ವೈದ್ಯರ ಪ್ರತಿಭಟನೆ ಎತ್ತಿರುವ ಪ್ರಶ್ನೆಗಳು

Update: 2019-06-18 05:14 GMT

ಪಶ್ಚಿಮ ಬಂಗಾಳದಲ್ಲಿ ವೈದ್ಯರ ಮೇಲೆ ನಡೆದ ದಾಳಿ ಅಮಾನವೀಯ ಮತ್ತು ಅಕ್ಷಮ್ಯ ಎಂಬುವುದರಲ್ಲಿ ಎರಡು ಮಾತಿಲ್ಲ.ಅದನ್ನು ಖಂಡಿಸಲೇಬೇಕು..ಮತ್ತು ಅವರಿಗೆ ಶಿಕ್ಷೆಯಾಗಲೂಬೇಕು...
ಆದರೆ... ರೋಗಿಯ ಹಕ್ಕನ್ನು ಉಲ್ಲಂಘಿಸಿದ ವೈದ್ಯರ ಕೃತ್ಯ ಕ್ಷಮ್ಯವೇ...?
ಮೊದಲನೆಯದಾಗಿ ಅಲ್ಲಿನ ವೈದ್ಯರು ಮಾತನಾಡುತ್ತಿದ್ದ ದಾಟಿಯನ್ನು ನಾವು ಗಮನಿಸಬೇಕು... ಈ ಎಲ್ಲಾ ಗಲಭೆಗಳಿಗೆ ಮೂಲ ಕಾರಣ ಎಂಬತ್ತರ ಹರೆಯದ ವೃದ್ಧರೊಬ್ಬರ ಸಾವು. ವೈದ್ಯರು ಮಾಧ್ಯಮಗಳೊಂದಿಗೆ ಮಾತನಾಡುವಾಗ ಮತ್ತೆ ಮತ್ತೆ ಆತ ಎಂಬತ್ತರ ಹರೆಯದ ವೃದ್ಧ, ಮತ್ತು ಗಲಭೆಯಿಂದ ಗಂಭೀರ ಗಾಯಗೊಂಡವರು ಯುವವೈದ್ಯರು ಎನ್ನುತ್ತಿದ್ದರು. ಈ ರೀತಿ ಯುವ ಮತ್ತು ಎಂಬತ್ತರ ವೃದ್ಧ ಎಂಬ ಮಾತನ್ನು ಒತ್ತಿ ಒತ್ತಿ ಹೇಳುತ್ತಿರುವುದರ ಹಿಂದಿನ ಅರ್ಥ ಗ್ರಹಿಸಲಾರದಷ್ಟು ಮೂರ್ಖರಲ್ಲ ಜನ. ಇದರರ್ಥವಿಷ್ಟೇ... ಆತ ಏನಿದ್ದರೂ ಸಾವಿನ ಬಾಗಿಲಲ್ಲಿ ನಿಂತವನು, ಆತ ಸತ್ತದ್ದಕ್ಕಾಗಿ ಬಾಳಿ ಬದುಕಬೇಕಾದ ಯುವ ವೈದ್ಯರಿಗೆ ಹಲ್ಲೆ ನಡೆಸಿದ್ದು ಘೋರ ಅಪರಾಧ. ಹಲ್ಲೆ ಯುವಕರ ಮೇಲಾದರೂ, ವೃದ್ಧರ ಮೇಲಾದರೂ ಘೋರ ಅಪರಾಧ ಎಂಬುವುದರಲ್ಲಿ ಎರಡು ಮಾತಿಲ್ಲ. ಅವರ ಮಾತು ಸ್ಪಷ್ಟವಾಗಿ ವೃದ್ಧ ಏನಿದ್ದರೂ ಇಂದಲ್ಲ, ನಾಳೆಗೆ.. ಒಟ್ಟಿನಲ್ಲಿ ಸಾವಿನ ಸನಿಹವಿದ್ದವ ಎಂದು ಧ್ವನಿಸುತ್ತದೆ. ಚಿಕಿತ್ಸೆ ಪಡೆಯುವುದು ರೋಗಿಯೊಬ್ಬನ ಮೂಲಭೂತ ಹಕ್ಕು.‌ಆತ ಇನ್ನೇನು ಕೆಲವೇ ನಿಮಿಷಗಳಲ್ಲಿ ಸಾಯುತ್ತಾನೆಂದು ಖಚಿತವಿದ್ದರೂ..... ಮತ್ತು ರೋಗಿ ಯಾವುದೇ ಸ್ಥಿತಿಯಲ್ಲಿದ್ದರೂ ಆತನಿಗೆ ವೈದ್ಯರು ಚಿಕಿತ್ಸೆ ನಿರಾಕರಿಸುವಂತಿಲ್ಲ. ಹಾಗೆ ಚಿಕಿತ್ಸೆ ನಿರಾಕರಿಸುವುದು  ನಿರ್ಲಕ್ಷ್ಯ ತೋರುವುದು ಶಿಕ್ಷಾರ್ಹ ಅಪರಾಧ.
ಈ ಪ್ರಕರಣದಲ್ಲಿ ವೈದ್ಯರ ತಪ್ಪೇ ಇಲ್ಲ ಎಂದಿಟ್ಟುಕೊಳ್ಳೋಣ. ಆದರೆ ಅವರು "ಎಂಬತ್ತರ ಹರೆಯದ ವೃದ್ಧ ಚಿಕಿತ್ಸೆಗೆ ಸ್ಪಂದಿಸದೇ ಮರಣ ಹೊಂದಿದ್ದಕ್ಕಾಗಿ ವೈದ್ಯರ ಮೇಲೆ ದಾಳಿ ಮಾಡಲಾಗಿದೆ, ಯುವ ವೈದ್ಯರು ಗಂಭೀರ ಗಾಯಗೊಂಡಿದ್ದಾರೆ" ಎಂದು ಮಾಡಿದ ವೃದ್ಧ ಮತ್ತು ಯುವ ಎಂಬ ವರ್ಗೀಕರಣ ಖಂಡನೀಯ.

