ಹೆಲ್ಮೆಟ್‌ಗೆ ಬೌನ್ಸರ್ ಅಪ್ಪಳಿಸಿದರೂ ಬ್ಯಾಟಿಂಗ್ ಮುಂದುವರಿಸಿದ ಅಫ್ಘಾನ್ ಆಟಗಾರ ಶಾಹಿದಿ!

Update: 2019-06-19 18:36 GMT

 ಮ್ಯಾಂಚೆಸ್ಟರ್, ಜೂ.19: ಇಂಗ್ಲೆಂಡ್ ವಿರುದ್ಧ ಮಂಗಳವಾರ ನಡೆದ ವಿಶ್ವಕಪ್ ಪಂದ್ಯದ ವೇಳೆ ಮಾರ್ಕ್ ವುಡ್ ಎಸೆದ ಬೌನ್ಸರ್‌ವೊಂದು ಅಫ್ಘಾನಿಸ್ತಾನದ ಹಶ್ಮತುಲ್ಲಾ ಶಾಹಿದಿ ಹೆಲ್ಮೆಟ್‌ಗೆ ಅಪ್ಪಳಿಸಿತ್ತು. ಹೆಲ್ಮೆಟ್ ಬದಲಿಸಿ ಬ್ಯಾಟಿಂಗ್ ಮುಂದುವರಿಸಿದ ಶಾಹಿದಿ 76 ರನ್ ಗಳಿಸಿ ತಂಡದ ಪರ ಸರ್ವಾಧಿಕ ಸ್ಕೋರ್ ಗಳಿಸಿದ್ದರು. ತನ್ನ ಈ ಸಾಹಸಕ್ಕೆ ತಾಯಿಯೇ ಸ್ಫೂರ್ತಿ ಎಂದು ಶಾಹಿದಿ ಹೇಳಿದ್ದಾರೆ.

  ವೇಗಿ ವುಡ್ ಗಂಟೆಗೆ 90 ಕಿ.ಮೀ.ವೇಗದಲ್ಲಿ ಎಸೆದ ಚೆಂಡು ಶಾಹಿದಿ ಹೆಲ್ಮೆಟ್‌ನ ಒಂದು ಬದಿಗೆ ಅಪ್ಪಳಿಸಿತ್ತು. ಆಗ ತಕ್ಷಣವೇ ಮೈದಾನದಲ್ಲಿ ಕುಸಿದುಬಿದ್ದರು. 24 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದ ಶಾಹಿದಿ ಗಾಯಗೊಂಡು ನಿವೃತ್ತಿಯಾಗುತ್ತಾರೆಂದು ನಿರೀಕ್ಷಿಸಲಾಗಿತ್ತು. ಆದರೆ, ಅವರು ಹೊಸ ಹೆಲ್ಮೆಟ್‌ನ್ನು ಧರಿಸಿ ಬ್ಯಾಟಿಂಗ್ ಮುಂದುವರಿಸಿದರು. 150 ರನ್‌ನಿಂದ ಸೋತ ಪಂದ್ಯದಲ್ಲಿ ಅಫ್ಘಾನ್‌ನ ಪರ ಏಕಾಂಗಿ ಹೋರಾಟ ನೀಡಿದರು.

 ‘‘ನಾನು ಬೌನ್ಸರ್ ಹೊಡೆತದಿಂದ ಬೇಗನೆ ಚೇತರಿಸಿಕೊಳ್ಳಲು ನನ್ನ ತಾಯಿಯೇ ಕಾರಣ. ನಾನು ಕಳೆದ ವರ್ಷ ನನ್ನ ತಂದೆಯನ್ನು ಕಳೆದುಕೊಂಡಿದ್ದೆ. ತಾಯಿಗೆ ನೋವುಂಟು ಮಾಡಲು ನನಗೆ ಇಷ್ಟವಾಗಿಲ್ಲ. ನನ್ನ ಪಂದ್ಯವನ್ನು ಇಡೀ ಕುಟುಂಬ ಸದಸ್ಯರು ವೀಕ್ಷಿಸಿದ್ದರು. ನನ್ನ ಸಹೋದರ ಮೈದಾನಕ್ಕೆ ಬಂದು ವೀಕ್ಷಿಸಿದ್ದ. ನನ್ನ ಕುರಿತು ಅವರು ಚಿಂತಿಸುವುದು ನಾನು ಬಯಸುವುದಿಲ್ಲ. ಬೌನ್ಸರ್ ಹೆಲ್ಮೆಟ್‌ಗೆ ಹೊಡೆದ ಸಂದರ್ಭದಲ್ಲಿ ಐಸಿಸಿ ವೈದ್ಯರು ಹಾಗೂ ತಂಡದ ಫಿಸಿಯೋ ನನ್ನ ಬಳಿ ಬಂದಿದ್ದರು. ಹೆಲ್ಮೆಟ್‌ನ ಮಧ್ಯಭಾಗ ಒಡೆದುಹೋಗಿತ್ತು. ಕ್ರೀಸ್ ತೊರೆದು ಹೋಗಿ ಎಂದು ವೈದ್ಯರು ನನಗೆ ಸಲಹೆ ನೀಡಿದ್ದರು. ಈ ಕ್ಷಣದಲ್ಲಿ ನನ್ನ ಸಹ ಆಟಗಾರರನ್ನು ಬಿಟ್ಟು ಹೋಗಲಾರೆ. ನನಗೆ ನನ್ನ ತಂಡ ಬೇಕು. ಬ್ಯಾಟಿಂಗ್‌ನ್ನು ಮುಂದುವರಿಸುವೆ ಎಂದು ಹೇಳಿದ್ದೆ. ಪಂದ್ಯ ಮುಗಿದ ಬಳಿಕ ಐಸಿಸಿ ವೈದ್ಯರ ಬಳಿ ಹೋದೆ. ಅವರೊಂದಿಗೆ ಮಾತನಾಡಿದೆ. ಅವರು ನನ್ನನ್ನು ಪರೀಕ್ಷಿಸಿ ಎಲ್ಲವೂ ಸರಿಯಾಗಿದೆ ಎಂದು ಹೇಳಿದರು. ದೇವರ ದಯೆ ನನ್ನ ಮೇಲಿತ್ತು ಎಂದು ಶಾಹಿದಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News