ಅಂತರ್‌ರಾಷ್ಟ್ರೀಯ ಹಣಕಾಸು ಸಂಸ್ಥೆಗಳಿಂದ ಸ್ವಾತಂತ್ರ್ಯ ಗಳಿಸಿದ ಬೊಲಿವಿಯಾ ಎಂಬ ಬಡ ರಾಷ್ಟ್ರ

Update: 2019-06-17 18:35 GMT

ಬೊಲಿವಿಯಾ ಎಂಬ ಒಂದು ಅತ್ಯಂತ ಹಿಂದುಳಿದಿದ್ದ ರಾಷ್ಟ್ರ, ಕಳೆದ 2017ರ ಜುಲೈಯಲ್ಲಿ 1944ರ ಬ್ರೆಟ್ಟನ್ ವುಡ್ ಆರ್ಥಿಕ ಸಮ್ಮೇಳನದ ಒಪ್ಪಂದದ ಸಂಸ್ಥೆಗಳಾದ ಅಂತರ್‌ರಾಷ್ಟ್ರೀಯ ಹಣಕಾಸು ನಿಧಿ ಹಾಗೂ ವಿಶ್ವಬ್ಯಾಂಕ್‌ನಿಂದ ವಿಮೋಚನೆ ಪಡೆದು ಸ್ವಾತಂತ್ರ್ಯಗಳಿಸಿತು ಎಂದು ತನ್ನನ್ನು ಘೋಷಿಸಿಕೊಂಡಿತು. ಅಂದರೆ ಬೊಲಿವಿಯಾ ಇನ್ನುಮುಂದೆ ಈ ಸಂಸ್ಥೆಗಳ ಸಾಲ ಹಾಗೂ ಹಿಡಿತದಡಿ ಇರುವುದಿಲ್ಲ. ಬೊಲಿವಿಯಾದ ಭವಿಷ್ಯತ್ತನ್ನು ಅಲ್ಲಿನ ಜನರೇ ತೀರ್ಮಾನಿಸುತ್ತಾರೆ ಎಂದು ಘೋಷಿಸಿಕೊಂಡಿತು.


 ರಾಷ್ಟ್ರವೊಂದು ಅಂತರ್‌ರಾಷ್ಟ್ರೀಯ ಹಣಕಾಸು ನಿಧಿ ಹಾಗೂ ವಿಶ್ವ ಬ್ಯಾಂಕಿನಿಂದ ಸ್ವಾತಂತ್ರ್ಯ ಘೋಷಿಸುವ ಸಂಗತಿಯನ್ನು ಈ ಕಾಲದಲ್ಲಿ ಯಾರಾದರೂ ಕಲ್ಪಿಸಲು ಸಾಧ್ಯವೇ? ಅದು ಬಹಳ ಕಷ್ಟದ ವಿಚಾರ. ಅಭಿವೃದ್ಧಿಯಾಗಬೇಕಾದರೆ ಇಂತಹ ಅಂತರ್‌ರಾಷ್ಟ್ರೀಯ ಹಣಕಾಸು ಸಂಸ್ಥೆಗಳ ನೆರವನ್ನು ಖಂಡಿತಾ ಪಡೆಯಲೇ ಬೇಕು ಎನ್ನುವ ಪ್ರತಿಪಾದನೆಯವರೇ ಹೆಚ್ಚಾಗಿ ಕಂಡುಬರುತ್ತಾರೆ. ಸಾಲ ತರದೆ ಅಭಿವೃದ್ಧ್ಧಿ ಸಾಧ್ಯವೇ ಇಲ್ಲ ಎಂಬ ಕಲ್ಪನೆಯನ್ನು ತಮ್ಮ ತಲೆಗಳಲ್ಲಿ ಅಳವಡಿಸಿಕೊಳ್ಳುವಂತಹ ವಾತಾವರಣ ನಿರ್ಮಾಣಮಾಡಲಾಗಿದೆ. ಅದರಲ್ಲೂ ನಗರ ಕೇಂದ್ರಿತ ಮಧ್ಯಮವರ್ಗವಂತೂ ಇಂತಹ ಪ್ರತಿಪಾದನೆಗಳಲ್ಲಿ ಎತ್ತಿದ ಕೈ. ಈಗ ಇಂತಹವುಗಳನ್ನು ಗ್ರಾಮೀಣ ಪ್ರದೇಶದ ವಿದ್ಯಾವಂತ ವರ್ಗವೂ ಅನುಕರಿಸತೊಡಗಿದೆ. ತಮ್ಮ ಸೌಕರ್ಯಗಳನ್ನಷ್ಟೇ ಬಯಸುವ, ತಮಗೆ ಮಾತ್ರ ಹಲವಾರು ಆಯ್ಕೆಗಳನ್ನು ನಿರೀಕ್ಷಿಸುವವರು ಸಹಜವಾಗಿ ಹೇಗಾದರೂ ಆಗಲಿ ಅವುಗಳನ್ನೆಲ್ಲಾ ಒದಗಿಸುವ ಸರಕಾರ ಇದ್ದರೆ ಸಾಕೆಂದು ಸಾಮಾನ್ಯವಾಗಿ ಇವರು ಬಯಸುತ್ತಿರುತ್ತಾರೆ. ಇವರಿಗೆ ಸರಕಾರಗಳು ಮಾಡುವ ಭ್ರಷ್ಟಾಚಾರ ಮಾತ್ರ ಬೃಹದಾಕಾರವಾಗಿ ಕಾಣಿಸತೊಡಗುತ್ತದೆ. ವಿದೇಶಿ ಸಾಲ ತಂದು ಅಭಿವೃದ್ಧ್ಧಿಗೆ ಬಳಸದೆ ಮುಳುಗಿಸುವ ಕೆಲಸಗಳನ್ನಷ್ಟೇ ಸರಕಾರಗಳು ಮತ್ತದರ ಅಧಿಕಾರಿಗಳು ಮಾಡುತ್ತಿದ್ದಾರೆ ಎನ್ನುವುದು ಮಾತ್ರ ಇವರ ಕೊರಗು.