ಮೃತನ ಸಂಬಂಧಿಕರು "ಆತನಿಗೆ ಕಟ್ಟ ಕಡೆಗೆ ಕೊಟ್ಟ ಇಂಜೆಕ್ಷನ್" ಯಾವುದೆಂದು ಬರೆದುಕೊಡಿ ಎಂದು ಆಗ್ರಹಿಸುತ್ತಿದ್ದರೆಂದು ಮಾಧ್ಯಮಗಳು ವರದಿ ಮಾಡಿವೆ. ಹಾಗೆ ರೋಗಿಯ ಸಂಬಂಧಿಕರು ತಮ್ಮವರಿಗೆ ನೀಡಲಾದ ಚಿಕಿತ್ಸೆ, ಬಳಸಲಾದ ಔಷಧಿಗಳ ಬಗ್ಗೆ ತಿಳಿಯುವ ಹಕ್ಕನ್ನು ಅವರು ಹೊಂದಿದ್ದಾರೆ. ಇದೂ ಕೂಡಾ ರೋಗಿಯ/ರೋಗಿಯ  ಸಂಬಂಧಿಕರ ಹಕ್ಕಿಗೊಳಪಡುತ್ತದೆ. ರೋಗಿಯ ಸಂಬಂಧಿಕರು ಬಳಸಿದ ಇಂಜೆಕ್ಷನ್ ಯಾವುದೆಂದು ಕೇಳಿದಾಗ ಅದಕ್ಕೆ ವಿವರಣೆ ನೀಡುವ ಜವಾಬ್ದಾರಿ ವೈದ್ಯರದ್ದು. ಅದನ್ನೇ ತಪ್ಪಂಬಂತೆ ವೈದ್ಯರು ಮಾಧ್ಯಮಗಳ ಮುಂದೆ ಮಾತನಾಡಿದ್ದಾರೆ. "(ಕನ್ನಡ ದಿನಪತ್ರಿಕೆಯೊಂದರಲ್ಲಿ ಕಳೆದ ವಾರ ವೈದ್ಯರೊಬ್ಬರು ಇದನ್ನು ವ್ಯಂಗ್ಯವಾಗಿ ತಮ್ಮ ಲೇಖನದಲ್ಲಿ ಉಲ್ಲೇಖಿಸಿದ್ದಾರೆ)" ಒಂದು ವೇಳೆ ನಾವು ಆತನಿಗೆ ನೀಡಲಾದ ಇಂಜೆಕ್ಷನ್ ಬಗ್ಗೆ ಹೇಳಿದರೆ" ಇವರಿಗೆ ಅದರ ಬಗ್ಗೆ ಏನು ಗೊತ್ತು ಎಂಬ ಭಾವವೂ ವೈದ್ಯರದ್ದಾಗಿದ್ದಿರಬಹುದು. ಅವರಿಗೆ ಔಷಧಿ, ಇಂಜೆಕ್ಷನ್ ಗಳ ಬಗ್ಗೆ ಗೊತ್ತಿರಲಿ, ಗೊತ್ತಿಲ್ಲದಿರಲಿ ಮಾಹಿತಿ ಪಡೆಯುವ ಹಕ್ಕಂತೂ ಅವರಿಗೆ ಇದ್ದೇ ಇದೆ. ವೈದ್ಯನಿಗೆ ಹೇಗೆ ಹಕ್ಕುಗಳಿರುತ್ತವೋ... ಹಾಗೆಯೇ ರೋಗಿಗೂ ಹಕ್ಕುಗಳಿರುತ್ತವೆ ಎಂಬುವುದನ್ನು ವೈದ್ಯರು ಮರೆಯಬಾರದು. ಸದ್ರಿ ಘಟನೆಯಲ್ಲಿ ಏನು ಸಂಭವಿಸಿದೆ ಎನ್ನುವುದನ್ನು ನಾವಿಲ್ಲಿ ದೂರ ಕೂತು ನಿರ್ಧರಿಸುವಂತಿಲ್ಲ. ಆದರೆ ರೋಗಿಯನ್ನು ವೃದ್ಧ ಎಂದು ಒತ್ತಿ ಒತ್ತಿ ಹೇಳುತ್ತಿದ್ದುದು ಮತ್ತು ಇಂಜೆಕ್ಷನ್ ಯಾವುದೆಂಬ ರೋಗಿಯ ಸಂಬಂಧಿಕರ ಪ್ರಶ್ನೆಯನ್ನು ವೈದ್ಯರು ಮಾಧ್ಯಮಗಳಿಗೆ ತಿಳಿಸಿರುವ ದಾಟಿ ನೋಡಿದರೆ ಅಲ್ಲಿ ರೋಗಿಯ ಹಕ್ಕನ್ನು ವೈದ್ಯರು ಗಾಳಿಗೆ ತೂರಿದ ವಾಸನೆ ಬಡಿಯುತ್ತದೆ. 
ವೈದ್ಯರ ಮೇಲೆ ನಡೆದ ದಾಳಿಯನ್ನು ಖಂಡಿಸಿ ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಏನು ದೇಶಾದ್ಯಂತ ಹೊರರೋಗಿ ವಿಭಾಗ ಬಂದ್ ಮಾಡಿ ಪ್ರತಿಭಟನೆಗೈದಿದೆಯೋ ಇದೇ ಐ.ಎಂ.ಎ ಯಾಕೆ ರೋಗಿಗಳ ಹಕ್ಕುಗಳ ಕುರಿತಂತೆಯೂ ಮಾತನಾಡಬಾರದು..? ವೈದ್ಯರ ನಿರ್ಲಕ್ಷ್ಯದಿಂದ ರೋಗಿಯ ಸಾವು ಸಂಭವಿಸಿದಾಗ ಯಾವತ್ತಾದರೂ ಐ.ಎಂ.ಎ.ತನ್ನ ಸದಸ್ಯರಿಗೆ ರೋಗಿಯ ಹಕ್ಕುಗಳ ಕುರಿತಂತೆ ಜಾಗೃತರಾಗಿರಲು ಬಹಿರಂಗವಾಗಿ ಹೇಳಿದ್ದಿದೆಯೇ...?

