1990ರ ಕಸ್ಟಡಿ ಸಾವು ಪ್ರಕರಣ: ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಗೆ ಜೀವಾವಧಿ ಶಿಕ್ಷೆ

Update: 2019-06-20 16:14 GMT

ಹೊಸದಿಲ್ಲಿ, ಜೂ.20: 2002ರ ಗುಜರಾತ್‌ ಹತ್ಯಾಕಾಂಡದಲ್ಲಿ ಅಂದಿನ ಮುಖ್ಯಮಂತ್ರಿ ನರೇಂದ್ರ ಮೋದಿಯವರ ಪಾತ್ರವನ್ನು ಪ್ರಶ್ನಿಸಿ ಸರ್ವೋಚ್ಚ ನ್ಯಾಯಾಲಯದಲ್ಲಿ ಅಫಿದಾವಿತ್ ಸಲ್ಲಿಸಿದ್ದ ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಅವರಿಗೆ 30 ವರ್ಷ ಹಳೆಯ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

1990ರಲ್ಲಿ ಪೊಲೀಸ್ ಕಸ್ಟಡಿಯಲ್ಲಿ ನಡೆದ ಹಿಂಸಾಚಾರ ಮತ್ತು ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್‌ನ ಜಾಮ್‌ನಗರದ ಸೆಶನ್ಸ್ ನ್ಯಾಯಾಲಯ ಈ ತೀರ್ಪು ನೀಡಿದೆ. ಪ್ರಭುದಾಸ್ ವೈಷ್ಣವಿ ಎಂಬ ವ್ಯಕ್ತಿಯ ಸಾವಿಗೆ ಸಂಬಂಧಿಸಿ ಅವರನ್ನು ಪೊಲೀಸ್ ಕಸ್ಟಡಿಯಲ್ಲಿ ಹಿಂಸೆಗೆ ಗುರಿ ಮಾಡಲಾಗಿದೆ ಎಂಬ ಪ್ರಕರಣದಲ್ಲಿ ಅಂದು ಜಾಮ್‌ನಗರದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಭಟ್ ಅವರು ತಪ್ಪಿತಸ್ಥ ಎಂದು ಗುರುವಾರ ನ್ಯಾಯಾಲಯ ತೀರ್ಪು ನೀಡಿದೆ. ಪ್ರಕರಣದ ಇನ್ನೊರ್ವ ಆರೋಪಿ ಪೊಲೀಸ್ ಅಧಿಕಾರಿ ಪ್ರವೀಣ್ ಸಿನ್ಹ ಝಾಲಾ ಅವರೂ ತಪ್ಪಿತಸ್ಥರೆಂದು ನ್ಯಾಯಾಲಯ ತಿಳಿಸಿದೆ.

 ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302ರ ಅಡಿಯಲ್ಲಿ ಇಬ್ಬರು ಆರೋಪಿಗಳಿಗೆ ಶಿಕ್ಷೆ ವಿಧಿಸಲಾಗಿದೆ ಎಂದು ವಿಶೇಷ ಸಾರ್ವಜನಿಕ ಅಭಿಯೋಜಕ ತುಷಾರ್ ಗೋಕನಿ ಮತ್ತು ಮಧು ಮೆಹ್ತಾ ಮಾಧ್ಯಮಗಳಿಗೆ ತಿಳಿಸಿದ್ದಾರೆ. 1990 ನವೆಂಬರ್‌ನಲ್ಲಿ ಬಿಜೆಪಿ ಮುಖಂಡ ಎಲ್.ಕೆ ಅಡ್ವಾಣಿಯವರು ತಮ್ಮ ರಥಯಾತ್ರೆಯನ್ನು ಜಮ್‌ಜೋಧ್‌ಪುರ ಪಟ್ಟಣದ ಮೂಲಕ ಕೊಂಡೊಯ್ದ ಸಂದರ್ಭದಲ್ಲಿ ಗಲಭೆ ನಡೆಸಿದ ಆರೋಪದಲ್ಲಿ 150ಕ್ಕೂ ಅಧಿಕ ಮಂದಿಯನ್ನು ಬಂಧಿಸಲಾಗಿತ್ತು. ಬಂಧಿತರ ಪೈಕಿ ಓರ್ವನಾಗಿದ್ದ ವೈಷ್ಣವಿಯನ್ನು ಒಂಬತ್ತು ದಿನಗಳ ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು. ಬಿಡುಗಡೆಯ ಹತ್ತುದಿನಗಳ ನಂತರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆತ ಮೃತಪಟ್ಟಿದ್ದ. ತನ್ನ ಸಹೋದರನಿಗೆ ಕಸ್ಟಡಿಯಲ್ಲಿ ಚಿತ್ರಹಿಂಸೆ ನೀಡಲಾಗಿದೆ ಎಂದು ಆರೋಪಿಸಿದ ವೈಷ್ಣವಿಯ ಸಹೋದರ ಭಟ್ ಹಾಗೂ ಇತರ ಎಂಟು ಪೊಲೀಸರ ವಿರುದ್ಧ ದೂರು ದಾಖಲಿಸಿದ್ದರು.

ಅನುಮತಿ ಪಡೆಯದೆ ಕರ್ತವ್ಯಕ್ಕೆ ಗೈರಾಗಿದ್ದಾರೆ ಮತ್ತು ಸರಕಾರಿ ವಾಹನವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿ ಸಂಜೀವ್ ಭಟ್ ಅವರನ್ನು 2011ರಲ್ಲಿ ಸೇವೆಯಿಂದ ಅಮಾನತುಗೊಳಿಸಲಾಗಿತ್ತು. 2015ರ ಆಗಸ್ಟ್‌ನಲ್ಲಿ ಅವರನ್ನು ಸೇವೆಯಿಂದ ವಜಾಗೊಳಿಸಲಾಯಿತು. ಇದೇ ವರ್ಷ, ಗುಜರಾತ್ ಸರಕಾರ ತನ್ನ ವಿರುದ್ಧ ಸಲ್ಲಿಸಿರುವ ದೂರಿನ ತನಿಖೆಗೆ ವಿಶೇಷ ತನಿಖಾ ತಂಡವನ್ನು ರಚಿಸಬೇಕು ಎನ್ನುವ ಭಟ್ ಮನವಿಯನ್ನು ಸರ್ವೋಚ್ಚ ನ್ಯಾಯಾಲಯ ತಿರಸ್ಕರಿಸಿತ್ತು.

ಈ ಪ್ರಕರಣದಲ್ಲಿ 300 ಸಾಕ್ಷಿಗಳನ್ನು ಪಟ್ಟಿ ಮಾಡಲಾಗಿದ್ದರೂ ಕೇವಲ 32 ಸಾಕ್ಷಿಗಳನ್ನಷ್ಟೇ ವಿಚಾರಿಸಲಾಗಿದೆ. ಅಪರಾಧದ ತನಿಖೆ ನಡೆಸುತ್ತಿದ್ದ ಸಂದರ್ಭದಲ್ಲಿ ನಮ್ಮ ತಂಡದಲ್ಲಿದ್ದ ಮೂವರು ಪೊಲೀಸರೂ ಸೇರಿದಂತೆ ಹಲವು ಪ್ರಮುಖ ಸಾಕ್ಷಿಗಳನ್ನು ಕೈಬಿಡಲಾಗಿದೆ. ಹಾಗಾಗಿ ಈ ಪ್ರಕರಣದಲ್ಲಿ ಇನ್ನೂ 11 ಸಾಕ್ಷಿಗಳ ವಿಚಾರಣೆ ನಡೆಸಬೇಕೆಂದು ಕೋರಿ ಭಟ್ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News