ಕಸದಂತೆ ತುಂಬಿರುವ ದ್ವೇಷವನ್ನು ಅಳಿಸೋಣ: ಹಿರಿಯ ಪತ್ರಕರ್ತ ಬಿ.ಎಂ.ಹನೀಫ್

Update: 2019-06-16 14:04 GMT

ಬೆಂಗಳೂರು, ಜೂ.16: ದೇಶದಲ್ಲಿ ಕಸದಂತೆ ತುಂಬಿರುವ ದ್ವೇಷವನ್ನು ದೂರ ಮಾಡಿ ನಾವೆಲ್ಲರೂ ಒಂದಾಗಿ ಬಾಳಲು ನಾವು ಪ್ರಯತ್ನಿಸಬೇಕೆಂದು ಹಿರಿಯ ಪತ್ರಕರ್ತ ಬಿ.ಎಂ.ಹನೀಫ್ ತಿಳಿಸಿದ್ದಾರೆ.

ರವಿವಾರ ಸ್ಟೂಡೆಂಟ್ ಇಸ್ಲಾಮಿಕ್ ಆರ್ಗನೈಸೇಶನ್ ಆಫ್ ಇಂಡಿಯಾ ವತಿಯಿಂದ ನಗರದ ನಗರದಲ್ಲಿ ಆಯೋಜಿಸಿದ್ದ ವಿಶೇಷ ಈದ್ ಮಿಲನ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪರಿಸರ ರಕ್ಷಣೆಯಷ್ಟೇ ಇವತ್ತು ಜಾತಿ, ಧರ್ಮ ಹೆಸರಿನಲ್ಲಿ ಹಬ್ಬುತ್ತಿರುವ ದ್ವೇಷದಿಂದ ಮನುಷ್ಯರ ರಕ್ಷಣೆ ಮಾಡಬೇಕಾಗಿದೆ. ಅದಕ್ಕಾಗಿ ಎಲ್ಲರೂ ಪ್ರೀತಿ, ಸೌಹರ್ದತೆಯನ್ನು ವ್ಯಾಪಕಗೊಳಿಸಬೇಕಾಗಿದೆ ಎಂದರು.

ಪರಿಸರ ಕಾರ್ಯಕರ್ತೆ ಲಿಯೋ ಸಾಲ್ಡಾನಾ ಮಾತನಾಡಿ, ನಮ್ಮನ್ನು ಆವರಿಸಿರುವ ಇವತ್ತಿನ ಪರಿಸರ ಬಿಕ್ಕಟ್ಟಿನ ಬಗ್ಗೆ ಬೆಳಕು ಚೆಲ್ಲಿದರು. ಹವಾಮಾನ ಬದಲಾವಣೆಯು ನಮಗೆ ತಿಳಿದಿರುವಂತೆ ಮಾನವೀಯತೆ ಮತ್ತು ಜೀವನದ ಅಂತ್ಯವನ್ನು ಸೂಚಿಸುತ್ತದೆ ಎಂದು ಅಭಿಪ್ರಾಯಿಸಿದ್ದಾರೆ.

ಗ್ರಿನ್ ವರ್ಮ್ಸ್ ಸಂಸ್ಥೆಯ ಸಿಇಒ ಜಬೀರ್ ಕರತ್ ಮಾತನಾಡಿ, ಇಂದು ದೇಶದ ಅತಿ ದೊಡ್ಡ ಸವಾಲು ಘನ ತ್ಯಾಜ್ಯ ನಿರ್ವಹಣೆಯಾಗಿದೆ. ಈ ಬಗ್ಗೆ ಯುವಕರು ಆಸಕ್ತಿ ವಹಿಸಿ, ಈ ಸಮಸ್ಯೆಗೆ ಸೂಕ್ತ ಪರಿಹಾರ ಒದಗಿಸುತ್ತ ಇದನ್ನು ಸಮಾಜಿಕ ಉದ್ದಿಮೆಯಾಗಿ ಪರಿಗಣಿಸಬೇಕೆಂದು ಸಲಹೆ ನೀಡಿದರು.

ಎಸ್‌ಐಒ ರಾಜ್ಯಾಧ್ಯಕ್ಷ ನಿಹಾಲ್ ಕಿದಿಯೂರು ಮಾತನಾಡಿ, ಪರಿಸರ ಬಿಕ್ಕಟ್ಟನ್ನು ನಿವಾರಿಸುವ ನಿಟ್ಟಿನಲ್ಲಿ ನಾವೆಲ್ಲರೂ ಸೇರಿ ಕೈಗೊಳ್ಳಬೇಕಾದ ಮಹತ್ವದ ಕಾರ್ಯಗಳ ಕುರಿತು ಚಿಂತನೆ ನಡೆಸುವುದು ಇವತ್ತು ಆಯೋಜಿಸಿರುವ ಈದ್ ಮಿಲನ್ ಕಾರ್ಯಕ್ರಮದ ಮುಖ್ಯ ಸಂದೇಶವಾಗಿದೆ ಎಂದರು.

ಜಮಾತೆ ಇಸ್ಲಾಮಿ ಹಿಂದ್‌ನ ರಾಜ್ಯಾಧ್ಯಕ್ಷ ಡಾ.ಸಾದ್ ಬೆಳಗಾಮಿ ಮಾತನಾಡಿ, ಪರಿಸರ ಮತ್ತು ಸುಸ್ಥಿರತೆಯ ಇಸ್ಲಾಮಿಕ್ ಪರಿಕಲ್ಪನೆಯ ಬಗ್ಗೆ ಮತ್ತು ಇವತ್ತಿನ ಬಿಕ್ಕಟ್ಟನ್ನು ಪರಿಹರಿಸುವಲ್ಲಿ ಇಸ್ಲಾಮ್ ಯಾವ ರೀತಿ ಮಾರ್ಗೋಪಾಯಗಳನ್ನು ತಿಳಿಸಿದೆ. ಅದನ್ನು ಸೂಕ್ತವಾಗಿ ಬಳಸುವ ನಿಟ್ಟಿನಲ್ಲಿ ಮುಂದುವರಿಯಬೇಕಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News