ವೃತ್ತಿ ಬಾಂಧವರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ವಿರೋಧಿಸಿ ಐ.ಎಂ.ಎ. ಆಲ್ ಇಂಡಿಯಾ ಒಪಿಡಿ (ಔಟ್ ಪೇಶಂಟ್ ಡಿಪಾರ್ಟ್ಮೆಂಟ್) ಬಂದ್ ಗೆ ಕರೆ ಕೊಟ್ಟಿರುವುದನ್ನು ಯಾವ ಕಾರಣಕ್ಕೂ ತಪ್ಪೆನ್ನಲಾಗದು. ‌ಆದರೆ ಬಿಜೆಪಿಗರು ವೈದ್ಯರ ಮೇಲೆ‌ ದೌರ್ಜನ್ಯವೆಸಗಿದಾಗ ಯಾಕೆ ಈ ಐ.ಎಂ.ಎ.ಧ್ವನಿಯೆತ್ತಿಲ್ಲ...?
2017 ರ ಜನವರಿ ತಿಂಗಳಲ್ಲಿ ಕಾರವಾರದ ಖಾಸಗಿ ಆಸ್ಪತ್ರೆಯೊಂದರ ಕರ್ತವ್ಯ ನಿರತ ವೈದ್ಯರ ಮೇಲೆ ಕರ್ನಾಟಕದ ಸಂಸದ ಅನಂತ ಕುಮಾರ್ ಹೆಗಡೆ ಕರ್ತವ್ಯ ನಿರತ ವೈದ್ಯರನ್ನು ಕೆಟ್ಟ ಪದಗಳಲ್ಲಿ ನಿಂದಿಸಿ  ಹಲ್ಲೆಗೈದದ್ದು ಸಿಸಿ ಕ್ಯಾಮೆರಾದಲ್ಲಿಯೂ ದಾಖಲಾಗಿತ್ತು. ಐ.ಎಂ.ಎ.ಯಾಕೆ ಅದರ ವಿರುದ್ಧ ಪ್ರತಿಭಟನೆ ನಡೆಸಿಲ್ಲ..? ಅನಂತ ಕುಮಾರ್ ಹೆಗಡೆ ಬಿಜೆಪಿಯ ಸಂಸದ ಎಂಬ ಕಾರಣಕ್ಕೇ...?

