ಎತ್ತಿನಹೊಳೆಗೆ ಒಳಪಡುವ ಜಮೀನಿಗೆ ಸಮಾನ ಬೆಲೆ: ಸಂಪುಟ ಉಪ ಸಮಿತಿಯಲ್ಲಿ ಪ್ರಸ್ತಾಪ- ಡಾ.ಜಿ.ಪರಮೇಶ್ವರ್

Update: 2019-06-19 13:10 GMT

ಬೆಂಗಳೂರು, ಜೂ.19; ಹೇಮಾವತಿ ನಾಲೆಯ ಲಿಂಕ್ ಕೆನಾಲ್ ನಿರ್ಮಾಣ ಹಾಗೂ ಎತ್ತಿನ ಹೊಳೆ ಯೋಜನೆಗೆ ಮುಳುಗಡೆಯಾಗುವ ದೊಡ್ಡಬಳ್ಳಾಪುರ ಹಾಗೂ ಕೊರಟಗೆರೆ ತಾಲೂಕಿನ 5,500 ಎಕರೆ ಜಮೀನಿಗೆ ಸಮಾನ ಪರಿಹಾರ ಮೊತ್ತ ನಿಗದಿ ಮಾಡುವ ಕುರಿತು ಸಚಿವ ಸಂಪುಟದ ಉಪಸಮಿತಿ ಮುಂದೆ ಚರ್ಚಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದರು.

ಬುಧವಾರ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ತುಮಕೂರು ಜಿಲ್ಲೆಯಲ್ಲಿನ ನೀರಾವರಿ ಯೋಜನೆಗಳು ಹಾಗೂ ಎತ್ತಿನಹೊಳೆ ಯೋಜನೆಯ ಭೂ ಸಂತ್ರಸ್ತರಿಗೆ ಸಮಾನ ಪರಿಹಾರ ನಿಗದಿ ಕುರಿತು ಚರ್ಚಿಸಲು ಕರೆದಿದ್ದ ಸಭೆಯ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ತುಮಕೂರು ಜಿಲ್ಲೆಯ ಎಲ್ಲ ಶಾಸಕರನ್ನು ಆಹ್ವಾನಿಸಿ ಅವರ ಅಭಿಪ್ರಾಯವನ್ನು ಸಂಗ್ರಹಿಸಲಾಗಿದೆ. ಹೇಮಾವತಿ ನಾಲೆ ಮೂಲಕ ಎಲ್ಲ ತಾಲೂಕುಗಳಿಗೂ ಈ ಮೊದಲು ನಿಗದಿ ಪಡಿಸಿರುವಂತೆ ನೀರು ಹರಿಸಲು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಪರಮೇಶ್ವರ್ ಹೇಳಿದರು.

ಹೇಮಾವತಿ ನಾಲೆಗೆ ಲಿಂಕ್ ಕೆನಾಲ್ ನಿರ್ಮಾಣ ಸಂಬಂಧ ಸಭೆಯಲ್ಲಿ ಚರ್ಚಿಸಲಾಯಿತು. ಈ ಬಗ್ಗೆ ಶಾಸಕರು ತಮ್ಮ ಅಭಿಪ್ರಾಯವನ್ನು ನೀಡಿದರು. ಈ ಬಗ್ಗೆ ಸಂಪುಟ ಉಪ ಸಮಿತಿಯ ಮುಂದಿಡಲಾಗುತ್ತದೆ. ಸಮಿತಿ ಈ ಬಗ್ಗೆ ಮುಂದಿನ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಅವರು ಹೇಳಿದರು.

ಎತ್ತಿನಹೊಳೆ ಯೋಜನೆ ವ್ಯಾಪ್ತಿಗೆ ದೊಡ್ಡಬಳ್ಳಾಪುರ ಹಾಗೂ ತುಮಕೂರಿನ ಕೊರಟಗೆರೆಯ 5,500 ಎಕರೆ ಒಳಪಡಲಿದೆ. ದೊಡ್ಡಬಳ್ಳಾಪುರ ಹಾಗೂ ಕೊರಟಗೆರೆ ಈ ಭಾಗದ ಜಮೀನಿಗೆ ಸಮಾನ ರೀತಿಯ ಬೆಲೆ ಕೊಡುವುದು ಅಗತ್ಯ ಎಂದು ಪರಮೇಶ್ವರ್ ತಿಳಿಸಿದರು.

ದೊಡ್ಡಬಳ್ಳಾಪುರಕ್ಕೆ ಹೆಚ್ಚು ಹಾಗೂ ಕೊರಟಗೆರೆಗೆ ಕಡಿಮೆ ಬೆಲೆ ನೀಡುವುದು ಸರಿಯಲ್ಲ. ಹೀಗಾಗಿ ಈ ಬಗ್ಗೆಯೂ ಸಹ ಸಂಪುಟ ಉಪ ಸಮಿತಿಯ ಮುಂದೆ ವಿಷಯ ಪ್ರಸ್ತಾಪಿಸಿ, ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಪರಮೇಶ್ವರ್ ಹೇಳಿದರು.

