ಜನ್ನತುಲ್ ಬಖಿ ಪುನರ್ ನಿರ್ಮಾಣಕ್ಕೆ ಆಗ್ರಹಿಸಿ ಧರಣಿ

Update: 2019-06-14 14:58 GMT

ಬೆಂಗಳೂರು, ಜೂ.14: ಸೌದಿ ಅರೇಬಿಯಾದ ಪವಿತ್ರ ನಗರ ಮದೀನಾದಲ್ಲಿರುವ ಮಸ್ಜಿದುನ್ನಬವಿ ಬಳಿಯಿರುವ ಜನ್ನತುಲ್ ಬಖಿ ಇಸ್ಲಾಮಿನಲ್ಲಿ ಪ್ರಮುಖ ಸ್ಥಾನವನ್ನು ಪಡೆದಿದ್ದು, ಇದರ ಪುನರ್ ನಿರ್ಮಾಣ ಮಾಡುವಂತೆ ಆಗ್ರಹಿಸಿ ಅಂಜುಮನ್-ಎ-ಇಮಾಮಿಯಾ ನೇತೃತ್ವದಲ್ಲಿ ಮೌನ ಧರಣಿ ನಡೆಸಲಾಯಿತು.

ಶುಕ್ರವಾರ ನಗರದ ಟೌನ್ ಮುಂಭಾಗದಲ್ಲಿ ಆಯೋಜಿಸಿದ್ದ ಮೌನ ಧರಣಿಯಲ್ಲಿ ರಿಚ್ಮಂಡ್ ಟೌನ್ ಯೂತ್, ಇದಾರೇ ಫೈಝುಲ್ ಇಸ್ಲಾಮ್, ಮಹಿಳಾ ಸಂಘಟನೆಗಳಾದ ಅಂಜುಮನ್ ಎ ಸುಗ್ರಾ, ಅಂಜುಮ-ಎ-ಝೆಹ್ರಾ ಎಸ್.ಎ., ಝೆಹ್ರ ಕಮಿಟಿ ಹಾಗೂ ಮಖ್ತಬೆ ನರ್ಗೀಸ್ ಪಾಲ್ಗೊಂಡಿದ್ದವು.

ಜನ್ನತುಲ್ ಬಖಿಯಲ್ಲಿ ಇಸ್ಲಾಮಿನ ಪ್ರಮುಖರ ಸಮಾಧಿಗಳಿದ್ದು, 1925ರಲ್ಲಿ ಅಂದಿನ ಸೌದಿ ಆಡಳಿತವು ನಾಶಪಡಿಸಿತ್ತು. ಸೌದಿ ಅರೇಬಿಯಾ ಸರಕಾರವು ಜನ್ನತುಲ್ ಬಖಿಯನ್ನು ಪುನರ್ ನಿರ್ಮಾಣ ಮಾಡಬೇಕೆಂದು ಆಗ್ರಹಿಸಿ ಪ್ರತಿ ವರ್ಷ ವಿವಿಧ ಸಂಘಸಂಸ್ಥೆಗಳ ಸಹಯೋಗದೊಂದಿಗೆ ನಾವು ಧರಣಿಯನ್ನು ಹಮ್ಮಿಕೊಳ್ಳುತ್ತಿದ್ದೇವೆ ಎಂದು ಶಿಕ್ಷಣ ತಜ್ಞ ಆಗಾ ಸುಲ್ತಾನ್ ತಿಳಿಸಿದರು.

ಧರಣಿಯಲ್ಲಿ ಅಂಜುಮನ್-ಎ-ಇಮಾಮಿಯ ಕಾರ್ಯದರ್ಶಿ ಸೈಯ್ಯದ್ ಮುಹಮ್ಮದ್ ಅಬ್ಬಾಸ್, ರಿಚ್ಮಂಡ್ ಯೂತ್ ಸಂಘಟನೆಯ ಪ್ರಮುಖ ನಾಸಿರ್, ಸೂಫಿ ಸೈಯ್ಯದ್ ಆರಿಫ್ ಹುಸೇನ್ ಶಾ ವಾರ್ಸಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News