 ಆದರೆ ಸರಕಾರಗಳನ್ನು ಅಧಿಕಾರಿಗಳನ್ನು ಭ್ರಷ್ಟತೆಯಡಿ ಹಿಡಿದಿಡುವ ಅಂತರ್‌ರಾಷ್ಟ್ರೀಯ ಕಾರ್ಪೊರೇಟ್‌ಗಳ ಬಗ್ಗೆ ಇವರ ಕಣ್ಣು ಹಾಯುವುದಿಲ್ಲ. ಹಲವರಿಗೆ ಕಾರ್ಪೊರೇಟ್‌ಗಳ ಬಗ್ಗೆ ಆರಾಧನಾ ಭಾವನೆಗಳಿವೆ. ಅದರಲ್ಲೂ ಕೆಲವು ಅಂತರ್‌ರಾಷ್ಟ್ರೀಯ ಕಾರ್ಪೊರೇಟ್ ಬ್ರಾಂಡ್‌ಗಳನ್ನು ತಮ್ಮ ಅಭಿರುಚಿಯ ಶ್ರೇಷ್ಠ ಸಂಕೇತಗಳನ್ನಾಗಿ ಮಾಡಿಕೊಂಡಿರುವವರು ಬಹಳ ಮಂದಿ. ಹೆಚ್ಚಾಗಿ ಮಧ್ಯಮ ಹಾಗೂ ಮೇಲ್ಮಧ್ಯಮ ವರ್ಗಗಳಲ್ಲಿ ಕಂಡುಬರುತ್ತಾರೆ. ವಾಸ್ತವದಲ್ಲಿ ಈ ವರ್ಗಗಳೇ ಅಂತರ್‌ರಾಷ್ಟ್ರೀಯ ಕಾರ್ಪೊರೇಟ್‌ಗಳ ಬಿಟ್ಟಿ ಪ್ರಚಾರಕರಾಗಿರುತ್ತಾರೆ. ಒಂದು ರೀತಿಯಲ್ಲಿ ತಮ್ಮನ್ನು ಅವುಗಳ ಗುಲಾಮರನ್ನಾಗಿ ಅರ್ಪಿಸಿಕೊಂಡಿರುತ್ತಾರೆ. ಅದಕ್ಕೆ ಇವರು ನೀಡುವ ಕಾರಣ ತಮ್ಮ ನೆಚ್ಚಿನ ಬ್ರಾಂಡ್‌ಗಳ ಉತ್ಪನ್ನಗಳು ಅತ್ಯುತ್ತಮ ಗುಣಮಟ್ಟದವು ಎನ್ನುವುದಾಗಿದೆ. ಆದರೆ ಅವರ ಬ್ರಾಂಡ್‌ಗಳ ಉತ್ಪನ್ನಗಳು ಭಾರತ, ನೇಪಾಳ, ಬಾಂಗ್ಲಾದೇಶ, ಚೀನಾದಂತಹ ರಾಷ್ಟ್ರಗಳಲ್ಲಿ ದಿನಗೂಲಿ ನೌಕರರು ಬೆವರು ರಕ್ತ ಬಸಿದು ಅರೆಗೂಲಿಗೆ ತಯಾರು ಮಾಡಿರುತ್ತಾರೆ ಎನ್ನುವ ಕರಾಳ ಸತ್ಯವನ್ನು ಗಮನಿಸುವ ವ್ಯವಧಾನವೇ ಇರುವುದಿಲ್ಲ. ಸೋಗಲಾಡಿತನ, ಹುಸಿ ಒಣ ಪ್ರತಿಷ್ಠೆಗಳಲ್ಲಿ ತಮ್ಮನ್ನು ತಾವೇ ಕಳೆದುಕೊಂಡು ಕಾರ್ಪೊರೇಟ್‌ಗಳ ದಾಳಗಳಾಗಿಬಿಡುತ್ತಾರೆ. ಅದನ್ನೇ ತಮ್ಮ ಸ್ವಭಾವ, ಮಾತು, ಹಾವಭಾವ, ಶೈಲಿಗಳಲ್ಲಿ ರೂಢಿಸಿಕೊಂಡು ಬೇರೆಯವರೊಂದಿಗೆ ಆ ವಿಚಾರಗಳಲ್ಲಿ ಪೈಪೋಟಿಗೆ ಬಿದ್ದುಬಿಡುತ್ತಾರೆ. ಅಲ್ಲಿ ಕೃತಕತೆ ಮುಖಕ್ಕೆ ರಾಚುವಂತಿರುತ್ತದೆ ಎನ್ನುವುದು ಅವರ ಅರಿವಿಗೆ ನಿಲುಕದಂತಾಗಿಬಿಡುತ್ತದೆ. ಒಂದುವೇಳೆ ಅದು ಗೊತ್ತಾದರೂ ಬದುಕಿಗೆ ಅದು ಅನಿವಾರ್ಯ ಎನ್ನುವ ನಿಲುವಿನಲ್ಲಿ ಸಾಗುತ್ತಾರೆ. ಸಹಜತೆಗಿಂತ ಕೃತಕತೆಯೇ ಬದುಕು ಎಂಬಂತೆ ವರ್ತಿಸುತ್ತಿರುತ್ತಾರೆ. ಇದಕ್ಕೆ ಸಾಕಷ್ಟು ಕೊಡುಗೆಗಳನ್ನು ಸಿನೆಮಾ, ಟಿವಿ, ಪತ್ರಿಕೆಯಂತಹ ಮಾಧ್ಯಮಗಳೂ ನೀಡುತ್ತಿರುತ್ತವೆ.

