ಮುಖ್ಯಮಂತ್ರಿ ರಾಜಕೀಯ ಬಿಟ್ಟು, ಸಿನಿಮಾ ರಂಗಕ್ಕೆ ಹೋಗಲಿ: ಪ್ರೊ.ಚಂಪಾ

Update: 2019-06-18 16:09 GMT

ಬೆಂಗಳೂರು, ಜೂ.18: ಪ್ರಾದೇಶಿಕ ಭಾಷೆಯನ್ನು ಅಭಿವೃದ್ಧಿಪಡಿಸುವುದು ಬಿಟ್ಟು ಕನ್ನಡ ಶಾಲೆಗಳಲ್ಲಿ ಇಂಗ್ಲಿಷ್ ಆರಂಭ ಮಾಡುವ ಮೂಲಕ ಕನ್ನಡಕ್ಕೆ ಕಂಟಕ ತಂದಿಡಲು ಮುಂದಾಗಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ರಾಜಕೀಯದಿಂದ ನಿವೃತ್ತಿ ಪಡೆದುಕೊಂಡು, ಸಿನಿಮಾ ರಂಗದಲ್ಲಿಯೇ ಮುಂದುವರಿಯಲಿ ಎಂದು ಹಿರಿಯ ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ ಹೇಳಿದ್ದಾರೆ.

ಮಂಗಳವಾರ ನಗರದ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಚಂಪಾ ಅಭಿನಂದನಾ ಬಳಗದಿಂದ ಆಯೋಜಿಸಿದ್ದ ಚಂಪಾ-80 ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ಪ್ರಾದೇಶಿಕ ಪಕ್ಷವಾಗಿದ್ದುಕೊಂಡು ಕನ್ನಡತನದ ವಿರುದ್ಧವಾದ ಕೆಲಸ ಮಾಡುತ್ತಿರುವುದು ನೋವಿನ ವಿಷಯ ಎಂದು ವಿಷಾದಿಸಿದರು.

ಪ್ರಾದೇಶಿಕ ಪಕ್ಷದಿಂದಲೇ ಸ್ಥಳೀಯ ಭಾಷೆಗೆ ಕಂಟಕ ಎದುರಾಗಿದೆ ಎಂದರೆ ಅದಕ್ಕಿಂತ ದುರ್ದೈವದ ಸಂಗತಿ ಮತ್ತೊಂದಿಲ್ಲ. ಕುಮಾರಸ್ವಾಮಿ ನೇತೃತ್ವದ ಸರಕಾರ ಕೈಗೊಂಡಿರುವ ಈ ಪ್ರಯೋಗ ವಿಕ್ಷಿಪ್ತವಾದುದು. ಈ ಪ್ರಯೋಗದಿಂದ ಯಶಸ್ಸು ಮಾತ್ರ ಸಾಧ್ಯವಿಲ್ಲ. ಇದರಿಂದ ಸಂಕಷ್ಟಕ್ಕೆ ಒಳಗಾಗುವವರು ನಮ್ಮ ಮಕ್ಕಳು. ಹೀಗಾಗಿ ಸಿಎಂ ಕುಮಾರಸ್ವಾಮಿ ಈಗಿನ ಗೊಂದಲಮಯ ವಾತಾವರಣದಿಂದ ಹೊರಬರಬೇಕೆಂದರೆ ರಾಜಕೀಯ ಬಿಟ್ಟು ಸಿನಿಮಾ ಕ್ಷೇತ್ರಕ್ಕೆ ತೆರಳಲಿ ಎಂದು ನುಡಿದರು.

ರಾಜ್ಯ ಸರಕಾರ ಆರಂಭಿಸಿರುವ ಇಂಗ್ಲಿಷ್ ಮಾಧ್ಯಮ ಶಾಲೆಗಳ ವಿರುದ್ಧ ಹಾಗೂ ಕರ್ನಾಟಕದಲ್ಲಿ ಕನ್ನಡ ಉಳಿಸುವ ಉದ್ದೇಶದಿಂದ ಬಲಿಷ್ಠ ಚಳವಳಿ ಕಟ್ಟಬೇಕು. ಇಂದಿನ ವಿದ್ಯಾರ್ಥಿ-ಯುವಜನರಿಗೆ ಚಳವಳಿಯ ನೇತೃತ್ವವನ್ನು ವಹಿಸಬೇಕು. ಆ ಹೋರಾಟದಲ್ಲಿ ಎಲ್ಲ ಕನ್ನಡ ಪರ, ಸರಕಾರಿ ಶಾಲೆಗಳ ಪರವಾಗಿರುವ ಎಲ್ಲರೂ ಪಾಲ್ಗೊಳ್ಳಬೇಕು. ಸಾಹಿತಿಗಳು, ಚಿಂತಕರು, ಲೇಖಕರು, ಕವಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇದಕ್ಕೆ ಬೆಂಬಲ ನೀಡಬೇಕು ಎಂದು ಕರೆ ನೀಡಿದರು.

ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಮಾತನಾಡಿ, ಈ ಹಿಂದೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮುಖ್ಯಮಂತ್ರಿಗಳನ್ನು ಕೂರಿಸಿಕೊಂಡು ಮನವರಿಕೆ ಮಾಡಿಕೊಡಲಾಯಿತು. ಆದರೂ ಕನ್ನಡ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮವನ್ನು ಆರಂಭಿಸಿಯೇ ಬಿಟ್ಟ ಸರಕಾರದ ಕ್ರಮ ಖಂಡನೀಯ. ನ್ಯಾಯಾಲಯ ಕೂಡ ಪೋಷಕರು ಕೇಳಿದ ಭಾಷೆಯಲ್ಲಿ ಶಿಕ್ಷಣ ಕೊಡಿ ಎಂದು ಹೇಳುವ ಮೂಲಕ ಕನ್ನಡವನ್ನು ಕಡೆಗಣಿಸಲಾಯಿತು ಎಂದು ಬೇಸರ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಕಸಾಪದ ಅಧ್ಯಕ್ಷ ಡಾ.ಮನುಬಳಿಗಾರ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ, ಮಾಜಿ ಶಾಸಕ ಬಿ.ಆರ್.ಪಾಟೀಲ, ಸದಸ್ಯ ಎಂ.ತಿಮ್ಮಯ್ಯ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News