ಭಾರತ ತಂಡಕ್ಕೆ ಸುಲಭ ತುತ್ತಾದ ಫಿಜಿ

Update: 2019-06-18 18:48 GMT

ಹಿರೊಶಿಮಾ, ಜೂ.18: ಗುರ್ಜಿತ್ ಕೌರ್ ಗಳಿಸಿದ ನಾಲ್ಕು ಗೋಲುಗಳ ನೆರವಿನಿಂದ ಭಾರತ ತಂಡ ಫಿಜಿ ವಿರುದ್ಧದ ಎಫ್‌ಐಎಚ್ ಮಹಿಳಾ ಸಿರೀಸ್ ಫೈನಲ್ಸ್ ಹಾಕಿ ಟೂರ್ನಮೆಂಟ್‌ನಲ್ಲಿ 11-0 ಅಂತರದ ಭರ್ಜರಿ ಜಯ ದಾಖಲಿಸಿದೆ. ಈ ಗೆಲುವಿನ ಮೂಲಕ ಸೆಮಿ ಫೈನಲ್‌ಗೆ ಲಗ್ಗೆ ಇಟ್ಟಿದೆ.

ಮಂಗಳವಾರ ಇಲ್ಲಿ ಏಕಪಕ್ಷೀಯವಾಗಿ ಸಾಗಿದ ‘ಎ’ ಗುಂಪಿನ ಪಂದ್ಯದಲ್ಲಿ ಗುರ್ಜಿತ್ 15ನೇ, 19ನೇ, 21ನೇ ಹಾಗೂ 22ನೇ ನಿಮಿಷದಲ್ಲಿ ಗೋಲು ಗಳಿಸಿದರೆ, ಮೋನಿಕಾ(11ನೇ, 33ನೇ ನಿಮಿಷ)ಎರಡು ಗೋಲು ಗಳಿಸಿದರು. ಲಾಲ್‌ರೆಂಸಿಯಾಮಿ(4ನೇ), ರಾಣಿ(10ನೇ), ವಂದನಾ ಕಟಾರಿಯಾ(12ನೇ), ಲಿಲಿಮಾ ಮಿಂಝ್(51ನೇ) ಹಾಗೂ ನವನೀತ್ ಕೌರ್(57ನೇ ನಿಮಿಷ)ತಲಾ ಒಂದು ಗೋಲು ಗಳಿಸಿದ್ದಾರೆ.

 ವಿಶ್ವದ ನಂ.9ನೇ ತಂಡ ಭಾರತ ಕೆಳ ರ್ಯಾಂಕಿನ ತಂಡದ ವಿರುದ್ಧ ಪಂದ್ಯದುದ್ದಕ್ಕೂ ಪ್ರಾಬಲ್ಯ ಮೆರೆಯಿತು. 60 ನಿಮಿಷಗಳ ಆಟದಲ್ಲಿ ಫಿಜಿ ಕೇವಲ ಒಂದು ಬಾರಿ ಮಾತ್ರ ವೃತ್ತದೊಳಗೆ ಪ್ರವೇಶಿಸಿದರೆ, ಭಾರತ 74 ಬಾರಿ ಪ್ರವೇಶಿಸಿದೆ.

ನಾಲ್ಕನೇ ನಿಮಿಷದಲ್ಲೇ ಮೊದಲ ಗೋಲು ಗಳಿಸಿದ ಭಾರತ ಮೊದಲ ಕ್ವಾರ್ಟರ್‌ನಲ್ಲಿ ಪ್ರಾಬಲ್ಯ ಸಾಧಿಸಿತು. ನಾಯಕಿ ರಾಣಿ 10ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್‌ನಲ್ಲಿ 2ನೇ ಗೋಲು ಗಳಿಸಿದರು.ಮುಂದಿನ ನಿಮಿಷದಲ್ಲಿ ಮೋನಿಕಾ, ನೇಹಾ ಗೋಯಲ್ ನೆರವಿನಿಂದ ತನ್ನ ಮುನ್ನಡೆಯನ್ನು 3-0ಗೆ ವಿಸ್ತರಿಸಿದರು.

