. 45.4 ಓವರ್‌ಗಳಲ್ಲಿ 266 ರನ್‌ಗಳಿಗೆ ಆಲೌಟಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News