ಐಎಂಎ ಬಹುಕೋಟಿ ವಂಚನೆ ಪ್ರಕರಣ: ಮನ್ಸೂರ್ ಖಾನ್ ಸೇರಿ ಏಳು ನಿರ್ದೇಶಕರಿಗೆ ಈ.ಡಿ ನೋಟಿಸ್ ?

Update: 2019-06-18 17:32 GMT
ಮುಹಮ್ಮದ್ ಮನ್ಸೂರ್ ಖಾನ್

ಬೆಂಗಳೂರು, ಜೂ.18: ಐ ಮಾನಿಟರಿ ಅಡ್ವೈಸರಿ(ಐಎಂಎ)ಸಂಸ್ಥೆಯ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ(ಈ.ಡಿ)ವು ಸಂಸ್ಥೆಯ ಅಧ್ಯಕ್ಷ ಮುಹಮ್ಮದ್ ಮನ್ಸೂರ್ ಖಾನ್ ಸೇರಿದಂತೆ ಎಸ್‌ಐಟಿ ವಶದಲ್ಲಿರುವ ಏಳು ಮಂದಿ ನಿರ್ದೇಶಕರಿಗೆ ನೋಟಿಸ್ ಜಾರಿಗೊಳಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಐಎಂಎಯಲ್ಲಿ ವಿದೇಶಿ ಹೂಡಿಕೆ, ವಿದೇಶಿ ವಿನಿಮಯ, ವಿದೇಶಿ ವಹಿವಾಟು ಹಾಗೂ ಫೆಮಾ ಮತ್ತು ಪಿಎಂಎಲ್‌ಎ ಕಾಯ್ದೆ ಉಲ್ಲಂಘನೆ ಮಾಡಿ ವಹಿವಾಟು ಮಾಡಿದ ಆರೋಪದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿರುವ ಜಾರಿ ನಿರ್ದೇಶನಾಲಯವು, ಐಎಂಎ ಅಧ್ಯಕ್ಷ ಹಾಗೂ ನಿರ್ದೇಶಕರಿಗೆ ನೋಟಿಸ್ ಜಾರಿ ಮಾಡಿದೆ.

ಎಸ್‌ಐಟಿ ಅಧಿಕಾರಿಗಳು ಇತ್ತೀಚೆಗೆ ಮನ್ಸೂರ್ ಖಾನ್ ಹಾಗೂ ಐಎಂಎ ನಿರ್ದೇಶಕರಿಗೆ ಸೇರಿದ ಮನೆ, ಕಚೇರಿಗಳ ಮೇಲೆ ದಾಳಿ ನಡೆಸಿ ಮಹತ್ವದ ದಾಖಲಾತಿಗಳನ್ನು ವಶಕ್ಕೆ ಪಡೆದುಕೊಂಡಿದ್ದರು. ಮನ್ಸೂರ್ ಖಾನ್ ನಾಲ್ಕು ಮದುವೆಯಾಗಿದ್ದು ಮೊದಲ ಪತ್ನಿ ಬೆಂಗಳೂರಿನ ತಿಲಕ್‌ನಗರದಲ್ಲಿ, ಎರಡನೆ ಪತ್ನಿ ಕಮರ್ಷಿಯಲ್ ಸ್ಟ್ರೀಟ್ ಹಾಗೂ ಮೂರನೇ ಪತ್ನಿ ಶಿವಾಜಿನಗರದ ಪಾರ್ಕ್ ರಸ್ತೆಯಲ್ಲಿರುವ ನಿವಾಸಗಳಲ್ಲಿ ವಾಸವಾಗಿದ್ದಾರೆ. ನಾಲ್ಕನೇ ಹೆಂಡತಿ ದುಬೈನಲ್ಲಿ ನೆಲೆಸಿದ್ದು, ಮನ್ಸೂರ್ ಖಾನ್ ಇದೀಗ ಅಲ್ಲಿಯೇ ತಲೆ ಮರೆಸಿಕೊಂಡಿದ್ದಾನೆ ಎಂದು ಹೇಳಲಾಗುತ್ತಿದೆ.

ಮನ್ಸೂರ್ ಖಾನ್ ಸುಳಿವು ಪತ್ತೆ?: ಮನ್ಸೂರ್ ಖಾನ್ ಹಾಗೂ ಆತನ ಕುಟುಂಬ ಸದಸ್ಯರು ದುಬೈನಿಂದ ಸುಮಾರು 122 ಕಿ.ಮೀ.ದೂರವಿರುವ ರಾಸ್-ಅಲ್-ಕೈಯಮ್‌ನಲ್ಲಿ ತಂಗಿದ್ದಾರೆ ಎಂದು ಗುಪ್ತಚರ ಇಲಾಖೆಯ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ದುಬೈ ಹಾಗೂ ಭಾರತದ ನಡುವೆ ಅಪರಾಧಿಗಳ ಹಸ್ತಾಂತರ ಕಾನೂನು ಪ್ರಕ್ರಿಯೆ ಸುಲಭವಾಗಿರುವುದರಿಂದ 15 ದಿನಗಳಲ್ಲಿ ಮನ್ಸೂರ್ ಖಾನ್‌ನನ್ನು ರಾಜ್ಯಕ್ಕೆ ಕರೆ ತರುವ ಸಾಧ್ಯತೆಗಳಿವೆ ಎಂದು ಖಾಸಗಿ ಸುದ್ದಿ ವಾಹಿನಿಯೊಂದು ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News