ಐಎಂಎ ವಂಚನೆ ಪ್ರಕರಣ: ರಜಾ ದಿನವೂ ದೂರುಗಳ ಸುರಿಮಳೆ..!

Update: 2019-06-16 15:03 GMT

ಬೆಂಗಳೂರು, ಜೂ.16: ಐಎಂಎ ಸಮೂಹ ಸಂಸ್ಥೆಗಳ ಬಹುಕೋಟಿ ವಂಚನೆ ಪ್ರಕರಣ ಸಂಬಂಧ ರಜಾ ದಿನ ರವಿವಾರವೂ, ನೂರಾರು ಮಂದಿ ಇಲ್ಲಿನ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು.

ಐಎಂಎ ಕಂಪೆನಿ ವಂಚನೆ ಪ್ರಕರಣ ಸಂಬಂಧ ಇದುವರೆಗೂ 33,500 ದೂರುಗಳು ದಾಖಲಾಗಿದ್ದು, ರವಿವಾರ ಹೊರ ರಾಜ್ಯಗಳಾದ ತಮಿಳುನಾಡು, ಆಂಧ್ರ ಪ್ರದೇಶ ಸೇರಿದಂತೆ ಹಲವೆಡೆಗಳಿಂದ ಆಗಮಿಸಿದ ಹೂಡಿಕೆದಾರರು, ಶಿವಾಜಿನಗರದ ಗಣೇಶ್ ಭಾಗ್ ಸಭಾಂಗಣದಲ್ಲಿ ದೂರು ಸಲ್ಲಿಸುತ್ತಿದ್ದ ದೃಶ್ಯ ಕಂಡು ಬಂತು.

ಆಸ್ತಿ ಮುಟ್ಟುಗೋಲು: ಮತ್ತೊಂದೆಡೆ ಆರೋಪಿ ಐಎಂಎ ಮಾಲಕ ಮುಹಮ್ಮದ್ ಮನ್ಸೂರ್ ಖಾನ್ ಅವರ ಆಸ್ತಿಯ ದಾಖಲೆ ಪತ್ರಗಳನ್ನು, ಸಿಟ್ ಶೋಧ ಮಾಡುತ್ತಿದ್ದು, ಸಂಬಂಧಪಟ್ಟ ಭೂ-ವ್ಯವಹಾರ ಇಲಾಖೆ ಸೇರಿದಂತೆ ಇನ್ನಿತರೆ ಇಲಾಖೆಗಳಿಗೆ ಸಿಟ್ ಪತ್ರ ಬರೆದು, ಮಾಹಿತಿ ನೀಡುವಂತೆ ಕೋರಿದೆ ಎಂದು ಹೇಳಲಾಗುತ್ತಿದೆ.

ಹಾಗೆಯೇ ಕೆಪಿಐಡಿ (ಕರ್ನಾಟಕ ಠೇವಣಿದಾರರ ಹಿತರಕ್ಷಣಾ ಕಾಯ್ದೆ) ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಳ್ಳಲು ನಿರ್ಧಾರ ಕೈಗೊಂಡಿದ್ದು, ಈ ಹಿನ್ನೆಲೆ ಕಂಪೆನಿ ಮಾಲಕನ ಸ್ಥಿರ ಹಾಗೂ ಚರ ಆಸ್ತಿಗಳ ಮುಟ್ಟುಗೋಲಿಗೆ ತಯಾರಿ ನಡೆದಿದೆ. ಈಗಾಗಲೇ ಮನ್ಸೂರ್ ನಿವಾಸದಲ್ಲಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಮನ್ಸೂರ್ ನಾಪತ್ತೆಯಾಗಿರುವ ಕಾರಣ ಆತನಿಗೆ ಸೇರಿದ ಆಸ್ತಿಪಾಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ನಿರ್ಧಾರ ಮಾಡಿದ್ದಾರೆ. ಇದಕ್ಕಾಗಿ ಸದ್ಯದಲ್ಲೇ ನ್ಯಾಯಾಲಯದ ಅನುಮತಿ ಪಡೆಯಲಿದ್ದಾರೆ ಎಂದು ತಿಳಿದು ಬಂದಿದೆ.

‘100 ದಿನದಲ್ಲಿ ವಾಪಸ್ ನೀಡಿ’

ಐಎಂಎ ವಂಚನೆ ಪ್ರಕರಣದಲ್ಲಿ ಮೋಸ ಹೋಗಿರುವ ಠೇವಣಿದಾರರಿಗೆ 100 ದಿನಗಳಲ್ಲಿ ಹಣ ವಾಪಾಸ್ಸು ದೊರಕಿಸುವ ಕಠಿಣ ಕ್ರಮವನ್ನು ಸಮ್ಮಿಶ್ರ ಸರಕಾರ ತೆಗೆದುಕೊಳ್ಳಬೇಕು ಎಂದು ಮಾಜಿ ಸಚಿವ ಎಚ್.ಕೆ.ಪಾಟೀಲ ತಮ್ಮ ಟ್ವಿಟ್ ಮೂಲಕ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News