ಇವೆಲ್ಲಾ ಸೇರಿಯೇ. ಎರಡನೇ ಮಹಾಯುದ್ಧದ ನಂತರದ ಅಂತರ್‌ರಾಷ್ಟ್ರೀಯ ಕಾರ್ಪೊರೇಟ್‌ಗಳು ಮತ್ತು ಅಂತರ್‌ರಾಷ್ಟ್ರೀಯ ಹಣಕಾಸು ಸಂಸ್ಥೆಗಳು ಹುಟ್ಟುಹಾಕಿದ ಉಪಭೋಗಿ ಸಂಸ್ಕೃತಿಯ ಕೆಲವು ಪರಿಣಾಮಗಳೆನ್ನಬಹುದು. ಸರಳವಾಗಿಸಿ ಹೇಳಬಹುದಾದರೆ ಗ್ರಾಹಕ ಸಂಸ್ಕೃತಿಯೆನ್ನಬಹುದು. ಉಪಭೋಗಿ ಸಂಸ್ಕೃತಿ ಎಂದಾಗ ಅದು ಅಗತ್ಯಕ್ಕಿಂತಲೂ ಅಗತ್ಯವಿರದ, ಹುಸಿ ಪ್ರತಿಷ್ಠೆಯ ಆಡಂಬರದ ವಸ್ತುಗಳಿಗೆ ಬಲಿಯಾಗುವ ಗೀಳು ಎಂದೇ ಗುರ್ತಿಸಬೇಕಾಗುತ್ತದೆ. ಇದರ ತೀವ್ರತೆ ಎಂಬತ್ತರ ದಶಕದಲ್ಲಿ ಆರಂಭವಾದ ಜಾಗತೀಕರಣ ಪ್ರಕ್ರಿಯೆಗಳ ನಂತರ ಭಾರೀ ವೇಗ ಪಡೆಯಿತು. ಅಂತರ್‌ರಾಷ್ಟ್ರೀಯ ಹಣಕಾಸು ನಿಧಿ ಹಾಗೂ ವಿಶ್ವಬ್ಯಾಂಕ್‌ಗಳ ಸಾಲ ನೀಡಿಕೆಗಳು; ನಿರ್ಬಂಧಗಳು ಹೆಚ್ಚಾಗುತ್ತಾ ಹೋಗಿ ರಾಷ್ಟ್ರಗಳ ಸ್ವಾತಂತ್ರ್ಯ ಹಾಗೂ ಸ್ವಾಯತ್ತೆಗಳು ನಾಮ ಮಾತ್ರದ್ದು ಎನ್ನುವಂತಹ ಸ್ಥಿತಿ ನಿರ್ಮಾಣವಾಯಿತು. ಇದಕ್ಕೆ ಭಾರತ ಕೂಡ ಹೊರತಾಗಿಲ್ಲ ಎನ್ನುವುದನ್ನು ಗಮನಿಸಬೇಕು.

