70 ವರ್ಷಗಳಿಂದ ಮಸೀದಿಯನ್ನು ಅತಿಕ್ರಮಣಕಾರರಿಂದ ರಕ್ಷಿಸುತ್ತಿರುವ ಸಿಖ್ಖರು

Update: 2019-06-15 14:41 GMT

ಲುಧಿಯಾನಾ,ಜೂ.15: ಲುಧಿಯಾನಾ ಜಿಲ್ಲೆಯ ಮಚ್ಚಿವಾರಾ ತಾಲೂಕಿನ ಹೇಡೊಂ ಬೇಟ್ ಗ್ರಾಮದಲ್ಲಿ ಒಬ್ಬನೇ ಒಬ್ಬ ಮುಸ್ಲಿಂ ವ್ಯಕ್ತಿಯಿಲ್ಲ,ಆದರೆ ಗ್ರಾಮದಲ್ಲಿರುವ 100 ವರ್ಷಗಳಷ್ಟು ಹಳೆಯದಾದ ಮಸೀದಿ ಇಂದಿಗೂ ತಲೆಯೆತ್ತಿ ನಿಂತಿದೆ. 1920ರಲ್ಲಿ ನಿರ್ಮಾಣಗೊಂಡಿರುವ ಮಸೀದಿಯು ಮುಸ್ಲಿಮರ ಕೊರತೆಯಿಂದ ಪರಿತ್ಯಕ್ತ ಸ್ಥಿತಿಯಲ್ಲಿದೆ.

 ಗ್ರಾಮದ ಮುಖ್ಯಸ್ಥರ ಶ್ರದ್ಧೆಯಿಂದಾಗಿ ಮಸೀದಿಯು ನೆಲಸಮಗೊಂಡಿಲ್ಲ ಅಥವಾ ಭೂಗಳ್ಳರ ಅತಿಕ್ರಮಣಕ್ಕೆ ಸಿಲುಕಿಲ್ಲ. ಮಸೀದಿಯನ್ನು ದೇವರ ನಿವಾಸ ಎಂದು ನಂಬಿರುವ ಗ್ರಾಮದ ಮುಖ್ಯಸ್ಥರು ಅದನ್ನು ನೆಲಸಮಗೊಳಿಸಲು ಅಥವಾ ಅತಿಕ್ರಮಿಸಿಕೊಳ್ಳಲು ಯಾರಿಗೂ ಅವಕಾಶ ನೀಡುತ್ತಿಲ್ಲ. ತಾವು ಜೀವಂತವಾಗಿರುವವರೆಗೂ ಮಸೀದಿಯು ಇರುತ್ತದೆ ಮತ್ತು ಅದು ನೆಲಸಮಗೊಳ್ಳದಂತೆ ಅಥವಾ ಅತಿಕ್ರಮಣಗೊಳ್ಳದಂತೆ ರಕ್ಷಿಸುತ್ತೇವೆ ಎಂಬ ಗಟ್ಟಿ ನಿಲುವನ್ನು ಅವರು ಹೊಂದಿದ್ದಾರೆ.

‘ಮಸೀದಿಯನ್ನು ನೆಲಸಮಗೊಳಿಸಲು ನಾವು ಯಾರಿಗೂ ಅವಕಾಶ ನೀಡುವುದಿಲ್ಲ. ಅದು ದೇವರ ನಿವಾಸವಾಗಿದೆ’ ಎನ್ನುತ್ತಾರೆ ಗ್ರಾಮದ ಸರಪಂಚ ಗುರ್ಪಾಲ್ ಸಿಂಗ್. ಗ್ರಾಮಸ್ಥರೆಲ್ಲ ಅವರಿಗೆ ಬೆಂಬಲವಾಗಿ ನಿಂತಿದ್ದಾರೆ.

ಇತರರ ಆರಾಧನಾ ಸ್ಥಳಗಳನ್ನು ರಕ್ಷಿಸುವುದರಲ್ಲಿ ಸಿಕ್ಖರು ಸುದೀರ್ಘ ಇತಿಹಾಸ ಹೊಂದಿದ್ದಾರೆ. ಗುರು ಗೋವಿಂದ ಸಿಂಗ್ ಅವರು ಮುಸ್ಲಿಮರಿಗಾಗಿ ಮಸೀದಿಯೊಂದನ್ನು ಸಹ ನಿರ್ಮಿಸಿದ್ದರು.

   ಈ ಗ್ರಾಮದಲ್ಲಿಯ ಮುಸ್ಲಿಮರು 1947ರಲ್ಲಿ ವಿಭಜನೆಯ ಸಂದರ್ಭದಲ್ಲಿ ಪಾಕಿಸ್ಥಾನಕ್ಕೆ ತೆರಳಿದ್ದರು. ಈ ಮಸೀದಿಯು ಮುಸ್ಲಿಂ ವಕ್ಫ್ ಮಂಡಳಿಯ ಅಧೀನದಲ್ಲಿ ಪಟ್ಟಿಮಾಡಲಾಗಿರುವ ಮುಸ್ಲಿಮರು ತೊರೆದು ಹೋದ ಹಲವಾರು ಆಸ್ತಿಗಳಲ್ಲಿ ಒಂದಾಗಿದೆ. ಪಂಜಾಬಿನಲ್ಲಿ ಮಸೀದಿಗಳು, ಕಬರಸ್ತಾನ್‌ಗಳು, ತಕಿಯಾ(ಸೂಫಿ ಸಂತರ ದಫನ ಸ್ಥಳ),ಶಾಲೆಗಳು,ಅನಾಥಾಶ್ರಮಗಳು,ಈದ್ಗಾ ಸೇರಿದಂತೆ ಮುಸ್ಲಿಂ ಆಸ್ತಿಗಳ ಬೃಹತ್ ಪಟ್ಟಿಯೇ ವಕ್ಫ್ ಮಂಡಳಿಯ ಬಳಿಯಿದೆ.

 ಈ ಪೈಕಿ ಹೆಚ್ಚಿನವು ಅತಿಕ್ರಮಣಗೊಂಡಿದ್ದು,ಅತಿಕ್ರಮಣಕೋರರ ಪಟ್ಟಿಯಲ್ಲಿ ಪಂಜಾಬ್ ಸರಕಾರವು ಅಗ್ರಸ್ಥಾನದಲ್ಲಿದೆ. ರಾಜ್ಯದಲ್ಲಿಯ ಭೂ ಮಾಫಿಯಾವು ಹಲವಾರು ಮುಸ್ಲಿಂ ಆಸ್ತಿಗಳನ್ನು ನುಂಗಿ ನೀರು ಕುಡಿದಿದ್ದು,ಅವುಗಳ ಗುರುತುಗಳನ್ನೂ ಉಳಿಸಿಲ್ಲ. ಇಂತಹುದರಲ್ಲಿ ಹೇಡೊಂ ಬೇಟ್‌ನ ಈ ಮಸೀದಿಯು ಇಂದಿಗೂ ಸುರಕ್ಷಿತ ವಾಗಿರುವುದು ಚೇತೋಹಾರಿ ವಿಷಯವಾಗಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News