‘ಅಪ್ಪ’ ಮತ್ತೊವ್ಮೆು ಮುಖ್ಯಮಂತ್ರಿ ಆಗಲಿ: ಬಿ.ವೈ.ವಿಜಯೇಂದ್ರ

Update: 2019-06-16 14:03 GMT

ಬೆಂಗಳೂರು, ಜೂ.16: ನರೇಂದ್ರ ಮೋದಿ ಪ್ರಧಾನಿ, ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆಗಬೇಕೆಂದೇ, ಲೋಕಸಭಾ ಚುನಾವಣೆಯಲ್ಲಿ ತಮ್ಮ ಸಮುದಾಯ ಒಗ್ಗಟ್ಟು ಪ್ರದರ್ಶನ ಮಾಡಿದೆ. ಹೀಗಾಗಿ, ಎಲ್ಲರ ಬಯಕೆಯಂತೆ, ಯಡಿಯೂರಪ್ಪ ಮುಖ್ಯಮಂತ್ರಿ ಆಗಲಿ ಎಂದು ಬಿ.ಎಸ್.ಯಡಿಯೂರಪ್ಪ ಪುತ್ರ, ಬಿಜೆಪಿ ಮುಖಂಡ ಬಿ.ವೈ.ವಿಜಯೇಂದ್ರ ಹೇಳಿದರು.

ರವಿವಾರ ಇಲ್ಲಿನ ಸದಾಶಿವನಗರದ ವೀರಶೈವ ಲಿಂಗಾಯತ ಭವನ ಸಭಾಂಗಣದಲ್ಲಿ ಬಸವೇಶ್ವರ ಸೇವಾ ಸಮಿತಿ ಆಯೋಜಿಸಿದ್ದ, ಬಸವ, ಅಕ್ಕಮಹಾದೇವಿ ಜಯಂತಿ ಹಾಗೂ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ದೇಶದ ಹಿತದೃಷ್ಟಿಯಿಂದ ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನ ಮಂತ್ರಿಯಾಗಬೇಕೆಂದು ಸಮಾಜದ ಎಲ್ಲ ಭಾಂದವರು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸಿದ್ದಾರೆ. ರಾಜ್ಯದ ಇತಿಹಾಸದಲ್ಲೇ ಸಮುದಾಯ ಒಗ್ಗಟ್ಟಾಗಿದೆ ಎಂದು ನುಡಿದರು.

ನಮ್ಮ ತಂದೆ ಯಡಿಯೂರಪ್ಪ ಅವರು, ತಮಗಾಗಿ ಬದುಕುವುದಕ್ಕಿಂತ ಸಮಾಜಕ್ಕೆ ಬದುಕಬೇಕೆಂದು ಸೂಚಿಸಿದ್ದಾರೆ ಎಂದ ಅವರು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ತಾನೂ ವರುಣಾ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ಸಿಗಲಿಲ್ಲ ಎಂಬ ಕಾರಣಕ್ಕಾಗಿ ಮುನಿಸಿಕೊಳ್ಳಲಿಲ್ಲ. ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷ ಹಾಗೂ ಸಮಾಜದ ಕಾರ್ಯಗಳಲ್ಲಿ ಭಾಗವಹಿಸುವೆ ಎಂದು ಹೇಳಿದರು.

ವೈಯಕ್ತಿಕ ಲಾಭಕ್ಕಾಗಿ ಕೆಲವು ಸಂಕುಚಿತ ಮನಸ್ಥಿತಿಗಳು ಸಮಾಜವನ್ನು ಒಡೆಯುವ ಕೆಲಸಕ್ಕೆ ಮುಂದಾಗಿವೆ. ಅಲ್ಲದೆ, ದೊಡ್ಡ ಸಮಾಜವಾಗಿರುವ ವೀರಶೈವ ಲಿಂಗಾಯತ ಸಮುದಾಯಗಳನ್ನು ಒಡೆಯಲು ಹಿಂದಿನಿಂದಲೂ ಪ್ರಯತ್ನ ನಡೆಯುತ್ತಿದೆ. ಆದರೆ, ಅದನ್ನು ಮೆಟ್ಟಿ ನಿಲ್ಲುವ ಶಕ್ತಿ ಬೆಳೆಸಿಕೊಳ್ಳಬೇಕು ಎಂದರು.

ನಿವೃತ್ತ ಐಎಎಸ್ ಅಧಿಕಾರಿ ಡಾ.ಸಿ ಸೋಮಶೇಖರ್ ಮಾತನಾಡಿ, ವಚನ ಸಾಹಿತ್ಯ ಇಲ್ಲದೇ ಕನ್ನಡ ಸಾಹಿತ್ಯ ಅಪೂರ್ಣ. ವಿದೇಶಗಳಲ್ಲಿ ವಚನ ಕಲಿಸುವ ಕ್ರಾಂತಿಯಾಗುತ್ತಿದೆ. ವಿಶ್ವಕ್ಕೆ ಸಂದೇಶ ಸಾರಿದ ಶರಣರ ವಚನಗಳನ್ನು ಪಾಲಕರು ಮಕ್ಕಳಿಗೆ ಕಲಿಸಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಮಾಜಿ ಸಚಿವೆ ಲೀಲಾವತಿ ಆರ್. ಪ್ರಸಾದ್ ಅವರಿಗೆ ಅವರಿಗೆ ಬಸವಶ್ರೀ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ವಿಭೂತಿಪುರ ಮಠದ ಡಾ. ಮಹಂತಲಿಂಗ ಶಿವಾಚಾರ್ಯ ಮಹಾಸ್ವಾಮೀಜಿ, ಅಖಿಲ ಭಾರತ ವೀರಶೈವ ಮಹಾಸಭಾದ ಬೆಂಗಳೂರು ನಗರ ಅಧ್ಯಕ್ಷ ಎಸ್.ಗುರುಸ್ವಾಮಿ, ಬಸವೇಶ್ವರ ಸೇವಾ ಸಮಿತಿ ಅಧ್ಯಕ್ಷ ವಿಶ್ವನಾಥಯ್ಯ ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News