ಬೊಲಿವಿಯಾ ದಕ್ಷಿಣ ಅಮೆರಿಕ ಖಂಡದ ಒಂದು ರಾಷ್ಟ್ರ. ಲ್ಯಾಟಿನ್ ಅಮೆರಿಕನ್ ರಾಷ್ಟ್ರಗಳ ಸಾಲಿನಲ್ಲಿ ಇದೂ ಕೂಡ ಸೇರುತ್ತದೆ. ಸುಮಾರು 12 ಕೋಟಿ ಜನಸಂಖ್ಯೆ ಇರುವ ಇದು 10,98,581 ಚದರ ಕಿ.ಮೀ.ಗಳಷ್ಟು ಭೂ ಪ್ರದೇಶ ಹೊಂದಿದ್ದು ವಿಶ್ವದ 27ನೇ ದೊಡ್ಡ ರಾಷ್ಟ್ರವಾಗಿದೆ. ಈ ರಾಷ್ಟ್ರಕ್ಕೆ ಸಮುದ್ರವಿಲ್ಲ. ಸುತ್ತಲೂ ಭೂ ಪ್ರದೇಶದಿಂದ ಆವೃತವಾಗಿದೆ. ದಕ್ಷಿಣ ಅಮೆರಿಕದ ಬ್ರೆಝಿಲ್, ಅರ್ಜೆಂಟೈನಾ, ಪೆರು, ಕೊಲಂಬಿಯಾ ನಂತರ ಐದನೇ ದೊಡ್ಡ ರಾಷ್ಟ್ರವಾಗಿದೆ. ಹಲವು ಮೂಲನಿವಾಸಿ ಜನಸಮುದಾಯಗಳನ್ನು ಹೊಂದಿರುವ ಇದು ಸುಮಾರು 36ರಷ್ಟು ಭಾಷೆಗಳನ್ನು ಹೊಂದಿದೆ. ಆ ಎಲ್ಲಾ ಭಾಷೆಗಳನ್ನೂ ರಾಷ್ಟ್ರೀಯ ಭಾಷೆಗಳೆಂದು 2009ರಲ್ಲಿ ಹೊಸದಾಗಿ ಅಂಗೀಕರಿಸಲಾದ ಸಂವಿಧಾನದಲ್ಲಿ ಮಾನ್ಯತೆ ನೀಡಲಾಗಿದೆ. 1825ರಲ್ಲೇ ಸ್ಪೇನ್‌ನಿಂದ ಸ್ವಾತಂತ್ರ್ಯ ಗಳಿಸಿದ ಇದು ಒಂದು ರಾಷ್ಟ್ರವಾಗಿ ಗುರುತಿಸಲ್ಪಟ್ಟಿದ್ದು 1845ರಲ್ಲಿ ಎಂದು ಹೇಳಲಾಗುತ್ತದೆ. ವಿಶ್ವ ಸಂಸ್ಥೆಯ ಸದಸ್ಯ ರಾಷ್ಟ್ರವಾಗಿದ್ದು 1945ರಲ್ಲಿ. ಕೃಷಿ, ಅರಣ್ಯ ಉತ್ಪನ್ನ, ಖನಿಜ ಗಣಿಗಾರಿಕೆ, ಬಟ್ಟೆ, ಪೆಟ್ರೋಲಿಯಂ ಉತ್ಪನ್ನಗಳು ಈ ರಾಷ್ಟ್ರದ ಪ್ರಮುಖ ವ್ಯಾಪಾರ ವ್ಯವಹಾರವಾಗಿದೆ. ಈ ರಾಷ್ಟ್ರ ಟಿನ್ ಹಾಗೂ ಲಿಥಿಯಂನ ಭಾರಿ ನಿಕ್ಷೇಪಗಳನ್ನು ಹೊಂದಿದೆ. ಲಿಥಿಯಂ ನಿಕ್ಷೇಪ ಜಗತ್ತಿನಲ್ಲಿಯೇ ಅತೀ ಹೆಚ್ಚು ಅಂದರೆ ಶೇ. 70ರಷ್ಟು ಇರುವುದು ಬೊಲಿವಿಯಾದಲ್ಲಿಯೇ.

