ವಿಶ್ವದ ಹೆಚ್ಚು ಜನಸಂಖ್ಯೆಯ ದೇಶ: ಎಂಟು ವರ್ಷದಲ್ಲಿ ಚೀನಾ ಹಿಂದಿಕ್ಕಲಿರುವ ಭಾರತ

Update: 2019-06-18 09:27 GMT

ವಿಶ್ವಸಂಸ್ಥೆ, ಜೂ.18: ವಿಶ್ವದ ಅತ್ಯಂತ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶದ ವಿಚಾರದಲ್ಲಿ ಭಾರತ ಕೇವಲ 8 ವರ್ಷಗಳಲ್ಲಿ ಚೀನಾವನ್ನು ಹಿಂದಿಕ್ಕಲಿದೆ ಎಂದು ವಿಶ್ವಸಂಸ್ಥೆಯ ವರದಿ ಬಹಿರಂಗಪಡಿಸಿದೆ.

2019 ಹಾಗೂ 2050ರ ನಡುವೆ ಚೀನಾದ ಜನಸಂಖ್ಯೆ 31.4 ಮಿಲಿಯನ್ ಅಥವಾ ಸುಮಾರು 2.2 ಶೇ. ಇಳಿಕೆಯಾಗಲಿದೆ ಎಂದು ವರದಿ ಅಭಿಪ್ರಾಯಪಟ್ಟಿದೆ.

‘ವಿಶ್ವ ಜನಸಂಖ್ಯೆಯ ಭವಿಷ್ಯ-2019:ಮುಖ್ಯಾಂಶಗಳು’ಎಂಬ ಹೆಸರಿನ ವರದಿಯಲ್ಲಿ 2050ರ ವೇಳೆಗೆ ವಿಶ್ವದ ಜನಸಂಖ್ಯೆ 2 ಬಿಲಿಯನ್ ಹೆಚ್ಚಳವಾಗಲಿದೆ ಎಂದು ಅಂದಾಜಿಸಲಾಗಿದೆ. ಈಗಿನ 7.7 ಬಿಲಿಯನ್‌ನಿಂದ 9.7 ಬಿಲಿಯನ್‌ಗೆ ಏರಿಕೆಯಾಗಲಿರುವುದಾಗಿ ನಿರೀಕ್ಷಿಸಲಾಗಿದೆ.

ಭಾರತ, ನೈಜೀರಿಯ, ಪಾಕಿಸ್ತಾನ, ಡೆಮೊಕ್ರಾಟಿಕ್ ರಿಪಬ್ಲಿಕ್ ಆಫ್ ಕಾಂಗೊ, ಇಥಿಯೋಪಿಯ, ತಾಂಝಾನಿಯ, ಇಂಡೋನೇಶ್ಯ, ಈಜಿಪ್ಟ್ ಹಾಗೂ ಅಮೆರಿಕ ಸಹಿತ 9 ರಾಷ್ಟ್ರಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಜನಸಂಖ್ಯೆ ಏರಿಕೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಸಬ್-ಸಹಾರ ಆಫ್ರಿಕದಲ್ಲಿನ ಜನಸಂಖ್ಯೆ 2050ರ ವೇಳೆಗೆ ಭಾಗಶಃ ದ್ವಿಗುಣವಾಗುವ ಸಾಧ್ಯತೆಯಿದೆ ಎಂದು ವರದಿ ತಿಳಿಸಿದೆ.

ಜಾಗತಿಕ ಫಲವತ್ತತೆ ದರ ಕಡಿಮೆಯಾಗುತ್ತಿರುವ ಹೊರತಾಗಿಯೂ ಜನಸಂಖ್ಯೆ ಹೆಚ್ಚಳವಾಗುತ್ತಿದೆ ಎಂದು ವರದಿ ಉಲ್ಲೇಖಿಸಿದೆ.

1990ರಲ್ಲಿ ಸರಾಸರಿ ಜೀವಿತಾವಧಿ 64.2 ವರ್ಷವಾಗಿತ್ತು. 2019ರಲ್ಲಿ ಇದು 72.6 ವರ್ಷಕ್ಕೇರಿದೆ. 2050ರಲ್ಲಿ ಇದು 77.1 ವರ್ಷಕ್ಕೆ ಏರಿಕೆಯಾಗುವ ನಿರೀಕ್ಷೆಯಿದೆ ಎಂದು ವರದಿ  ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News