ಉತ್ತರ ಪ್ರದೇಶದ ಆದಿತ್ಯನಾಥ್ ಸರಕಾರ ಆಕ್ಸಿಜನ್ ಸಿಲಿಂಡರ್ ಸಪ್ಲೈ ಮಾಡದೇ ನೂರಾರು ಮುಗ್ಧ ಕಂದಮ್ಮಗಳ ಜೀವ ಅನ್ಯಾಯವಾಗಿ ಬಲಿಯಾದಾಗ ಅದರ ಹೊಣೆಯನ್ನು ಪ್ರಾಮಾಣಿಕ ವೈದ್ಯರ ತಲೆಗೆ ಕಟ್ಟಿದಾಗ ಯಾಕೆ ಐ.ಎಂ.ಎ. ಆದಿತ್ಯನಾಥ್ ಸರಕಾರದ ಹೊಣೆಗೇಡಿತನ ಮತ್ತು ಕುಕೃತ್ಯವನ್ನು ಖಂಡಿಸಿ ಪ್ರತಿಭಟನೆ ನಡೆಸಿಲ್ಲ. ಐ.ಎಂ.ಎ.ಗೆ ನಿಜಕ್ಕೂ ರೋಗಿಗಳ ಬಗ್ಗೆ ಕಾಳಜಿಯಿದ್ದರೆ ಕಣ್ಣಿಗೆ ರಾಚುವಂತಹ ತಪ್ಪೆಸಗಿದ ಸರಕಾರದ ವಿರುದ್ಧ ವೈದ್ಯರು ಧ್ವನಿಯೆತ್ತಬೇಕಿತ್ತು ತಾನೆ?
ಆ ಸಂದರ್ಭದಲ್ಲಿ ಸುಮಾರು ಅರುವತ್ತು ಮಕ್ಕಳ ಪ್ರಾಣ ಉಳಿಸಿದ ಪ್ರಾಮಾಣಿಕ ವೈದ್ಯ ಡಾ.ಖಫೀಲ್ ಖಾನ್ ಆ ಕಾರಣಕ್ಕಾಗಿಯೇ ಸರಕಾರದ ಕೆಂಗಣ್ಣಿಗೆ ಗುರಿಯಾದದ್ದು ಐ.ಎಂ.ಎ.ಗೆ ತಿಳಿದಿರಲಿಲ್ಲವೇ...? ಅಂತಹ ಪ್ರಾಮಾಣಿಕ ವೈದ್ಯನನ್ನು ಕೆಲಸದಿಂದ ವಜಾ ಮಾಡಿದ್ದಲ್ಲದೇ, ಅವರಿಗೆ ಮತ್ತು ಅವರ ಕುಟುಂಬಕ್ಕೆ ಯೋಗಿಯ ರೋಗಗ್ರಸ್ಥ ಸರಕಾರ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿತ್ತು. ಅವರ ಸಹೋದರನ ಕೊಲೆಯತ್ನ ನಡೆದಿತ್ತು. ಡಾ.ಖಫೀಲ್ ಖಾನ್ ರನ್ನು  ಗುರಿ ಮಾಡಿ ದಾಳಿ ಮಾಡಲಾಗಿತ್ತು. ಆಗ ಖಫೀಲ್ ಖಾನ್ ಗಾದ ಅನ್ಯಾಯದ ವಿರುದ್ಧ ಯಾಕೆ ಐ.ಎಂ.ಎ. ಪ್ರತಿಭಟಿಸಿಲ್ಲ..? ಖಫೀಲ್ ಖಾನ್ ಮುಸ್ಲಿಮರೆಂಬ ಕಾರಣಕ್ಕೇ...? ಅಥವಾ ಅಧಿಕಾರದಲ್ಲಿರುವುದು ಬಿಜೆಪಿ ಸರಕಾರ ಎಂಬ ಕಾರಣಕ್ಕೇ...‌?