ಕ್ಯೂಬಾ ರಾಷ್ಟ್ರದ ಕ್ರಾಂತಿಯ ನಾಯಕತ್ವದಲ್ಲಿ ಒಬ್ಬರಾಗಿ ಪಾತ್ರ ವಹಿಸಿದ ಚೆ ಗುವಾರ ತನ್ನ ಮಂತ್ರಿ ಸ್ಥಾನವನ್ನು ತೊರೆದು ಬೊಲಿವಿಯಾ ಜನರ ಜೊತೆ ನಿಂತು ಅಲ್ಲಿನ ಕ್ರಾಂತಿ ಯಶಸ್ವಿಗೊಳಿಸಲು ತೆರಳಿದ್ದರು. ಬೊಲಿವಿಯಾದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಚೆ ಗುವಾರರನ್ನು ಅಮೆರಿಕದ ಜಾಗತಿಕ ಗೂಢಚಾರ ಹಾಗೂ ಬುಡಮೇಲು ಕೃತ್ಯಗಳನ್ನು ನಡೆಸುವ ಸಂಸ್ಥೆ ಸಿಐಎ 1960ರ ಸಮಯದಲ್ಲಿ ಹಿಡಿದು ಕೊಂದುಹಾಕಿತ್ತು. ಸಿಐಎ ಬೊಲಿವಿಯಾದಲ್ಲಿ ಮೊದಲಿನಿಂದಲೂ ಸಕ್ರಿಯವಾಗಿತ್ತು. ಅಲ್ಲಿನ ಸರಕಾರದ ಮೇಲೂ ಹಿಡಿತ ಸಾಧಿಸುತ್ತಾ ಅಲ್ಲಿನ ನೈಸರ್ಗಿಕ ಸಂಪತ್ತನ್ನು ಅಮೆರಿಕದ ಕಂಪೆನಿಗಳಿಗೆ ಮುಕ್ತಗೊಳಿಸಿಕೊಂಡಿತ್ತು. ಜಾಗತೀಕರಣ ಪ್ರಕ್ರಿಯೆಗೂ ಮೊದಲೇ ಅಮೆರಿಕ ಬೊಲಿವಿಯಾದ ಸಂಪತ್ತಿನ ಮೇಲೆ ಹೆಚ್ಚುಕಮ್ಮಿ ಸಂಪೂರ್ಣ ಹಿಡಿತ ಸಾಧಿಸಿತ್ತೆಂದೇ ಹೇಳಬಹುದು. ಅಲ್ಲಿನ ಖನಿಜ, ನೀರು, ಕೈಗಾರಿಕೆಗಳು ಹೀಗೆ ಎಲ್ಲವೂ ಜಾಗತಿಕ ಭಾರೀ ಕಾರ್ಪೊರೇಟ್‌ಗಳ ಕೈಗೆ ಹೋಗುತ್ತವೆ. ಇದರ ವಿರುದ್ದ 1999-2000ದಲ್ಲಿ ಜನರ ಭಾರೀ ಪ್ರತಿಭಟನೆ ಬುಗಿಲೇಳುತ್ತದೆ. ಇದನ್ನು ‘ಕೊಚಬಾಂಬಾ ವಾಟರ್ ವಾರ್’ ಎಂದೇ ಕರೆಯಲಾಗುತ್ತದೆ. ಅಮೆರಿಕದ ಬೆಕ್ಟೆಲ್ ಕಾರ್ಪೊರೇಷನ್ ಎಂಬ ಕಂಪೆನಿ ಬೊಲಿವಿಯಾದ ನೈಸರ್ಗಿಕ ನೀರಿನ ಮೇಲೆ ಹಿಡಿತ ಸಾಧಿಸಿ ದುಪ್ಪಟ್ಟು ಬೆಲೆಯನ್ನು ಜನರ ಮೇಲೆ ಹೇರಿರುವುದೇ ಇದಕ್ಕೆ ಪ್ರಮುಖ ನೆಪವಾಗುತ್ತದೆ. ಸುಮಾರು 60 ವರ್ಷಗಳ ಕಾಲ ಬೊಲಿವಿಯಾ ಪ್ರಜೆಗಳು ಅಂತರ್‌ರಾಷ್ಟ್ರೀಯ ಹಣಕಾಸು ಸಂಸ್ಥೆಗಳು ಹಾಗೂ ಭಾರೀ ಜಾಗತಿಕ ಕಾರ್ಪೊರೇಷನ್‌ಗಳು ಹೇರುತ್ತಿದ್ದ ಖಾಸಗೀಕರಣ ಹಾಗೂ ಆರ್ಥಿಕ ರಾಜಕೀಯ ಹಿಡಿತಗಳ ವಿರುದ್ಧ ನಿರಂತರವಾಗಿ ಹೋರಾಡುತ್ತಾ ಬಂದಿದ್ದರು.

ಬೊಲಿವಿಯಾ ಇತ್ತೀಚಿನವರೆಗೂ ವಿದೇಶಿ ಸಾಲಗಳ ಮೇಲೆಯೇ ಅವಲಂಬಿತವಾಗಿತ್ತು. ತನ್ನ ನೌಕರರಿಗೆ ಸಂಬಳ ನೀಡಲು ಕೂಡ ಅದರ ಬಳಿ ಹಣ ಇಲ್ಲದ ಪರಿಸ್ಥಿತಿಯಲ್ಲಿತ್ತು. ಜಾಗತಿಕ ಹಣಕಾಸು ಸಂಸ್ಥೆಗಳಾದ ಅಂತರ್‌ರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಹಾಗೂ ವಿಶ್ವ ಬ್ಯಾಂಕ್‌ಗಳೇ ಬೊಲಿವಿಯಾದ ಎಲ್ಲಾ ಆರ್ಥಿಕ ವಿಚಾರಗಳನ್ನು ನಿರ್ದೇಶಿಸುತ್ತಿದ್ದವು. ಈ ಸಂಸ್ಥೆಗಳು ಹಾಕುವ ನಿಬಂಧನೆಗಳಡಿ ಸರಕಾರಗಳು ಆಡಳಿತವನ್ನು ನಡೆಸಬೇಕಾಗಿತ್ತು. ಸರಕಾರಿ ಕೇಂದ್ರ ಸ್ಥಾನದಲ್ಲೇ ಇವುಗಳು ತಮ್ಮ ಕಚೆೇರಿ ತೆರೆದಿದ್ದವು. ಸರಕಾರದ ಎಲ್ಲಾ ಸಭೆಗಳಲ್ಲೂ ಈ ಹಣಕಾಸು ಸಂಸ್ಥೆಗಳು ನೇರವಾಗಿ ಪಾಲ್ಗೊಂಡು ನಿರ್ದೇಶನಗಳನ್ನು ನೀಡುತ್ತಿದ್ದವು. ಜನರಿಗೆ ನೀಡಬೇಕಾಗುತ್ತಿದ್ದ ಸವಲತ್ತುಗಳು ಇನ್ನಿಲ್ಲದಂತೆ ಕಡಿತಗೊಳ್ಳತೊಡಗಿದ್ದವು. ಸ್ಥಳೀಯ ವ್ಯಾಪಾರ ವ್ಯವಹಾರಗಳಿಗೆ ಅಡ್ಡಿಗಳನ್ನು ಹೆಚ್ಚಿಸುತ್ತಾ ಭಾರೀ ಕಾರ್ಪೊರೇಟ್‌ಗಳಿಗೆ ಎಲ್ಲವನ್ನೂ ತೆರೆದಿಡುವ ಕೆಲಸಗಳು ಬಿರುಸಾಗತೊಡಗಿದ್ದವು. ಕಾರ್ಮಿಕರ ಹಕ್ಕುಗಳು ಮೊಟಕುಗೊಂಡು ಸಂಬಳ ಸವಲತ್ತುಗಳು ಕಡಿತಗೊಳ್ಳತೊಡಗಿದ್ದವು.

