ವಿಶ್ವಕಪ್ ಟೂರ್ನಿಯ ಗರಿಷ್ಠ ಸ್ಕೋರರ್ ಪಟ್ಟಿ: ಈಗ ಮೊದಲ ಸ್ಥಾನದಲ್ಲಿರುವುದು ಯಾರು ಗೊತ್ತೆ?

Update: 2019-06-18 05:22 GMT
ಶಾಕಿಬ್‌ಗೆ ವಿಂಡೀಸ್ ಬ್ಯಾಟ್ಸ್‌ಮನ್ ಡರೆನ್ ಬ್ರಾವೊ ಅಭಿನಂದನೆ..

ಲಂಡನ್, ಜೂ.18: ಬಾಂಗ್ಲಾದೇಶ ತಂಡ ಟೌಂಟನ್‌ನಲ್ಲಿ ಸೋಮವಾರ ನಡೆದ ವಿಶ್ವಕಪ್‌ನ 23ನೇ ಪಂದ್ಯದಲ್ಲಿ ಶಾಕಿಬ್ ಅಲ್ ಹಸನ್‌ರ ‘ಒನ್‌ಮ್ಯಾನ್ ಶೋ’ ನೆರವಿನಿಂದ ವೆಸ್ಟ್‌ಇಂಡೀಸ್ ತಂಡವನ್ನು 7 ವಿಕೆಟ್‌ಗಳಿಂದ ಮಣಿಸಿತು. ಶಾಕಿಬ್ 2 ವಿಕೆಟ್ ಕಬಳಿಸಿದ್ದಲ್ಲದೆ, ಔಟಾಗದೆ 124 ರನ್ ಗಳಿಸಿ ಇನ್ನೂ 8 ಓವರ್‌ಗಳು ಬಾಕಿ ಇರುವಾಗಲೇ 322 ರನ್ ಗುರಿ ಯಶಸ್ವಿಯಾಗಿ ಬೆನ್ನಟ್ಟಲು ನೆರವಾಗಿದ್ದರು.

 ಶಾಕಿಬ್ ಈಗ ನಡಯುತ್ತಿರುವ ವಿಶ್ವಕಪ್ ಟೂರ್ನಮೆಂಟ್‌ನಲ್ಲಿ ಗರಿಷ್ಠ ಸ್ಕೋರ್ ಗಳಿಸಿದ ಸಾಧನೆ ಮಾಡಿದ್ದಾರೆ. ಒಟ್ಟು 384 ರನ್ ಗಳಿಸಿರುವ ಶಾಕಿಬ್ ಆಸ್ಟ್ರೇಲಿಯದ ನಾಯಕ ಆ್ಯರೊನ್ ಫಿಂಚ್(343 ರನ್)ರನ್ನು ಎರಡನೇ ಸ್ಥಾನಕ್ಕೆ ತಳ್ಳಿದ್ದಾರೆ. ಭಾರತದ ಉಪ ನಾಯಕ ರೋಹಿತ್ ಶರ್ಮಾ ಟೂರ್ನಿಯಲ್ಲಿ ಒಟ್ಟು 319 ರನ್ ಗಳಿಸುವುದರೊಂದಿಗೆ 3ನೇ ಸ್ಥಾನದಲ್ಲಿದ್ದಾರೆ.

ಬಾಂಗ್ಲಾದೇಶ ವಿಶ್ವಕಪ್ ಇತಿಹಾಸದಲ್ಲಿ ಎರಡನೇ ಗರಿಷ್ಠ ಮೊತ್ತದ ಗುರಿಯನ್ನು(322)ಯಶಸ್ವಿಯಾಗಿ ಬೆನ್ನಟ್ಟಿದೆ. 2011ರ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ವಿರುದ್ದ ಐರ್ಲೆಂಡ್ ತಂಡ 329 ರನ್ ಚೇಸಿಂಗ್ ಮಾಡಿರುವುದು ಈವರೆಗಿನ ಗರಿಷ್ಠ ರನ್ ಚೇಸಿಂಗ್ ಆಗಿ ಉಳಿದಿದೆ.

ಶಾಕಿಬ್(ಔಟಾಗದೆ 124)ಏಕದಿನ ಕ್ರಿಕೆಟ್‌ನಲ್ಲಿ ಸತತ ಐದನೇ ಫಿಫ್ಟಿ-ಪ್ಲಸ್ ಸ್ಕೋರ್ ಗಳಿಸಿದರು. ವಿಶ್ವಕಪ್‌ನಲ್ಲಿ ಎರಡನೇ ಗರಿಷ್ಠ ವೈಯಕ್ತಿಕ ಸ್ಕೋರ್ ಗಳಿಸಿದ ಬಾಂಗ್ಲಾ ಆಟಗಾರ ಎನಿಸಿಕೊಂಡರು. 2015ರಲ್ಲಿ ನ್ಯೂಝಿಲ್ಯಾಂಡ್ ವಿರುದ್ಧ ಮುಹ್ಮೂದುಲ್ಲಾ ರಿಯಾದ್ ಔಟಾಗದೆ 128 ರನ್ ಗಳಿಸಿದ್ದು ಬಾಂಗ್ಲಾ ದಾಂಡಿಗನೊಬ್ಬನ ಗರಿಷ್ಠ ವೈಯಕ್ತಿಕ ಸ್ಕೋರಾಗಿದೆ.

ಶಾಕಿಬ್ ತನ್ನ 190ನೇ ಇನಿಂಗ್ಸ್‌ನಲ್ಲಿ 6,000 ರನ್ ಪೂರೈಸಿದರು. ವೀರೇಂದ್ರ ಸೆಹ್ವಾಗ್ ಕೂಡ ಇಷ್ಟೇ ಇನಿಂಗ್ಸ್‌ನಲ್ಲಿ ಈ ಸಾಧನೆ ಮಾಡಿದ್ದರು. ಶಾಕಿಬ್ ಅವರು ಯುವರಾಜ್ ಸಿಂಗ್ ಹಾಗೂ ಕುಮಾರ ಸಂಗಕ್ಕರಗಿಂತ ವೇಗವಾಗಿ ಆರು ಸಾವಿರ ರನ್ ಪೂರೈಸಿದ್ದಾರೆ. ಶಾಕಿಬ್ ತನ್ನ 199ನೇ ಪಂದ್ಯದಲ್ಲಿ 250ನೇ ವಿಕೆಟ್ ಪಡೆದಿದ್ದರು. ಲಂಕಾದ ಮಾಜಿ ವೇಗಿ ಚಾಮಿಂಡಾ ವಾಸ್‌ಗಿಂತ ವೇಗವಾಗಿ ಈ ಸಾಧನೆ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News