ದಕ್ಷಿಣ ಆಫ್ರಿಕ-ಅ- ಫ್ಘಾನಿಸ್ತಾನಕ್ಕೆ ವಿಶ್ವಕಪ್‌ನಲ್ಲಿ ಗೆಲುವಿನ ಕನಸು

Update: 2019-06-14 18:31 GMT

ಕಾರ್ಡಿಫ್, ಜೂ.14: ದಕ್ಷಿಣ ಆಫ್ರಿಕ ಮತ್ತು ಅಫ್ಘಾನಿಸ್ತಾನ ಈ ಬಾರಿಯ ವಿಶ್ವಕಪ್‌ನಲ್ಲಿ ಗೆಲುವು ದಾಖಲಿಸಿಲ್ಲ. ಶನಿವಾರ ನಡೆಯಲಿರುವ ವಿಶ್ವಕಪ್‌ನ ಪಂದ್ಯದಲ್ಲಿ ಉಭಯ ತಂಡಗಳು ಮೊದಲ ಗೆಲುವಿಗೆ ಎದುರು ನೋಡುತ್ತಿವೆ.

ದಕ್ಷಿಣ ಆಫ್ರಿಕ ಆಡಿರುವ ಮೂರು ಪಂದ್ಯಗಳಲ್ಲೂ ಸೋಲು ಅನುಭವಿಸಿದೆ. ಇನ್ನೊಂದು ಪಂದ್ಯ ಮಳೆಯಿಂದ ಕೊಚ್ಚಿ ಹೋದ ಹಿನ್ನೆಲೆಯಲ್ಲಿ ಒಂದು ಅಂಕವನ್ನು ತನ್ನ ಖಾತೆಗೆ ಸೇರಿಸಿಕೊಂಡಿದ್ದು, ಕೂಟದ ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. ಆದರೆ ಅಫ್ಘಾನಿಸ್ತಾನ ಆಡಿರುವ 3 ಪಂದ್ಯಗಳನ್ನು ಕಳೆದುಕೊಂಡಿದ್ದು, ಇನ್ನೂ ಖಾತೆ ತೆರೆದಿಲ್ಲ. ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.

 ದಕ್ಷಿಣ ಆಫ್ರಿಕ ತಂಡದ ಸೆಮಿಫೈನಲ್ ಅವಕಾಶ ಬಹುತೇಕ ಕ್ಷೀಣಿಸಿದೆ. ಮೊದಲ ಬಾರಿ ಇದು ಆರಂಭದ ಮೂರು ಪಂದ್ಯಗಳಲ್ಲಿ ಸತತ ಸೋಲು ಅನುಭವಿಸಿದೆ. ಇಂಗ್ಲೆಂಡ್, ಬಾಂಗ್ಲಾದೇಶ ಮತ್ತು ಭಾರತದ ವಿರುದ್ಧ ದಕ್ಷಿಣ ಆಫ್ರಿಕ ಸೋಲು ಅನುಭವಿಸಿದೆ. ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯ ಮಳೆಯಿಂದಾಗಿ ರದ್ದಾಗಿದೆ. ಅಫ್ಘಾನಿಸ್ತಾನ ಬೇರೆ ರೀತಿಯ ಸಮಸ್ಯೆ ಎದುರಿಸುತ್ತಿದೆ. ಹಾಲಿ ಚಾಂಪಿಯನ್ ಆಸ್ಟ್ರೇಲಿಯ, ಶ್ರೀಲಂಕಾ ಮತ್ತು ನ್ಯೂಝಿಲೆಂಡ್ ವಿರುದ್ಧ ಸೋಲು ಅನುಭವಿಸಿದೆ. ಇದೀಗ ಆಫ್ರಿಕ ವಿರುದ್ಧ ಅದೃಷ್ಟ ಪರೀಕ್ಷೆಗೆ ಅವಕಾಶ ಒದಗಿ ಬಂದಿದೆ. ದಕ್ಷಿಣ ಆಫ್ರಿಕ ತಂಡದಲ್ಲಿ ಅನುಭವಿ ಆಟಗಾರರು ಗಾಯದಿಂದಾಗಿ ಹೊರಗುಳಿದಿದ್ದಾರೆ. ಅನುಭವಿ ಬ್ಯಾಟ್ಸ್ ಮನ್‌ಗಳ ಕೊರತೆ ಎದ್ದು ಕಾಣುತ್ತಿದೆ. ತಂಡ ದುರ್ಬಲವಾಗಿದೆ ಎನ್ನುವುದಕ್ಕೆ ಕೊನೆಯ ಪಂದ್ಯ ಸಾಕ್ಷಿಯಾಗಿದೆ. ವಿಂಡೀಸ್ ವಿರುದ್ಧದ ಪಂದ್ಯ ಮಳೆಯಿಂದಾಗಿ ಸ್ಥಗಿತಗೊಳ್ಳುವ ಮೊದಲು ದಕ್ಷಿಣ ಆಫ್ರಿಕ 29ಕ್ಕೆ 2 ವಿಕೆಟ್ ಕಳೆದುಕೊಂಡಿತ್ತು. ನಾಯಕ ಎಫ್ ಡು ಪ್ಲೆಸಿಸ್ ಮತ್ತು ಕ್ವಿಂಟನ್ ಡಿ ಕಾಕ್ ಹೆಗಲ ಮೇಲೆ ಬ್ಯಾಟಿಂಗ್‌ನ ಹೊರೆ ಬಿದ್ದಿದೆ. ಇವರು ಅಫ್ಘಾನಿಸ್ತಾನದ ವಿರುದ್ಧ ಆಫ್ರಿಕ ತಂಡಕ್ಕೆ ಗೆಲ್ಲುವ ಅವಕಾಶ ಇದೆ. ಕಾಗಿಸೊ ರಬಾಡ ಮತ್ತು ಇಮ್ರಾನ್ ತಾಹಿರ್ ದಾಳಿಯನ್ನು ಅಫ್ಘಾನಿಸ್ತಾನದ ದಾಂಡಿಗರು ಎದುರಿಸಬೇಕಾಗಿದೆ.

ಅಫ್ಘಾನಿಸ್ತಾನ ತಂಡದಲ್ಲಿ ಮುಹಮ್ಮದ್ ಶಹಝಾದ್ ಫಿಟ್‌ನೆಸ್ ಸಮಸ್ಯೆಯಿಂದಾಗಿ ತಂಡದಿಂದ ಹೊರಗುಳಿದಿದ್ದಾರೆ. ರಶೀದ್ ಖಾನ್ ಎದುರಾಳಿ ತಂಡಗಳಿಗೆ ತಲೆನೋವು ತಂದಿದ್ದಾರೆ.

ಪಂದ್ಯದ ಸಮಯ: ಸಂಜೆ 6:00 ಗಂಟೆಗೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News