2003ರಲ್ಲಿ ನೈಸರ್ಗಿಕ ಅನಿಲ ವ್ಯವಹಾರ ಬಿಕ್ಕಟ್ಟಿನ ರೂಪ ತಾಳಿ ಜನರ ಭಾರೀ ಪ್ರತಿಭಟನೆಗೆ ಕಾರಣವಾಯಿತು. ಘರ್ಷಣೆಯಲ್ಲಿ 16 ಜನರು ಪೊಲೀಸರ ಗುಂಡೇಟಿನಿಂದ ಮರಣ ಹೊಂದಿ ಹಲವಾರು ಜನರು ಗಂಭೀರವಾಗಿ ಗಾಯಗೊಂಡು ರಾಷ್ಟ್ರಾದ್ಯಂತ ಭಾರೀ ಅಲ್ಲೋಲ ಕಲ್ಲೋಲಗಳನ್ನು ಸೃಷ್ಟಿಸಿತ್ತು. ಇದರ ಪರಿಣಾಮದಿಂದ ಆಗಿನ ಬೊಲಿವಿಯಾದ ಅಧ್ಯಕ್ಷ ಸಾಂಚೇಜ್ ಡೆ ಲೊಜಡ ರಾಜೀನಾಮೆ ನೀಡಿ ಅಮೆರಿಕಕ್ಕೆ ಪಲಾಯನ ಮಾಡಬೇಕಾಯಿತು. ಆಗ ಉಪಾಧ್ಯಕ್ಷರಾಗಿದ್ದ ಕಾರ್ಲೋಸ್ ಮೆಸಾ ಅಧ್ಯಕ್ಷರಾಗುತ್ತಾರೆ. ಆದರೆ ಬಿಕ್ಕಟ್ಟು ಬಗೆಹರಿಯದೆ 2005ರಲ್ಲಿ ಪುನಃ ಅನಿಲ ಸಂಬಂಧಿತ ಪ್ರತಿಭಟನೆ ಬಿರುಸಾಗುತ್ತದೆ. ಹೊಸ ಅಧ್ಯಕ್ಷ ಮೆಸಾ ಅಮೆರಿಕ ಕಾರ್ಪೊರೇಟ್‌ಗಳ ತಾಳಕ್ಕೆ ತಕ್ಕಂತೆ ಆಡಳಿತ ನಡೆಸುತ್ತಿದ್ದಾರೆ ಎನ್ನುವುದೇ ಪ್ರತಿಭಟನಾ ನಿರತ ಜನರ ಮುಖ್ಯ ಆರೋಪವಾಗಿತ್ತು. ಕೊನೆಗೆ ಮೆಸಾ ಕೂಡ ರಾಜಿನಾಮೆ ನೀಡಿ ಪ್ರತಿಭಟನಾ ನಿರತರನ್ನು ತಣಿಸುವ ಪ್ರಯತ್ನ ನಡೆಸಲಾಯಿತು. ಬೊಲಿವಿಯಾದ ಆಗಿನ ಮುಖ್ಯ ನ್ಯಾಯಾಧೀಶ ಎಡ್ವರ್ಡೋ ರೊಡ್ರಿಗಸ್ ಹಂಗಾಮಿ ಅಧ್ಯಕ್ಷರಾಗುತ್ತಾರೆ. 2005ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ರೈತ ಹೋರಾಟಗಾರ ಬೊಲಿವಿಯಾ ಮೂಲನಿವಾಸಿ ಎವೋ ಮೊರೇಲ್ಸ್ ಹಿಂದೆಂದೂ ಕಾಣದಷ್ಟು ಶೇ. 53ರಷ್ಟು ಮತಗಳನ್ನು ಪಡೆದು ಭಾರೀ ಬಹುಮತದಿಂದ ಅಧ್ಯಕ್ಷರಾಗಿ ಆಯ್ಕೆಯಾಗುತ್ತಾರೆ. ಅವರ ಪಕ್ಷ ನೀಡಿದ ಚುನಾವಣಾ ಭರವಸೆಯಂತೆ ಬೊಲಿವಿಯಾದ ನೈಸರ್ಗಿಕ ಸಂಪತ್ತುಗಳನ್ನು ರಾಷ್ಟ್ರೀಕರಿಸಲು ತೊಡಗುತ್ತಾರೆ. ಅದಕ್ಕೆ ಅನುಕೂಲವಾಗುವಂತೆ ಹೊಸ ಸಂವಿಧಾನವನ್ನು ರಚಿಸಲು ತೊಡಗುತ್ತಾರೆ. ಬಹುಸಂಖ್ಯಾತ ಮೂಲನಿವಾಸಿ ಜನಸಮೂಹಗಳಿಗೆ ಹೆಚ್ಚಿನ ಅಧಿಕಾರವನ್ನು ಖಾತ್ರಿಪಡಿಸುವುದು ಈ ಹೊಸ ಸಂವಿಧಾನ ರಚನೆಯ ಒಂದು ಮುಖ್ಯ ಗುರಿಯಾಗಿರುತ್ತದೆ. 2007ರಲ್ಲಿ ಮೊರೇಲ್ಸ್ ಸರಕಾರದ ವಿರುದ್ಧ ಅಮೆರಿಕದ ಕುತಂತ್ರದಿಂದ ಗಲಭೆಯೊಂದು ಸಿಡಿಯುತ್ತದೆ. ಹೊಸ ಸಂವಿಧಾನ ಅಂಗೀಕಾರಗೊಂಡ ನಂತರ 2009ರಲ್ಲಿ ಸಾರ್ವತ್ರಿಕ ಚುನಾವಣೆ ನಡೆದು ಅದರಲ್ಲಿ ಇವೋ ಮೊರೇಲ್ಸ್ ಹಿಂದಿನದಕ್ಕಿಂತಲೂ ಹೆಚ್ಚಿನ ಅಂದರೆ ಶೇ 64.22ರಷ್ಟು ಮತಗಳನ್ನು ಪಡೆದು ಅಧ್ಯಕ್ಷರಾಗಿ ಪುನರಾಯ್ಕೆಯಾಗುತ್ತಾರೆ. ಅವರ ಪಕ್ಷವಾದ ಸಮಾಜವಾದಕ್ಕಾಗಿನ ಚಳವಳಿ (ಮೂವ್‌ಮೆಂಟ್ ಫಾರ್ ಸೋಷಿಯಲಿಸಂ) ಮೂರನೇ ಎರಡರಷ್ಟು ಬಹುಮತವನ್ನು ಅಲ್ಲಿನ ರಾಷ್ಟ್ರೀಯ ಸಭೆಯ ಎರಡೂ ಸದನಗಳಲ್ಲಿ ಗಳಿಸುತ್ತದೆ.

