ಬೆಂಗಳೂರಿನ ಹೊರಗೂ ವೋಲ್ವೊ ಬಸ್ ಸೇವೆ ವಿಸ್ತರಣೆ: ಸಾರಿಗೆ ಸಚಿವ ತಮ್ಮಣ್ಣ

Update: 2019-06-19 13:22 GMT

ಬೆಂಗಳೂರು, ಜೂ.19: ನಗರದಲ್ಲಿ ಸಂಚಾರ ಮಾಡುತ್ತಿರುವ ಬಿಎಂಟಿಸಿ ವೋಲ್ವೊ ಬಸ್‌ಗಳ ಸೌಲಭ್ಯವನ್ನು ಬೆಂಗಳೂರಿನ ಸುತ್ತಮುತ್ತಲಿನ ಜಿಲ್ಲೆಗಳಿಗೂ ವಿಸ್ತರಣೆ ಮಾಡಲು ಚಿಂತಿಸಲಾಗಿದೆ ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ತಿಳಿಸಿದ್ದಾರೆ.

ನಗರದ ಖಾಸಗಿ ಹೊಟೇಲ್‌ನಲ್ಲಿ ಬಸ್ ಮತ್ತು ಕಾರು ನಿರ್ವಾಹಕ ಒಕ್ಕೂಟದ ಎರಡನೆ ಆವೃತ್ತಿಯ ಪ್ರವಾಸ್ ಕರ್ಟನ್ ರೈಸರ್ ಕಾರ್ಯಕ್ರಮದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಎಂಟಿಸಿಯ ವೋಲ್ವೊ ಬಸ್‌ಗಳ ನಷ್ಟದ ಪ್ರಮಾಣ ತಗ್ಗಿಸಲು ಬೆಂಗಳೂರಿನ ಸುತ್ತಮುತ್ತಲಿರುವ ನಗರ, ಪಟ್ಟಣಗಳಿಗೆ ಬಿಎಂಟಿಸಿ ವೋಲ್ವೊ ಬಸ್ ಸೌಲಭ್ಯ ನೀಡಲಾಗುತ್ತದೆ ಎಂದು ಹೇಳಿದರು.

ಬೆಂಗಳೂರು ಸುತ್ತಮುತ್ತ ವೋಲ್ವೊ ಬಸ್ ಸೌಲಭ್ಯ ಒದಗಿಸುವುದರಿಂದ ಉಂಟಾಗುವ ಸಾಧ್ಯಾಸಾಧ್ಯತೆಗಳ ಬಗ್ಗೆ ಪರಿಶೀಲನೆ ನಡೆಸಲು ಸಮಿತಿಯೊಂದನ್ನು ರಚಿಸಲಾಗಿದೆ. ಆ ಸಮಿತಿ ವರದಿ ನೀಡಿದ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ತುಮಕೂರು, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ಮೈಸೂರು, ದಾಣಗೆರೆ ಸೇರಿದಂತೆ ಬೆಂಗಳೂರಿಗೆ ಹತ್ತಿರ ಇರುವ ನಗರ ಪಟ್ಟಣಗಳಲ್ಲಿ ವೋಲ್ವೊ ಬಸ್ ಸೌಲಭ್ಯ ಪ್ರಾರಂಭಿಸುವುದರಿಂದ ನಷ್ಟದ ಪ್ರಮಾಣವನ್ನು ತಗ್ಗಿಸಬಹುದು ಎಂದರು. ಇದೇ ವೇಳೆ ಬಿಎಂಟಿಸಿಯು ಒಂದು ವರ್ಷದ ಅವಧಿಯಲ್ಲಿ 300 ಕೋಟಿ ನಷ್ಟಕ್ಕೆ ಕಾರಣವೇನು ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನಷ್ಟಕ್ಕೆ ಕಾರಣಗಳನ್ನು ಹುಡುಕಲಾಗುತ್ತಿದೆ ಹಾಗೂ ನಷ್ಟದ ಪ್ರಮಾಣ ತಗ್ಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸಚಿವ ತಮ್ಮಣ್ಣ, ರಸ್ತೆ ಸುರಕ್ಷತೆ, ಸಾರಿಗೆ ವ್ಯವಸ್ಥೆಯಲ್ಲಿನ ಸಮಸ್ಯೆಗಳನ್ನು ನಿವಾರಿಸಲು ಅಧಿಕಾರಿಗಳೊಂದಿಗೆ ಸಭೆ ಮಾಡಿ ಚರ್ಚಿಸಲಾಗುತ್ತದೆ. ಅಲ್ಲದೆ, ಈಗಾಗಲೇ ಸಾರಿಗೆ ಇಲಾಖೆಯಲ್ಲಿ ಆಧುನಿಕ ತಂತ್ರಜ್ಞಾನ ಬಳಸಿಕೊಂಡಿದ್ದು, ರಸ್ತೆ ಸುರಕ್ಷತೆ, ಮಾಲಿನ್ಯ ನಿಯಂತ್ರಣ, ಮೂಲಸೌಕರ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಬಸ್ ಅಂಡ್ ಕಾರ್ ಆಪರೇಟರ್ಸ್‌ ಕಾನ್ಫಿಡರೇಷನ್ ಆಫ್ ಇಂಡಿಯಾದ ಅಧ್ಯಕ್ಷ ಕೆ.ಟಿ.ರಾಜಶೇಖರ ಮಾತನಾಡಿ, ಖಾಸಗಿ ಕ್ಷೇತ್ರದ ವಾಹನಗಳ ಮಾಲಕರು ಒಂದೇ ವೇದಿಕೆಯಡಿ ಬರುವ ಉದ್ದೇಶದಿಂದ ನಾವು ಕಾರ್ಯನಿರ್ವಹಿಸುತ್ತಿದ್ದೇವೆ. ನಮ್ಮ ಕಂಪನಿ ಸದಸ್ಯತ್ವದ 15 ಲಕ್ಷ ಬಸ್, 11 ಲಕ್ಷ ಕಾರುಗಳು ದೇಶದಾದ್ಯಂತ ವಿವಿಧ ಹಂತದಲ್ಲಿ ಸಾರಿಗೆ ಸೇವೆ ಒದಗಿಸುತ್ತಿವೆ ಎಂದು ತಿಳಿಸಿದರು.