ಸಭೆಯಲ್ಲಿ ಸಣ್ಣ ಕೈಗಾರಿಕೆ ಸಚಿವ ಎಸ್.ಆರ್.ಶ್ರೀನಿವಾಸ್, ಬಿಜೆಪಿ ಶಾಸಕರಾದ ಜೆ.ಸಿ.ಮಾಧುಸ್ವಾಮಿ, ಜ್ಯೋತಿ ಗಣೇಶ್, ಜೆಡಿಎಸ್ ಶಾಸಕ ಗೌರಿಶಂಕರ್, ವಿಧಾನಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಕುಣಿಗಲ್‌ಗೆ ನೀರು ಬಿಟ್ಟರೆ ಹೋರಾಟ

ರಾಜ್ಯ ಸರಕಾರ ಅಧಿಕಾರ ದುರುಪಯೋಗ ಮಾಡಿಕೊಂಡು ಕುಣಿಗಲ್ ತಾಲೂಕಿಗೆ ಹೇಮಾವತಿ ಮೂಲಕ ನೀರು ಹರಿಸಿದರೆ ನಾವು ಕಾನೂನು ಹೋರಾಟ ಮಾಡುತ್ತೇವೆ ಎಂದು ಚಿಕ್ಕನಾಯಕನಹಳ್ಳಿ ಕ್ಷೇತ್ರದ ಬಿಜೆಪಿ ಶಾಸಕ ಜೆ.ಸಿ.ಮಾಧುಸ್ವಾಮಿ ಎಚ್ಚರಿಕೆ ನೀಡಿದರು.

ಎತ್ತಿನಹೊಳೆ ಯೋಜನೆಯ ಅಕ್ಕಪಕ್ಕದ ಕೆರೆಗಳಿಗೆ ನೀರು ಹರಿಸಬೇಕು. ಅರಸೀಕೆರೆ, ಕೊರಟಗೆರೆ, ಮಧುಗಿರಿ ವ್ಯಾಪ್ತಿಯಲ್ಲಿ ಇದಕ್ಕೆ ಅವಕಾಶವಿದೆ. ಉಳಿದ ತಾಲೂಕುಗಳ ಕೆರೆಗಳಿಗೂ ನೀರು ತುಂಬಿಸಬೇಕು ಎಂದು ಸರಕಾರಕ್ಕೆ ಮನವಿ ಮಾಡಿದ್ದೇವೆ ಎಂದು ಅವರು ಹೇಳಿದರು.

ಕೆರೆಗಳನ್ನು ತುಂಬಿಸುವ ಯೋಜನೆಗಾಗಿ ಒಂದು ಟಿಎಂಸಿ ನೀರು ಮೀಸಲಿಡಬೇಕು. ಇಲ್ಲವಾದರೆ ನಾವು ಉಗ್ರ ಹೋರಾಟ ಮಾಡಬೇಕಾಗುತ್ತದೆ. ಭೂ ಸ್ವಾಧೀನ ಮಾಡದೇ ಕಾಮಗಾರಿ ಕೈಗೊಂಡಿರುವ ಹಿನ್ನೆಲೆಯಲ್ಲಿ, ಅದನ್ನು ವಿರೋಧಿಸಿ ಗುತ್ತಿಗೆದಾರರನ್ನು ವಾಪಸ್ ಕಳುಹಿಸಿದ್ದೇವೆ ಎಂದು ಮಾಧುಸ್ವಾಮಿ ತಿಳಿಸಿದರು.

ಕುಣಿಗಲ್‌ಗೆ ನೀರು ಬಿಡಲು ಒಪ್ಪಿದ್ದಕ್ಕೆ ಧ್ಯನವಾದ

ಕುಣಿಗಲ್‌ಗೆ ನೀರು ಹರಿಸಲು ಒಪ್ಪಿಗೆ ಸೂಚಿಸಿರುವ ರಾಜ್ಯ ಸರಕಾರಕ್ಕೆ ಧನ್ಯವಾದಗಳು. ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಸಂಸದ ಡಿ.ಕೆ.ಸುರೇಶ್ ಅವರು ತಾಲೂಕಿಗೆ ಆಗಿರುವ ಅನ್ಯಾಯ ಸರಿಪಡಿಸುತ್ತಾರೆ ಎಂಬ ವಿಶ್ವಾಸವಿದೆ ಎಂದು ಕುಣಿಗಲ್ ಕ್ಷೇತ್ರದ ಕಾಂಗ್ರೆಸ್ ಶಾಸಕ ರಂಗನಾಥ್ ಹೇಳಿದರು.

ಹೇಮಾವತಿ ಮೂಲಕ ತುಮಕೂರು ಜಿಲ್ಲೆಗೆ ಹರಿಸುತ್ತಿರುವ 24.5 ಟಿಎಂಸಿ ನೀರಿನಲ್ಲಿ 3 ಟಿಎಂಸಿ ನೀರು ಕುಣಿಗಲ್‌ಗೆ ಬೇಕು. ನಾವು ನಮ್ಮ ಪಾಲು ಕೇಳುತ್ತಿದ್ದೇವೆ. ಜಿಲ್ಲೆಯ ಎಲ್ಲ ಶಾಸಕರಿಗೂ ಈ ವಿಚಾರವನ್ನು ಮನವರಿಕೆ ಮಾಡಿಕೊಡುತ್ತೇವೆ ಎಂದು ರಂಗನಾಥ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News