ಬಿಎಸ್‌ವೈಯ 'ಮುಖ್ಯಮಂತ್ರಿ' ಆಸೆ ತಪ್ಪೇನಲ್ಲ: ಸಚಿವ ಡಿ.ಕೆ.ಶಿವಕುಮಾರ್

Update: 2019-06-14 14:39 GMT

ಬೆಂಗಳೂರು, ಜೂ.14: ರಾಜ್ಯದ ಮೈತ್ರಿ ಸರಕಾರ ಪತನವಾಗಿ, ಬಿಜೆಪಿ ಅಧಿಕಾರಕ್ಕೆ ಬಂದು ತಾವು ಮುಖ್ಯಮಂತ್ರಿ ಆಗಬೇಕೆಂದು ಯಡಿಯೂರಪ್ಪನವರು ಆಸೆ ಪಡುವುದರಲ್ಲಿ ತಪ್ಪೇನಿಲ್ಲ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ವ್ಯಂಗ್ಯವಾಡಿದರು.

ಶುಕ್ರವಾರ ರಾಜಭವನದ ಗಾಜಿನಮನೆಯಲ್ಲಿ ಇಬ್ಬರು ಪಕ್ಷೇತರ ಶಾಸಕರು ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಿತ್ರ ಪಕ್ಷದ ಶಾಸಕರು ಪರಸ್ಪರ ಹೊಡೆದಾಡಿಕೊಂಡು ಸರಕಾರ ಬೀಳುತ್ತದೆ ಎಂದು ಹೇಳಿಕೆ ನೀಡಿದ್ದರು ಎಂದರು.

ಸರಕಾರ ಬೀಳುತ್ತದೆ ಎಂದು ಹೇಳುವ ಮೂಲಕ ಯಡಿಯೂರಪ್ಪನವರಿಗೆ ಸಂತೋಷ ಸಿಗುವುದಾದರೆ ಸಿಗಲಿ, ನಮಗೇನೂ ಬೇಸರವಿಲ್ಲ. ಕಳೆದೊಂದು ವರ್ಷದಿಂದಲೂ ಯಡಿಯೂರಪ್ಪನವರು ಇದೇ ರೀತಿ ಮೈತ್ರಿ ಸರಕಾರದ ಬಗ್ಗೆ ಭವಿಷ್ಯ ನುಡಿಯುತ್ತಿದ್ದಾರೆ. ನಾವು ಯಡಿಯೂರಪ್ಪನವರ ಭವಿಷ್ಯವನ್ನೂ ನೋಡಿದ್ದೇವೆ, ಬಿಜೆಪಿ ನಾಯಕರ ಭವಿಷ್ಯವನ್ನೂ ನೋಡಿದ್ದೇವೆ ಎಂದು ಎಂದು ಅವರು ಹೇಳಿದರು.

ಪಕ್ಷೇತರರಿಗೆ ಹೆಚ್ಚಿನ ಆದ್ಯತೆ ನೀಡುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮೈತ್ರಿ ಸರಕಾರ ಸುಗಮವಾಗಿ ನಡೆಯಬೇಕಾದರೆ ಯಾರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕೋ ಅವರನ್ನು ಸೇರಿಸಿಕೊಳ್ಳಲಾಗುತ್ತಿದೆ ಎಂದರು.

ಪ್ರಾಮಾಣಿಕವಾಗಿರುವ ಹಿರಿಯ ನಾಯಕರಿಗೂ ಮುಂದೆ ಖಂಡಿತ ಅವಕಾಶವಿದೆ. ಪಕ್ಷ ಉಳಿಯಬೇಕು ಅನ್ನೋ ಉದ್ದೇಶದಿಂದ ನಾವು ಎಲ್ಲ ತರಹದ ತ್ಯಾಗಕ್ಕೂ ಸಿದ್ಧರಿದ್ದೇವೆ. ಪಕ್ಷ ಸೂಕ್ತ ಕಾಲದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಶಿವಕುಮಾರ್ ಹೇಳಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News