ಕಿವೀಸ್ ವಿರುದ್ಧ ಸೇಡಿಗೆ ಹರಿಣ ಪಡೆಯ ಪ್ರಯತ್ನ

Update: 2019-06-18 18:45 GMT

ಬರ್ಮಿಂಗ್‌ಹ್ಯಾಮ್, ಜೂ.18: ಸೋಲಿನಿಂದ ಹತಾಶೆೆಗೊಂಡಿರುವ ದಕ್ಷಿಣ ಆಫ್ರಿಕ ತಂಡ ಬುಧವಾರ ಇಲ್ಲಿ ನಡೆಯಲಿರುವ ವಿಶ್ವಕಪ್ ಪಂದ್ಯದಲ್ಲಿ ನ್ಯೂಝಿಲ್ಯಾಂಡ್‌ನ್ನು ಎದುರಿಸಲಿದೆ.

 2015ರಲ್ಲಿ ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ದಕ್ಷಿಣ ಆಫ್ರಿಕ ತಂಡವನ್ನು ನ್ಯೂಝಿಲ್ಯಾಂಡ್ ಮಣಿಸಿತ್ತು. ಆ ಸೋಲಿಗೆ ಸೇಡು ತೀರಿಸುವುದು ದಕ್ಷಿಣ ಆಫ್ರಿಕ ತಂಡದ ಗುರಿಯಾಗಿದೆ.

  ಸೆಮಿಫೈನಲ್‌ನಲ್ಲಿ ನ್ಯೂಝಿಲ್ಯಾಂಡ್ ವಿರುದ್ಧ ಸೋತು ನಿರ್ಗಮಿಸಿದ್ದ ದಕ್ಷಿಣ ಆಫ್ರಿಕ ಈ ಬಾರಿ ವಿಶ್ವಕಪ್‌ನಲ್ಲಿ ಸತತ ಮೂರು ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ಇನ್ನೊಂದು ಪಂದ್ಯ ಮಳೆಯಿಂದಾಗಿ ರದ್ಧಾಗಿತ್ತು. ಅಫ್ಘಾನಿಸ್ತಾನ ವಿರುದ್ಧ ಏಕೈಕ ಗೆಲುವು ದಾಖಲಿಸಿದೆ. ನ್ಯೂಝಿಲ್ಯಾಂಡ್ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದು, ಅಗ್ರಸ್ಥಾನಕ್ಕೇರಲು ಎದುರು ನೋಡುತ್ತಿದೆ. ಆಡಿರುವ 4 ಪಂದ್ಯಗಳ ಪೈಕಿ ಮೂರರಲ್ಲಿ ಜಯ ಗಳಿಸಿದೆ. ಇನ್ನೊಂದು ಪಂದ್ಯ ಮಳೆಯಿಂದಾಗಿ ರದ್ದಾಗಿದೆ. ದಕ್ಷಿಣ ಆಫ್ರಿಕ ತಂಡ ಗಾಯಾಳುಗಳ ಸಮಸ್ಯೆ ಎದುರಿಸುತ್ತಿದೆ. ವೇಗಿಗಳಾದ ಡೇಲ್ ಸ್ಟೇಯ್ನಿ ಮತ್ತು ಆ್ಯನ್ರಿಕ್ ನೊರ್ಜೆ ಗಾಯಗೊಂಡು ತಂಡದಿಂದ ಹೊರಗುಳಿದಿರುವುದು ಆಫ್ರಿಕದ ಬೌಲಿಂಗ್ ವಿಭಾಗ ಸೊರಗಲು ಕಾರಣವಾಗಿದೆ. ದಕ್ಷಿಣ ಆಫ್ರಿಕ ತನ್ನ ಬೌಲರ್‌ಗಳನ್ನು ಹೆಚ್ಚು ನೆಚ್ಚಿಕೊಂಡಿದೆ. ವೇಗಿ ಇಮ್ರಾನ್ ತಾಹಿರ್‌ನ್ನು ಅತಿಯಾಗಿ ಅವಲಂಬಿಸಿದೆ. 40ರ ಹರೆಯದ ಸ್ಪಿನ್ನರ್ ಇಂಗ್ಲೆಂಡ್ ಮತ್ತು ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ತಲಾ 2 ವಿಕೆಟ್‌ಗಳನ್ನು ಉಡಾಯಿಸಿದ್ದರು. ಆರಂಭಿಕ ಬ್ಯಾಟ್ಸ್ ಮನ್‌ಗಳಾದ ಹಾಶಿಂ ಅಮ್ಲ ಮತ್ತು ಕ್ವಿಂಟನ್ ಡಿಕಾಕ್ ಮಳೆ ಬಾಧಿತ ಕಳೆದ ಪಂದ್ಯದಲ್ಲಿ ಚೆನ್ನಾಗಿ ಆಡಿದ್ದರು. ವೇಗಿ ಟ್ರೆಂಟ್ ಬೌಲ್ಟ್‌ರನ್ನು ಎದುರಿಸಲು ಅವರು ತಯಾರಿ ನಡೆಸಿದ್ದಾರೆ.

ದಕ್ಷಿಣ ಆಫ್ರಿಕ ಆಟಗಾರರು ಕೆಲವೊಮ್ಮೆ ಸ್ಪಿನ್ ಬೌಲರ್ ಎದುರು ರನ್ ಗಳಿಸಲು ಹೆಣಗಾಡುತ್ತಾರೆ. ಐಶ್ ಶೋಧಿ ಮತ್ತು ಮಿಚೆಲ್ ಸ್ಯಾಂಟ್ನೆರ್‌ನ್ನು ದಾಳಿಗಳಿಸಲು ಕಿವೀಸ್ ಯೋಚಿಸುತ್ತಿದೆ. ನ್ಯೂಝಿಲ್ಯಾಂಡ್‌ನ ಬ್ಯಾಟಿಂಗ್ ವಿಭಾಗ ಬಲಿಷ್ಠವಾಗಿದೆ. ನಾಯಕ ಕೇನ್ ವಿಲಿಯಮ್ಸನ್ ಬಾಂಗ್ಲಾದ ವಿರುದ್ಧ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅಫ್ಘಾನಿಸ್ತಾನ ವಿರುದ್ಧ ರಾಸ್ ಟೇಲರ್ 85 ರನ್‌ಗಳ ಕೊಡುಗೆ ನೀಡಿದ್ದರು. ಕಿವೀಸ್ ತನ್ನ ಆರಂಭಿಕ ದಾಂಡಿಗರಾದ ಕಾಲಿನ್ ಮುನ್ರೊ ಮತ್ತು ಮಾರ್ಟಿನ್ ಗಪ್ಟಿಲ್ ಅವರಲ್ಲಿ ವಿಶ್ವಾಸವಿರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News