ಮೊನ್ನೆ ಮೊನ್ನೆ ಮಹಾರಾಷ್ಟ್ರದ ಆದಿವಾಸಿ ಸಮುದಾಯದ ಯುವ ವೈದ್ಯೆ ಡಾ.ಪಾಯಲ್ ತಡ್ವಿ ತನ್ನ ಹಿರಿಯ ವೈದ್ಯರ ಕಿರುಕುಳ ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡಳು. ಆಕೆಯ ಆತ್ಮಹತ್ಯೆಗೆ ಮೇಲ್ಜಾತಿಯ ಹಿರಿಯ ವೈದ್ಯರ ಕಿರುಕುಳವೇ ಕಾರಣ ಎಂಬುವುದು ಪ್ರಾಥಮಿಕ ತನಿಖೆಯಿಂದ ಬಹಿರಂಗಗೊಂಡಿದೆ.‌
ಡಾ.ಪಾಯಲ್ ನಿಮ್ಮ ಸಮೂಹದ ಸದಸ್ಯೆಯಲ್ಲವೇ...? ಆಕೆಯ ಸಾವಿನ ಕುರಿತು ಐ.ಎಂ.ಎ. ಯಾಕೆ ಈ ವರೆಗೆ ತುಟಿಬಿಚ್ಚಿಲ್ಲ. ಆಕೆ ಆಕೆಯ ಬುಡಕಟ್ಟಿನ ಪ್ರಪ್ರಥಮ ವೈದ್ಯೆ. ಆಕೆಯ ಸಾವಿಗೆ ನ್ಯಾಯ ಕಲ್ಪಿಸುವ ಹೊಣೆಗಾರಿಕೆ ಐ.ಎಂ.ಎ.ಗಿಲ್ಲವೇ...? ವೈದ್ಯರದ್ದೇ ಕಿರುಕುಳದಿಂದ ವೈದ್ಯರು ಸಾವೀಗೀಡಾದರೆ ಐ.ಎಂ.ಎ.ಗೆ ಆ ಕುರಿತಂತೆ ಯಾವ ಜವಾಬ್ದಾರಿಯೂ ಇಲ್ಲವೇ...?

Writer - ಇಸ್ಮತ್ ಪಜೀರ್

contributor

Editor - ಇಸ್ಮತ್ ಪಜೀರ್

contributor

Similar News