ಜೂನಿಯರ್ ಪುರುಷರ ಹಾಕಿ ತಂಡದ ಕೋಚ್ ಫೆಲಿಕ್ಸ್ ಉಚ್ಚಾಟನೆ

Update: 2019-06-19 18:33 GMT

ಹೊಸದಿಲ್ಲಿ, ಜೂ.19: ಮ್ಯಾಡ್ರಿಡ್‌ನಲ್ಲಿ ಇತ್ತೀಚೆಗೆ ಕೊನೆಗೊಂಡ 8 ರಾಷ್ಟ್ರಗಳ ಹಾಕಿ ಟೂರ್ನಮೆಂಟ್‌ನಲ್ಲಿ ಆರನೇ ಸ್ಥಾನ ಪಡೆದ ಭಾರತ ನಿರಾಶಾದಾಯಕ ಪ್ರದರ್ಶನ ನೀಡಿತ್ತು. ಈ ಹಿನ್ನೆಲೆಯಲ್ಲಿ ಹಾಕಿ ಇಂಡಿಯಾ ಬುಧವಾರ ಜೂನಿಯರ್ ಪುರುಷರ ಹಾಕಿ ತಂಡದ ಕೋಚ್ ಜೂಡ್ ಫೆಲಿಕ್ಸ್‌ರನ್ನು ಉಚ್ಚಾಟನೆಗೊಳಿಸಿದೆ.

ಹಾಕಿ ಇಂಡಿಯಾ ಬುಧವಾರ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಜೂನಿಯರ್ ಪುರುಷರ ಹಾಕಿ ತಂಡದ ಕೋಚ್ ಹುದ್ದೆಗೆ ಜಾಹೀರಾತನ್ನು ನೀಡಿದ ಬಳಿಕ ಈ ಬೆಳವಣಿಗೆ ನಡೆದಿದೆ.

ಹಾಲಿ ಜೂನಿಯರ್ ವಿಶ್ವ ಚಾಂಪಿಯನ್ ಭಾರತ ಮ್ಯಾಡ್ರಿಡ್‌ನಲ್ಲಿ ಇತ್ತೀಚೆಗೆ ನಡೆದ 8 ರಾಷ್ಟ್ರಗಳ ಟೂರ್ನಿಯಲ್ಲಿ ಸತತವಾಗಿ ಕಳಪೆ ಪ್ರದರ್ಶನ ನೀಡಿದ ಬಳಿಕ ಜೂಡ್‌ರನ್ನು ಕೋಚ್ ಹುದ್ದೆಯಿಂದ ಕೆಳಗಿಳಿಸಿರುವ ನಿರ್ಧಾರ ನಿರೀಕ್ಷಿತವಾಗಿತ್ತು ಎಂದು ಹಾಕಿ ಇಂಡಿಯಾ ಮೂಲಗಳು ತಿಳಿಸಿವೆ.

ಈ ತಿಂಗಳಾರಂಭದಲ್ಲಿ ನಡೆದ ಟೂರ್ನಮೆಂಟ್‌ನಲ್ಲಿ ಭಾರತೀಯ ತಂಡ ಆಸ್ಟ್ರೇಲಿಯ ವಿರುದ್ಧ 0-4, ನೆದರ್ಲೆಂಡ್ ವಿರುದ್ಧ 2-3, ಸ್ಪೇನ್ ವಿರುದ್ಧ 1-3 ಹಾಗೂ ಗ್ರೇಟ್ ಬ್ರಿಟನ್ ವಿರುದ್ಧ 1-2 ಅಂತರದಿಂದ ಸೋಲುಂಡಿತ್ತು. ಟೂರ್ನಿಯಲ್ಲಿ ಆಸ್ಟ್ರೀಯ ವಿರುದ್ಧ ಮಾತ್ರ 4-2 ಅಂತರದಿಂದ ಏಕೈಕ ಗೆಲುವು ದಾಖಲಿಸಿತ್ತು. ಜೂಡ್ ಫೆಲಿಕ್ಸ್ 2017ರ ಆಗಸ್ಟ್‌ನಲ್ಲಿ ಭಾರತದ ಜೂನಿಯರ್ ಹಾಕಿ ತಂಡದ ಕೋಚ್ ಆಗಿ ನೇಮಕಗೊಂಡಿದ್ದರು. ‘‘ನಾನು ಇನ್ನು ಮುಂದೆ ಜೂನಿಯರ್ ತಂಡದ ಕೋಚ್ ಆಗಿರುವುದಿಲ್ಲ. 2-3 ದಿನಗಳ ಹಿಂದೆ ಇ-ಮೇಲ್ ಮೂಲಕ ನನಗೆ ಈ ವಿಚಾರವನ್ನು ತಿಳಿಸಲಾಗಿದೆ’’ ಎಂದು ಫೆಲಿಕ್ಸ್ ಹೇಳಿದ್ದಾರೆ.

‘‘ಪ್ರತಿ ಟೂರ್ನಮೆಂಟ್‌ನ ವರದಿ ಸಲ್ಲಿಸುವುದು ಸಂಪ್ರದಾಯ. ನಾನು ಇನ್ನು ಒಂದೆರಡು ದಿನಗಳಲ್ಲಿ ವರದಿ ಸಲ್ಲಿಸುವೆ’’ ಎಂದು ಭಾರತದ ಮಾಜಿ ನಾಯಕ ಫೆಲಿಕ್ಸ್ ಹೇಳಿದ್ದಾರೆ.

ಫೆಲಿಕ್ಸ್ ಮಾರ್ಗದರ್ಶನದಲ್ಲಿ ಭಾರತ 8 ರಾಷ್ಟ್ರಗಳ ಹಾಕಿ ಟೂರ್ನಮೆಂಟ್‌ನಲ್ಲಿ ಸೋಲುವ ಮೊದಲು ಕಳೆದ ವರ್ಷ ಸುಲ್ತಾನ್ ಆಫ್ ಜೊಹೊರ್ ಕಪ್ ಫೈನಲ್‌ನಲ್ಲಿ ಗ್ರೇಟ್ ಬ್ರಿಟನ್ ವಿರುದ್ಧ 2-3 ಅಂತರದಿಂದ ಸೋತಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News