ಬೊಲಿವಿಯಾದ ಸಂಪತ್ತಿನ ಮೇಲಿನ ಭಾರೀ ಕಾರ್ಪೊರೇಟ್‌ಗಳ ಹಿಡಿತವನ್ನು ತಪ್ಪಿಸಿದ ಮೊರೇಲ್ಸ್ ಸರಕಾರ ರಾಷ್ಟ್ರದ ಆರ್ಥಿಕ ಅಭಿವೃದ್ಧಿಯಲ್ಲಿ, ಸಾಮಾಜಿಕ ಅಸಮಾನತೆಯಲ್ಲಿ ಗಣನೀಯ ಸುಧಾರಣೆಗಳನ್ನು ತರುತ್ತದೆ. ಬೊಲಿವಿಯಾದ ಒಟ್ಟು ರಾಷ್ಟ್ರೀಯ ಉತ್ಪನ್ನ ಹಿಂದಿನ ಮೂವತ್ತು ವರ್ಷಗಳಲ್ಲೇ ಇಲ್ಲದಷ್ಟು ಪ್ರಮಾಣದಲ್ಲಿ ಏರಿಕೆ ಕಾಣುತ್ತದೆ. 2012ರಲ್ಲಿ ಅದು 27.43 ಬಿಲಿಯನ್ ಅಮೆರಿಕನ್ ಡಾಲರುಗಳಷ್ಟಿತ್ತು. 2019ರಲ್ಲಿ ಅದು ಸುಮಾರು 45.045 ಬಿಲಿಯನ್ ಅಮೆರಿಕನ್ ಡಾಲರುಗಳಿಗೆ ತಲುಪುವ ಅಂದಾಜಿದೆ. ತಲಾ ಆದಾಯದಲ್ಲಿ ಗಣನೀಯ ಏರಿಕೆಯಾಗಿ ನಿರುದ್ಯೋಗದ ಪ್ರಮಾಣ ತಗ್ಗುತ್ತಿದೆ. ಹಿಂದಿನ ಕೊರತೆ ಆಯವ್ಯಯ ಹೋಗಿ ಈಗ ಮಿಗತೆ ಆಯವ್ಯಯ ರೂಪುಗೊಳ್ಳತೊಡಗಿದೆ. ಬೊಲಿವಿಯಾದ ಸೆಂಟ್ರಲ್ ಬ್ಯಾಂಕಿನ ಮೀಸಲು ಕರೆನ್ಸಿ ಹಾಗೂ ಚಿನ್ನದ ಪ್ರಮಾಣ 2000ದಲ್ಲಿ ಇದ್ದ 1,085 ಬಿಲಿಯನ್ ಅಮೆರಿಕ ಡಾಲರುಗಳಿಂದ 2014ರಲ್ಲಿ 15,282 ಬಿಲಿಯನ್ ಅಮೆರಿಕನ್ ಡಾಲರುಗಳಿಗೆ ಏರುತ್ತದೆ. ಮೊರೇಲ್ಸ್ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ಸಾಮಾಜಿಕ ಕ್ಷೇಮಾಭಿವೃದ್ಧಿ ಕಾರ್ಯಕ್ರಮಗಳಿಗೆ ಖರ್ಚು ಮಾಡುವ ಹಣ ಶೇ. 45ರಷ್ಟು ಹೆಚ್ಚಾಗಿದೆ. ಅನಕ್ಷರತೆ ಈಗ ಶೇ. 3ಕ್ಕೆ ಇಳಿದಿದೆ ಎಂಬ ವರದಿಯಿದೆ. ಇವೆಲ್ಲವನ್ನೂ ಅಮೆರಿಕ ಹಾಗೂ ಐರೋಪ್ಯ ಒಕ್ಕೂಟದ ಜಾಗತಿಕ ಬಂಡವಾಳಶಾಹಿ ರಾಷ್ಟ್ರಗಳ ನಿರಂತರ ಕುತಂತ್ರ ಹಾಗೂ ಬುಡಮೇಲು ಕೃತ್ಯಗಳ ನಡುವೆಯೇ ಸಾಧಿಸಲಾಗಿದೆ ಎನ್ನುವುದು ಗಮನಾರ್ಹ.