ಸಾರ್ವಜನಿಕ ಸಾರಿಗೆ ವಲಯಕ್ಕೆ ಸಂಬಂಧಿಸಿದಂತೆ ನೀತಿ ನಿಯಮಗಳು ಹಾಗೂ ಕಾನೂನುಗಳಲ್ಲಿ ಸರಕಾರಗಳು ಸಕಾರಾತ್ಮಕ ಸುಧಾರಣೆಗಳನ್ನು ತಂದಾಗ ಅಷ್ಟೇ ಕ್ಷೇತ್ರದ ಮತ್ತು ಕ್ಷೇತ್ರದಲ್ಲಿ ತೊಡಗಿಕೊಂಡಿರುವವರ ಸರ್ವತೋಮುಖ ಪ್ರಗತಿ ಸಾಧ್ಯವಾಗುತ್ತದೆ. ಸಾರಿಗೆ ವ್ಯವಸ್ಥೆಗೆ ಸಂಬಂಧಿಸಿದಂತೆ ಇರುವ ತೆರಿಗೆ ಪದ್ಧತಿಯನ್ನು ಸರಳೀಕರಣ ಮಾಡಬೇಕು ಎಂದು ಅವರು ಮನವಿ ಮಾಡಿದರು.

ನವಿ ಮುಂಬೈನ ವಾಶಿಯಲ್ಲಿರುವ ಸಿಐಡಿಸಿಒ ಕನ್ವನ್ಷನ್ ಅಂಡ್ ಎಕ್ಸಿಬಿಷನ್ ಸೆಂಟರ್‌ನಲ್ಲಿ ಜು.25 ರಿಂದ ಮೂರು ದಿನಗಳ ಕಾಲ ಪ್ರವಾಸ್-2019 ಕಾರ್ಯಕ್ರಮ ಆಯೋಜಿಸಲಾಗಿದೆ. ಪ್ರಯಾಣಿಕರ ಸುರಕ್ಷಿತ, ಸ್ಮಾರ್ಟ್, ಸುಸ್ಥಿರ ಪ್ರಯಾಣದ ಕಡೆಗೆ ಎಂಬ ಘೋಷಣೆಯೊಂದಿಗೆ ಎರಡನೆ ಆವೃತ್ತಿಯ ಪ್ರವಾಸ್ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News