ಐಎಂಎ ಬಹುಕೋಟಿ ವಂಚನೆ ಪ್ರಕರಣ: ಮಾಹಿತಿ ಬೇಕೆಂದ ಜಾರಿ ನಿರ್ದೇಶನಾಲಯ

Update: 2019-06-14 17:33 GMT

ಬೆಂಗಳೂರು, ಜೂ.14: ಐಎಂಎ ಕಂಪೆನಿಯು ಫೇಮಾ ಕಾಯ್ದೆ ಉಲ್ಲಂಸಿದ ಆರೋಪ ಕೇಳಿ ಬಂದಿರುವ ಹಿನ್ನೆಲೆ ಜಾರಿ ನಿರ್ದೇಶನಾಲಯ (ಈ.ಡಿ) ಪ್ರಕರಣದ ಬಗ್ಗೆ ಮಾಹಿತಿ ಪಡೆಯಲು ಮುಂದಾಗಿದೆ.

ಕಂಪೆನಿ ಚಾಲ್ತಿಯ ಪ್ರಕ್ರಿಯೆ ಮತ್ತು ಕಂಪೆನಿ ಮುಖ್ಯಸ್ಥ ಮುಹಮ್ಮದ್ ಮನ್ಸೂರ್ ಖಾನ್ ಮಾಹಿತಿ ಇದ್ದಲ್ಲಿ, ತಿಳಿಯಪಡಿಸುವಂತೆ ಶುಕ್ರವಾರ ಇಲ್ಲಿನ ಶಿವಾಜಿನಗರದ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಗೆ ಈಡಿ ಇಲಾಖೆಯ ಸಿಬ್ಬಂದಿ ಪತ್ರದೊಂದಿಗೆ ಬಂದಿದ್ದರು ಎಂದು ತಿಳಿದುಬಂದಿದೆ. ಆದರೆ, ಈ ಗಂಭೀರ ಪ್ರಕರಣದ ತನಿಖೆಯನ್ನು ರಾಜ್ಯ ಸರಕಾರ ಸಿಟ್(ಎಸ್‌ಐಟಿ)ಗೆ ವರ್ಗಾಯಿಸಿದ ಹಿನ್ನೆಲೆ, ಸಿಟ್ ಅಧಿಕಾರಿಗಳಿಂದಲೇ ಮಾಹಿತಿ ಪಡೆದುಕೊಳ್ಳುವಂತೆ ಪೊಲೀಸರು ತಿಳಿಸಿದ್ದಾರೆ ಎನ್ನಲಾಗಿದೆ.

ಐಟಿ ಮಾಹಿತಿ: 2017ರಲ್ಲಿ ಐಎಂಎ ಕಂಪನಿ ಮೇಲೆ ಆದಾಯ ತೆರಿಗೆ ಇಲಾಖೆ(ಐಟಿ) ಅಧಿಕಾರಿಗಳು ದಾಳಿ ನಡೆಸಿದ್ದರು. ಇದೀಗ ಕಂಪೆನಿ ತೆರಿಗೆ ವಂಚಿಸಿದೆಯೇ ಎಂಬ ಬಗ್ಗೆ ಐಟಿ ಅಧಿಕಾರಿಗಳೂ ಪರಿಶೀಲಿಸಲು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಆಡಿಟರ್ ವಶಕ್ಕೆ

ಐಎಂಎ ಕಂಪೆನಿ ವಂಚನೆ ಪ್ರಕರಣ ಸಂಬಂಧ ಕಂಪೆನಿಯ ಲೆಕ್ಕ ತಪಾಸಣೆ ಮಾಡಿದ್ದ ಇಕ್ಬಾಲ್ ಖಾನ್ ಎಂಬಾತನನ್ನು ವಿಶೇಷ ತನಿಖಾ ತಂಡದ ಅಧಿಕಾರಿಗಳು ಗುರುವಾರ ರಾತ್ರಿ ವಶಕ್ಕೆ ಪಡೆದು, ವಿಚಾರಣೆಗೊಳಪಡಿಸಿದರು. ಬೆಂಗಳೂರಿನ ಫ್ರೇಜರ್ ಟೌನ್ ನಿವಾಸಿಯಾಗಿರುವ ಇಕ್ಬಾಲ್ ಖಾನ್, ಹಲವು ವರ್ಷಗಳಿಂದ ಕಂಪೆನಿಯ ಆರ್ಥಿಕ ವ್ಯವಹಾರ ಮತ್ತು ಲೆಕ್ಕ ತಪಾಸಣೆ ಮಾಡುತ್ತಿದ್ದ ಎಂದು ಹೇಳಲಾಗುತ್ತಿದೆ.

30 ಸಾವಿರ ದೂರು ದಾಖಲು

ಐಎಂಎ ಬಹುಕೋಟಿ ವಂಚನೆ ಪ್ರಕರಣ ಸಂಬಂಧ ಸತತ ಐದು ದಿನಗಳಿಂದ 30 ಸಾವಿರಕ್ಕೂ ಅಧಿಕ ಮಂದಿ ದೂರುಗಳನ್ನು ಇಲ್ಲಿನ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News