 ಇಂತಹ ಬೊಲಿವಿಯಾ ಎಂಬ ಒಂದು ಅತ್ಯಂತ ಹಿಂದುಳಿದಿದ್ದ ರಾಷ್ಟ್ರ, ಕಳೆದ 2017ರ ಜುಲೈಯಲ್ಲಿ 1944ರ ಬ್ರೆಟ್ಟನ್ ವುಡ್ ಆರ್ಥಿಕ ಸಮ್ಮೇಳನದ ಒಪ್ಪಂದದ ಸಂಸ್ಥೆಗಳಾದ ಅಂತರ್‌ರಾಷ್ಟ್ರೀಯ ಹಣಕಾಸು ನಿಧಿ ಹಾಗೂ ವಿಶ್ವಬ್ಯಾಂಕ್ ನಿಂದ ವಿಮೋಚನೆ ಪಡೆದು ಸ್ವಾತಂತ್ರ್ಯ ಗಳಿಸಿತು ಎಂದು ತನ್ನನ್ನು ಘೋಷಿಸಿಕೊಂಡಿತು. ಅಂದರೆ ಬೊಲಿವಿಯಾ ಇನ್ನುಮುಂದೆ ಈ ಸಂಸ್ಥೆಗಳ ಸಾಲ ಹಾಗೂ ಹಿಡಿತದಡಿ ಇರುವುದಿಲ್ಲ. ಬೊಲಿವಿಯಾದ ಭವಿಷ್ಯತ್ತನ್ನು ಅಲ್ಲಿನ ಜನರೇ ತೀರ್ಮಾನಿಸುತ್ತಾರೆ ಎಂದು ಘೋಷಿಸಿಕೊಂಡಿತು. ಜಾಗತೀಕರಣ ಪ್ರಕ್ರಿಯೆಗಳಿಗೆ ತನ್ನನ್ನು ತಾನು ತೆರೆದುಕೊಳ್ಳದ ರಾಷ್ಟ್ರ ಅಭಿವೃದ್ಧಿ ಹೊಂದಲು ಸಾಧ್ಯವೇ ಇಲ್ಲ!? ಆದರೆ ಅದಕ್ಕೆ ಮಾನವೀಯ ಮುಖವಿರಬೇಕು?! ಎಂದೆಲ್ಲಾ ಅಡ್ಡಗೋಡೆಯ ಮೇಲೆ ದೀಪ ಇಡುವಂತೆ ಪ್ರತಿಪಾದಿಸುವವರು ಬೊಲಿವಿಯಾದ ಉದಾಹರಣೆಯನ್ನು ಇಂದಿನ ಭಾರತದ ಸಂದರ್ಭದಲ್ಲಿ ಗಂಭೀರವಾಗಿ ಗಮನಿಸಬೇಕಾದ ಆವಶ್ಯಕತೆಯಿದೆ. ಭಾರತದ ಈಗಿನ ಸ್ಥಿತಿ ಕೂಡ ಹಿಂದಿನ ಬೊಲಿವಿಯಾ ಕ್ಕಿಂತ ಹೊರತಾಗಿಲ್ಲ ಎನ್ನುವುದನ್ನು ನಾವಿಲ್ಲಿ ಗಮನಿಸಬೇಕು.


ಮಿಂಚಂಚೆ: nandakumarnandana67gmail.com

Writer - ನಂದಕುಮಾರ್ ಕೆ. ಎನ್.

contributor

Editor - ನಂದಕುಮಾರ್ ಕೆ. ಎನ್.

contributor

Similar News