ಮುಂದಿನ ವರ್ಷದಿಂದ ಆಂಗ್ಲ ಮಾಧ್ಯಮ ಪ್ರವೇಶ ಸಂಖ್ಯೆ ಹೆಚ್ಚಳ: ಸಿಎಂ ಕುಮಾರಸ್ವಾಮಿ

Update: 2019-06-14 14:17 GMT

ಬೆಂಗಳೂರು, ಜೂ. 14: ಸರಕಾರಿ ಶಾಲೆಗಳಲ್ಲಿ ಆರಂಭಿಸಿರುವ ಆಂಗ್ಲ ಮಾಧ್ಯಮಕ್ಕೆ ಮುಂದಿನ ವರ್ಷದಿಂದ ಪ್ರವೇಶ ಸಂಖ್ಯೆಯನ್ನು ಹೆಚ್ಚಳ ಮಾಡಲಾಗುವುದು ಎಂದ ಸಿಎಂ ಕುಮಾರಸ್ವಾಮಿ, ಎಲ್ಲ ವರ್ಗದ ಜನರಿಗೆ ಗುಣಮಟ್ಟದ ಶಿಕ್ಷಣ ನೀಡುವುದು ಸರಕಾರದ ಆದ್ಯತೆ ಎಂದು ಹೇಳಿದ್ದಾರೆ.

ಶುಕ್ರವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಶಿಕ್ಷಣ ಇಲಾಖೆಯಿಂದ ಏರ್ಪಡಿಸಿದ್ದ 1 ಸಾವಿರ ಸರಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮದ ವಿಭಾಗ ಹಾಗೂ 100 ಹೊಸ ಕೆಪಿಎಸ್ ಶಾಲೆಗಳು ಮತ್ತು ಪೂರ್ವ ಪ್ರಾಥಮಿಕ ಶಾಲೆಗಳ ಉದ್ಘಾಟನೆ ನೆರವೇರಿಸಿದ ಅವರು ಮಾತನಾಡಿದರು.

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಆಂಗ್ಲ ಮಾಧ್ಯಮ ಅಗತ್ಯ. ತೀವ್ರ ವಿರೋಧದ ಮಧ್ಯೆಯೂ ರಾಜ್ಯ ಸರಕಾರ ಒಳ್ಳೆಯ ತೀರ್ಮಾನ ಕೈಗೊಂಡಿದ್ದು, ಇದರಿಂದ ಬಡ ಮಕ್ಕಳಿಗೆ ಅನುಕೂಲವಾಗಲಿದೆ ಎಂದ ಅವರು, ಶಿಕ್ಷಕರು ಗುಣಮಟ್ಟದ ಶಿಕ್ಷಣ ನೀಡಲು ಆಸ್ಥೆ ವಹಿಸಬೇಕು. ನಿಮ್ಮ ಎಲ್ಲ ಸಮಸ್ಯೆಗಳನ್ನು ಈಡೇರಿಸಲು ಸರಕಾರ ಬದ್ಧ ಎಂದರು.

ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಮಾತನಾಡಿ, ಸರಕಾರಿ ಶಾಲೆಯಲ್ಲಿ ಆಂಗ್ಲ ಮಾಧ್ಯಮವನ್ನು ತೆರೆಯುತ್ತಿರುವುದರಿಂದ ಕನ್ನಡ ಭಾಷೆಯನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂದು ಯಾರೂ ಭಾವಿಸಬಾರದು. ಮಾತೃಭಾಷೆ ರಕ್ಷಣೆ ಮಾಡುವ ಜೊತೆ-ಜೊತೆಗೆ ಸರಕಾರಿ ಶಾಲೆಯಲ್ಲೂ ಆಂಗ್ಲ ಮಾಧ್ಯಮ ಆರಂಭಿಸಲಾಗಿದೆ ಎಂದರು.

ಆಂಗ್ಲ ಮಾಧ್ಯಮ ಶಾಲೆ ಆರಂಭದಿಂದ ಕನ್ನಡ ಭಾಷೆ ಬಗ್ಗೆ ನಿರ್ಲಕ್ಷ ವಹಿಸಿದ್ದೇವೆ ಎಂಬ ಭಾವನೆ ಬೇಡ. ನಾವೆಲ್ಲರೂ ಸರಕಾರಿ ಶಾಲೆಗಳಲ್ಲಿ ಕಲಿತವರು. ಖಾಸಗಿ ಶಾಲೆಗಳತ್ತ ಮುಖ ಮಾಡಿರುವ ಪೋಷಕರಿಗೆ ಸರಕಾರಿ ಶಾಲೆಗಳಲ್ಲಿಯೂ ಒಳ್ಳೆಯ ಶಿಕ್ಷಣ ಸಿಗುತ್ತದೆ ಎಂಬುದನ್ನು ನಿರೂಪಿಸಬೇಕು ಎಂದರು.

ದೇಶದಲ್ಲಿ ಕರ್ನಾಟಕ ಶಿಕ್ಷಣದಲ್ಲಿ ಮಾದರಿ ರಾಜ್ಯ ಆಗಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರಕಾರ 1,200 ಕೋಟಿ ರೂ.ಗಳನ್ನು ಸರಕಾರಿ ಶಾಲೆಗಳ ಮೂಲಸೌಲಭ್ಯಕ್ಕೆ ಮೀಸಲಿಟ್ಟಿದೆ. ಮೈತ್ರಿ ಸರಕಾರ ಶಿಕ್ಷಣ ಕ್ಷೇತ್ರಕ್ಕೆ ಆದ್ಯತೆ ನೀಡಿದೆ ಎಂದು ಪರಮೇಶ್ವರ್ ಹೇಳಿದರು.

ಕಾರ್ಯಕ್ರಮದಲ್ಲಿ ಸಚಿವ ಸಾ.ರಾ.ಮಹೇಶ್, ಪರಿಷತ್ ಸದಸ್ಯರಾದ ಬಸವರಾಜ ಹೊರಟ್ಟಿ, ಭೋಜೇಗೌಡ, ಶ್ರೀಕಂಠೇಗೌಡ, ಶಾಸಕ ರೋಷನ್ ಬೇಗ್, ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್, ಶಿಕ್ಷಣ ಇಲಾಖೆ ಆಯುಕ್ತ ಪಿ.ಸಿ.ಜಾಫರ್ ಸೇರಿದಂತೆ ಇನ್ನಿತರರು ಹಾಜರಿದ್ದರು.

ಕನ್ನಡ ವಿರೋಧಿಯಲ್ಲ

ನಾನು ಕನ್ನಡ ವಿರೋಧಿಯಲ್ಲ. ಕನ್ನಡ ಭಾಷೆ ಉಳಿಸುವ ಬದ್ಧತೆಯೊಂದಿಗೆ ಎಲ್ಲ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕೆಂಬ ಉದ್ದೇಶದಿಂದ ಸರಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಆರಂಭಿಸಲಾಗಿದೆ.

-ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News