ವೃದ್ಧರ ಆರೈಕೆಯಲ್ಲಿ ಶೇ. 35 ಜನರು ಎಂದಿಗೂ ಸಂತಸ ಹೊಂದಿರುವುದಿಲ್ಲ: ವರದಿ

Update: 2019-06-14 15:37 GMT

ಹೊಸದಿಲ್ಲಿ, ಜೂ. 14: ಹೆಚ್ಚಿನ ಮನೆಗಳಲ್ಲಿ ವೃದ್ಧರು ಹೊರೆಯಾಗಿರುವುದು ಹೊಸತೇನೂ ಅಲ್ಲ. ಆದರೆ, ಶೇ. 35 ಆರೈಕೆದಾರರು (ಪುತ್ರ, ಸೊಸೆ, ಮಗಳು, ಅಳಿಯ) ವೃದ್ಧರನ್ನು ಆರೈಕೆ ಮಾಡುವಲ್ಲಿ ಎಂದಿಗೂ ಸಂತಸ ಹೊಂದಿರುವುದಿಲ್ಲ ಎಂದು ವರದಿ ಹೇಳಿದೆ.

'ಜಾಗತಿಕ ವೃದ್ಧರ ನಿಂದನೆ ಜಾಗೃತಿ ದಿನ'ದ ಮುನ್ನಾ ದಿನವಾದ ಶುಕ್ರವಾರ ಚಾರಿಟೆಬಲ್ ಸಂಘಟನೆ 'ಹೆಲ್ಪ್ ಏಜ್ ಇಂಡಿಯಾ' ಬಿಡುಗಡೆ ಮಾಡಿದ 'ಭಾರತದಲ್ಲಿ ವೃದ್ಧರ ನಿಂದನೆ: ಆರೈಕೆಯಲ್ಲಿ ಕುಟುಂಬದ ಪಾತ್ರ: ಸವಾಲು ಹಾಗೂ ಪ್ರತಿಕ್ರಿಯೆ'ಯಲ್ಲಿ ಈ ವಿಚಾರ ಹೇಳಲಾಗಿದೆ. ಕುಟುಂಬದಲ್ಲಿರುವ ವೃದ್ಧರನ್ನು ವೃದ್ಧಾಶ್ರಮಗಳಿಗೆ ಸೇರಿಸುವುದನ್ನು ಶೇ. 29 ಪ್ರತಿಕ್ರಿಯೆದಾರರು ಒಪ್ಪಿಕೊಂಡಿದ್ದಾರೆ. ವೃದ್ಧರ ಮೇಲೆ ಉದ್ಧಟತನ ತೋರುತ್ತಿರುವುದಕ್ಕೆ ತಮಗಾಗುತ್ತಿರುವ ಆಯಾಸ ಹಾಗೂ ಹತಾಶೆ ಕಾರಣ ಎಂದು ಕಾಲು ಭಾಗ ಪ್ರತಿಕ್ರಿಯೆದಾರರು ತಿಳಿಸಿದ್ದಾರೆ. ವೃದ್ಧರನ್ನು ನೋಡಿಕೊಳ್ಳುವುದರಲ್ಲಿ ಶೇ. 35 ಆರೈಕೆದಾರರು ಎಂದಿಗೂ ಸಂತಸ ಹೊಂದಿಲ್ಲ. ಶೇ. 25 ಜನರು ಆಯಾಸ ಹಾಗೂ ಹತಾಶೆಯ ಭಾವನೆ ಹೊಂದಿರುವುದರಿಂದ, ಕುಟಂಬದ ವೃದ್ಧರೊಂದಿಗೆ ಉದ್ಧಟತನ ದಿಂದ ವರ್ತಿಸುತ್ತಾರೆ ಎಂದು ವರದಿ ಹೇಳಿದೆ.

ಈ ವರದಿಯಲ್ಲಿ 2090 ಆರೈಕೆದಾರರ ಪ್ರತಿಕ್ರಿಯೆ ಕೋರಲಾಗಿತ್ತು. ಇವರಲ್ಲಿ ಮುಖ್ಯವಾಗಿ ಪುತ್ರ, ಸೊಸೆ, ಮಗಳು ಹಾಗೂ ಅಳಿಯಂದಿರು ಸೇರಿದ್ದರು. 20 ನಗರಗಳ ವರದಿ ವೃದ್ಧರ ಬಗ್ಗೆ ಅಗೌರವ, ನಿರ್ಲಕ್ಷ್ಯ ಹಾಗೂ ಮೌಖಿಕ ನಿಂದನೆ ಅತಿ ಹೆಚ್ಚಿನ ನಿಂದನೆಯ ರೂಪ ಎಂದು ಗುರುತಿಸಿದೆ. ಅಚ್ಚರಿಯ ವಿಚಾರವೆಂದರೆ, ಮನೆಯಲ್ಲಿ ಪ್ರಬುದ್ಧ ಮಕ್ಕಳ ಕೈಯಲ್ಲಿ ವೃದ್ಧರು ನಿಂದನೆಗೆ ಒಳಗಾಗುವ ಹೊರತಾಗಿಯೂ ಕುಟುಂಬದ ಒಳಗಿರುವುದನ್ನೇ ಬಯಸುತ್ತಾರೆ. ಅವರ ಪರಿಹಾರ ಯಾವಾಗಲೂ ಮಕ್ಕಳು, ಪ್ರಾಥಮಿಕ ಆರೈಕೆದಾರರಲ್ಲಿ ಜಾಗೃತಿ ಮೂಡಿಸುವುದು ಆಗಿರುತ್ತದೆ. ಆದರೆ, ಕುಟುಂಬದಿಂದ ಹೊರಗೆ ಹೋಗುವುದು ಆಗಿರುವುದಿಲ್ಲ ಎಂದು 'ಹೆಲ್ಪ್ ಏಜ್ ಇಂಡಿಯಾ'ದ ಸಿಇಒ ಮ್ಯಾಥ್ಯೂವ್ ಚೆರಿಯನ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News