12ನೇ ನಿಮಿಷದಲ್ಲಿ ಗೋಲು ಬಾರಿಸಿದ ಫಾರ್ವರ್ಡ್ ಆಟಗಾರ್ತಿ ವಂದನಾ ಟೂರ್ನಿಯಲ್ಲಿ 2ನೇ ಗೋಲು ಗಳಿಸಿದರು. ಮೊದಲ ಕ್ವಾರ್ಟರ್‌ನ ಕೊನೆಯ ನಿಮಿಷದಲ್ಲಿ ಗುರ್ಜಿತ್ ಪೆನಾಲ್ಟಿ ಕಾರ್ನರ್‌ನ್ನು ಗೋಲಾಗಿ ಪರಿವರ್ತಿಸಿದರು. 19ನೇ ನಿಮಿಷದಲ್ಲಿ ಮತ್ತೊಂದು ಪೆನಾಲ್ಟಿ ಕಾರ್ನರ್‌ನಲ್ಲಿ ಗೋಲು ಗಳಿಸಿ ಭಾರತದ ಮುನ್ನಡೆಯನ್ನು 6-0ಗೆ ವಿಸ್ತರಿಸಿದರು.

21ನೇ ನಿಮಿಷದಲ್ಲಿ ಗೋಲು ಗಳಿಸಿದ ಗುರ್ಜಿತ್ ಹ್ಯಾಟ್ರಿಕ್ ಪೂರೈಸಿದರು. 22ನೇ ನಿಮಿಷದಲ್ಲಿ ಮತ್ತೊಮ್ಮೆ ಪೆನಾಲ್ಟಿ ಕಾರ್ನರ್‌ರನ್ನು ಗೋಲಾಗಿ ಪರಿವರ್ತಿಸಿದ ಗುರ್ಜಿತ್ ಭಾರತದ ಗೋಲಿನ ಸಂಖ್ಯೆಯನ್ನು 8ಕ್ಕೆ ಏರಿಸಿದರು.

ಮೂರನೇ ಕ್ವಾರ್ಟರ್‌ನ ಆರಂಭದಲ್ಲಿ ಮಿಡ್‌ಫೀಲ್ಡರ್ ಮೋನಿಕಾ ಭಾರತದ ಪರ 9ನೇ ಗೋಲು ಗಳಿಸಿದರು. 51ನೇ ನಿಮಿಷದಲ್ಲಿ ರಿವರ್ಸ್ ಸ್ಟಿಕ್‌ನ ಮೂಲಕ ಗೋಲು ಗಳಿಸಿದ ಲಿಲಿಮಾ ಸ್ಕೋರ್‌ಶೀಟ್‌ನಲ್ಲಿ ತನ್ನ ಹೆಸರು ನೋಂದಾಯಿಸಿದರು. 57ನೇ ನಿಮಿಷದಲ್ಲಿ ನವನೀತ್, ಫಿಜಿ ಗೋಲ್‌ಕೀಪರನ್ನು ವಂಚಿಸಿ ಗೋಲು ಹೊಡೆದು ಭಾರತಕ್ಕೆ 11-0 ಗೆಲುವು ತಂದರು.

ಭಾರತ ಶನಿವಾರ ಸೆಮಿ ಫೈನಲ್ ಪಂದ್ಯವನ್ನು ಆಡಲಿದೆ. ಉರುಗ್ವೆ ಹಾಗೂ ಬಿ ಗುಂಪಿನಲ್ಲಿ 2ನೇ ಸ್ಥಾನ ಪಡೆಯುವ ತಂಡಗಳ ಮಧ್ಯೆ ನಡೆಯುವ ಕ್ರಾಸ್ ಓವರ್ ಪಂದ್ಯದಲ್ಲಿ ಜಯ ಸಾಧಿಸುವ ತಂಡವನ್ನು ಭಾರತ ಎದುರಿಸಲಿದೆ.

ಆರು ಅಂಕ ಗಳಿಸಿರುವ ಚಿಲಿ ಮೊದಲ ಸ್ಥಾನದಲ್ಲಿದೆ. ತಲಾ 3 ಅಂಕ ಗಳಿಸಿರುವ ರಶ್ಯ ಹಾಗೂ ಜಪಾನ್ ಕ್ರಾಸ್‌ಓವರ್ ಸ್ಪಾಟ್‌ನಲ್ಲಿವೆ. ಚಿಲಿ ತಂಡ ರಶ್ಯವನ್ನು ಹಾಗೂ ಮೆಕ್ಸಿಕೊ ತಂಡ ಜಪಾನ್ ತಂಡವನ್ನು ಎದುರಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News